ADVERTISEMENT

ಜನವರಿ ಮೊದಲವಾರ ಸಂಭಾವ್ಯ ಪಟ್ಟಿ-: ಪರಮೇಶ್ವರ

ಲೋಕಸಭಾ ಚುನಾವಣೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2013, 19:30 IST
Last Updated 22 ಡಿಸೆಂಬರ್ 2013, 19:30 IST

ಹುಬ್ಬಳ್ಳಿ: ‘ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿಯನ್ನು ಜನವರಿ ಮೊದಲ ವಾರದಲ್ಲಿ ಪಕ್ಷದ ಹೈಕಮಾಂಡ್‌ಗೆ ಸಲ್ಲಿಸಲಾಗುವುದು. ಕೊನೆಯ ವಾರದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ ಇದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಹೇಳಿದರು.

‘ಗೆಲ್ಲುವ ಅಭ್ಯರ್ಥಿಗಳಿಗಾಗಿ ಪಕ್ಷ ಹುಡುಕಾಟ ನಡೆಸಿದೆ. ಕ್ರಿಮಿನಲ್‌ ಹಿನ್ನೆಲೆ ಇಲ್ಲದ ಸಚ್ಚಾರಿತ್ರ್ಯವುಳ್ಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಯುವಕರು, ಹೊಸ ಮುಖಗಳಿಗೂ ಈ ಬಾರಿ ಅವಕಾಶ ದೊರೆಯಲಿದೆ. ಮಹಿಳೆಯರಿಗೂ ಟಿಕೆಟ್‌ ನೀಡುವ ಕುರಿತು ಚಿಂತನೆ ನಡೆದಿದೆ’ ಎಂದು ಅವರು ಭಾನುವಾರ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

‘ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳಿಗೆ ನೇಮಕಾತಿ ಸಂಬಂಧ ಸದ್ಯ ಚರ್ಚೆ ನಡೆದಿದೆ. ತಮ್ಮ ಕ್ಷೇತ್ರದ  ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಕಾರ್ಯಕರ್ತರಿಂದ ಒತ್ತಡ ಬರುತ್ತಿದೆ. ಎಲ್ಲವನ್ನೂ ಪಕ್ಷದ ಮುಖಂಡರ ಗಮನಕ್ಕೆ ತರಲಾಗಿದೆ. ಲೋಕಸಭೆಗೆ ಮುನ್ನ ಸಂಪುಟ ವಿಸ್ತರಣೆ ಮಾಡಬೇಕೆ, ಬೇಡವೇ ಎಂಬ ಕುರಿತು ಅಂತಿಮವಾಗಿ ಮುಖ್ಯಮಂತ್ರಿಗಳು ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದು ಪರಮೇಶ್ವರ ಹೇಳಿದರು.

ಸರ್ಕಾರ ಹಾಗೂ ಪಕ್ಷದ ನಾಯಕರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಉತ್ತಮ ಸಮನ್ವಯ ಹೊಂದಿದ್ದೇವೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT