ADVERTISEMENT

ಜನ ವಿರೋಧಿ ನೀತಿ: ಸಿಪಿಎಂ ಆರೋಪ

​ಪ್ರಜಾವಾಣಿ ವಾರ್ತೆ
Published 8 ಜನವರಿ 2012, 19:30 IST
Last Updated 8 ಜನವರಿ 2012, 19:30 IST

ಚಿಕ್ಕಬಳ್ಳಾಪುರ: `ಕಾಂಗ್ರೆಸ್, ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕೇಂದ್ರದಲ್ಲಿ ಆಡಳಿತ ನಡೆಸಿದ ಎರಡೂ ಪಕ್ಷಗಳು ಜನವಿರೋಧಿ ಆರ್ಥಿಕ ನೀತಿಯನ್ನೇ ಜಾರಿಗೆ ತಂದರೇ ಹೊರತು ಜನಪರವಾದ ಕಾರ್ಯಗಳನ್ನು ಮಾಡಲಿಲ್ಲ~ ಎಂದು ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯ ಮತ್ತು ಸಂಸದ ಸೀತಾರಾಂ ಯೆಚೂರಿ ಆರೋಪಿಸಿದರು.

ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಸಿಪಿಎಂ 20ನೇ ರಾಜ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿ, `ಎರಡೂ ಪಕ್ಷಗಳು ಹಗರಣ, ಭ್ರಷ್ಟಾಚಾರದ ಆರೋಪ ಎದುರಿಸುತ್ತಿವೆ. ಜನಪರ ಆಡಳಿತ ನಡೆಸುವಲ್ಲಿ ವಿಫಲವಾಗಿವೆ~ ಎಂದರು.

ಎರಡೂ ಪಕ್ಷಗಳ ನಡುವೆ ಭಾರಿ ವ್ಯತ್ಯಾಸವೇನಿಲ್ಲ, ಲಕ್ಷಾಂತರ ಕೋಟಿ ರೂಪಾಯಿ ಹಗರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಯುಪಿಎ ಸರ್ಕಾರದ ಅಂಗಪಕ್ಷಗಳ ಸಚಿವರು ಜೈಲು ಸೇರುತ್ತಿದ್ದರೆ, ಇತ್ತ ಕರ್ನಾಟಕದಲ್ಲೂ ಬಿಜೆಪಿ ಸರ್ಕಾರದ ಸಚಿವರು ಜೈಲುವಾಸ ಅನುಭವಿಸಿದ್ದಾರೆ. ಕೇಂದ್ರದ ಯುಪಿಎ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತುವ ಬಿಜೆಪಿ ಕರ್ನಾಟಕದಲ್ಲಿ ತನ್ನ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಚಕಾರವೆತ್ತುವುದಿಲ್ಲ~ ಎಂದು ಟೀಕಿಸಿದರು.

ADVERTISEMENT

`ಪ್ರಕಾಶಿಸುವ ಇಂಡಿಯಾ~ ಮತ್ತು `ಸಂಕಟಮಯ ಇಂಡಿಯಾ~ ಹೆಸರಿನಲ್ಲಿ ದೇಶವು ಎರಡು ಭಾಗವಾಗಿದೆ. ಭಾರಿ ಸಂಪತ್ತು ಗಳಿಸುವ ಕೆಲವೇ ಶ್ರೀಮಂತರು ಒಂದೆಡೆಯಿದ್ದರೆ, ಮತ್ತೊಂದೆಡೆ ದಿನಕ್ಕೆ ರೂ. 20 ಗಳಿಸಲು ಆಗದಷ್ಟು ಅಪಾರ ಸಂಖ್ಯೆಯ ಬಡವರು ಇದ್ದಾರೆ. ದಿನದಿಂದ ದಿನಕ್ಕೆ ಅಂತರ ಹೆಚ್ಚುತ್ತಿದ್ದು, ಸಮಸ್ಯೆ ಗಂಭೀರವಾಗಿ ಕಾಡುತ್ತಿದೆ ಎಂದರು.

ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯ ಕೆ.ವರದರಾಜನ್, ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ವಿ.ಜೆ.ಕೆ.ನಾಯರ್, ಜಿಲ್ಲಾ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ, ರಾಜ್ಯ ಘಟಕದ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಸ್.ವೈ.ಗುರುಶಾಂತ, ಪ್ರಸನ್ನಕುಮಾರ್, ಎಸ್.ವರಲಕ್ಷ್ಮಿ, ಕೆ.ನೀಲಾ, ಜಿ.ಎನ್.ನಾಗರಾಜ್, ಮಾರುತಿ ಮಾನ್ಪಡೆ, ಜಿ.ಸಿ.ಬಯ್ಯಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಬೃಹತ್ ರ‌್ಯಾಲಿ ನಡೆಯಿತು. ಪ್ರಜಾ ನಾಟ್ಯ ಮಂಡಳಿಯ ಕಲಾವಿದರು ಕ್ರಾಂತಿಗೀತೆಗಳಿಗೆ ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.