ADVERTISEMENT

ಜನಸಾಮಾನ್ಯರಿಗೆ ತುಸು ನಿರಾಳ, ರೈತರಿಗೆ ಶೂನ್ಯ ಬಡ್ಡಿ ಸಾಲ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 8:20 IST
Last Updated 21 ಮಾರ್ಚ್ 2012, 8:20 IST

ಬೆಂಗಳೂರು (ಪಿಟಿಐ/ಐಎಎನ್‌ಎಸ್): ಅತ್ತ ಕೇಂದ್ರ ಬಜೆಟ್ ಜನಸಾಮಾನ್ಯರ ಮೇಲಿನ ತೆರಿಗೆಯ ಹೊರೆಯನ್ನು ಏರಿಸಿದ್ದರೆ, ಇತ್ತ ರಾಜ್ಯ ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ತೆರಿಗೆ ಹೊರೆಯಿಂದ ತುಸು ವಿನಾಯಿತಿ ದೊರೆತಿದ್ದು, ಹಲವು ವಸ್ತುಗಳು ಅಗ್ಗವಾಗಲಿದೆ. ಜತೆಗೆ ವೇತನ ಆಯೋಗದ ವರದಿಯನ್ನೂ ಸರ್ಕಾರ ಅಂಗೀಕರಿಸುವ ಮೂಲಕ ಲಕ್ಷಾಂತರ ಸರ್ಕಾರಿ ನೌಕರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಮುದ್ರಾಂಕ ಶುಲ್ಕ ಇಳಿಕೆ, ಸಿದ್ದ ಉಡುಪಿನ ಮೇಲಿನ ತೆರಿಗೆ ಇಳಿಕೆಯಂತಹ ಹಲವು ಜನಪಯೋಗಿ ಕಾರ್ಯಕ್ರಮಗಳನ್ನು ಪ್ರಕಟಿಸಿರುವ ಸದಾನಂದಗೌಡರು ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವುದಾಗಿ ಘೋಷಿಸುವ ಮೂಲಕ ಹೆಚ್ಚು ರೈತ ಸ್ನೇಹಿ ಆಗುವತ್ತ ದಾಪುಗಾಲಿಟ್ಟಿದ್ದಾರೆ.

ಮುಖ್ಯವಾದ ತೀರ್ಮಾನ ಎಂದರೆ ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ. ಅಲ್ಪಾವಧಿ ಬೆಳೆ ಸಾಲಕ್ಕೆ ಒಂದು ಲಕ್ಷ ರೂಗಳವರೆಗೆ ಬಡ್ಡಿ ರಹಿತ ಸಾಲ ನೀಡುವುದರ ಜತೆಗೆ ಇಸ್ರೇಲಿ ತಂತ್ರಜ್ಞಾನದ ಉಪಯೋಗ ಪಡೆದು ರಾಜ್ಯದ ಹಲವೆಡೆ ದಾಳಿಂಬೆ, ಮಾವು, ತರಕಾರಿ, ತೊಗರಿ ಪಾಕ್ ರಚನೆಯ ಮೂಲಕ ಕೃಷಿಯನ್ನು ಆಧುನೀಕರಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಮುಖ್ಯವಾಗಿ ಮುದ್ರಾಂಕ ಶುಲ್ಕವನ್ನು ಶೇ. 1 ಕ್ಕೆ ಇಳಿಸಿದ್ದು, ಡಿಸೇಲ್ ಮೇಲಿನ ತೆರಿಗೆಯನ್ನು ಇಳಿಕೆ ಮಾಡಿರುವುದು, ಸಿದ್ದ ಉಡುಪಿನ ಮೇಲಿನ ತೆರಿಗೆ ಕಡಿತ, ಜೀವನಾವಶ್ಯಕ ವಸ್ತುಗಳಾದ ಭತ್ತ, ಅಕ್ಕಿ, ಗೋಧಿ, ಬೇಳೆಕಾಳುಗಳನ್ನು ಮೌಲ್ಯವರ್ಧಿತ ತೆರಿಗೆ (ವ್ಯಾಟ್)ಯಿಂದ ಈ ವರ್ಷವೂ ಹೊರಗಿಟ್ಟಿರುವುದರಿಂದ  ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯ ತುಸು ನಿರಾಳವಾಗುವಂತೆ ಮಾಡಿದೆ.

ಹಿಂದುಳಿದ ವರ್ಗದವರಿಗೆ ವಿಶೇಷ ಅನುದಾನಗಳನ್ನು ಪ್ರಕಟಿಸಿರುವ ಮುಖ್ಯಮಂತ್ರಿ ಅವರು ಕೆಲವು ದೇವಾಲಯಗಳಿಗೆ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದ್ದಾರೆ.

ಪ್ರತಿವರ್ಷದಂತೆ ಈ ವರ್ಷವೂ ಸಿಗರೇಟು, ಬೀಡಿಗಳು ಸೇದುವವರ ಕಿಸೆಯನ್ನು ಹೆಚ್ಚು ಸುಡಲಿದೆ. ಹಣ್ಣಿನಿಂದ ತಯಾರಿಸಿದ ಮದ್ಯವನ್ನು ಬಿಟ್ಟರೆ ಉಳಿದ ಮದ್ಯಪಾನೀಯಗಳು ತುಸು ಏರಿಕೆಯಾಗಲಿವೆ. ಅಲ್ಲದೆ ಸಭೆ-ಸಮಾರಂಭಗಳು, ಮದುವೆ, ಆರತಕ್ಷತೆಯ ಭವನಗಳ ಮೇಲೆ ಇನ್ನಷ್ಟು ತೆರಿಗೆ ಏರಿ ಆ ಮೂಲಕ ಹೆಚ್ಚು ಆದಾಯ ಪಡೆಯುವ ಉದ್ದೇಶ ಹೊಂದಲಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.