ADVERTISEMENT

ಚುನಾವಣೆ: ಮಳೂರಿನಲ್ಲಿ ಎಚ್‌ಡಿಕೆ ಪ್ರಚಾರ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2011, 19:30 IST
Last Updated 3 ಏಪ್ರಿಲ್ 2011, 19:30 IST

ರಾಮನಗರ: ‘ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಅವರ ಮಕ್ಕಳು ಅಕ್ರಮ ಆಸ್ತಿ ಸಂಪಾದಿಸಿದ್ದರೆ ಒಕ್ಕಲಿಗ ಸಮುದಾಯ ನಮ್ಮ ಪರ ನಿಲ್ಲುತ್ತಿರಲಿಲ್ಲ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಚನ್ನಪಟ್ಟಣ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಸಿಂ.ಲಿಂ.ನಾಗರಾಜು ಅವರ ಪರವಾಗಿ ಭಾನುವಾರ ಮಳೂರಿನಲ್ಲಿ ಪ್ರಚಾರ ನಡೆಸಿದ ಅವರು ನಂತರ ಸುದ್ದಿಗಾರರ ಜತೆ ಮಾತನಾಡಿದರು.

‘ಒಕ್ಕಲಿಗರು ಸ್ವಾಭಿಮಾನಿಗಳ ಸಂಕೇತ. ತಮ್ಮ ಸಮುದಾಯದಲ್ಲಿ ತಪ್ಪು ಮಾಡಿದವರನ್ನು ಅವರು ದಂಡಿಸಿ, ಶಿಕ್ಷಿಸುತ್ತಾರೆ. ಆದರೆ ಇದೇ ಮಾತನ್ನು ಬೇರೆ ಸಮುದಾಯದ ಬಗ್ಗೆ ಹೇಳಲು ಆಗುವುದಿಲ್ಲ’ ಎಂದು ಅವರು ಹೇಳಿದರು. ‘ಪಾಪದ ಆಸ್ತಿಗಳಿಸಿರುವ ಮುಖ್ಯಮಂತ್ರಿ ಅವರ ಪರ ಸಮುದಾಯವೊಂದು ನಿಂತಿರುವುದು ಎಷ್ಟರ ಮಟ್ಟಿಗೆ ಸರಿ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಯಾವ ಜ್ಯೋತಿಷಿ ಮಾತನ್ನೂ ಕೇಳಿ ನಾನು ಉಪ ಚುನಾವಣಾ ಕಣದಿಂದ ಹಿಂದೆ ಸರಿದಿಲ್ಲ. ಪಕ್ಷದ ಕಾರ್ಯಕರ್ತರು ಹಾಗೂ ಹಿತ ಚಿಂತಕರ ಮಾತಿಗೆ ಬೆಲೆ ಕೊಟ್ಟು ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವೆ ಎಂದರು.

ಜೆಡಿಎಸ್ ಅಭ್ಯರ್ಥಿಯನ್ನು ‘ಡಮ್ಮಿ’ ಅಭ್ಯರ್ಥಿ ಎಂದು ಬಿಜೆಪಿ ಜರಿಯುತ್ತಿದೆ. ಹಾಗಾದರೆ ಸಚಿವ ಸಂಪುಟದ ಸಚಿವರೆಲ್ಲ ಇಲ್ಲಿಗೆ ದೌಡಾಯಿಸಿ ಬಂದು ಮೊಕ್ಕಾಂ ಹೂಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು. ಬಿಜೆಪಿಗೂ ಜೆಡಿಎಸ್ ಅಭ್ಯರ್ಥಿಯ ಶಕ್ತಿ, ಸಾಮರ್ಥ್ಯ ಏನು ಎಂಬುದು ಗೊತ್ತಿರುವ ಕಾರಣ ಹೀಗೆ ಚಡಪಡಿಸುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.