ADVERTISEMENT

ಜಪಾನ್: ಹಿರೀಸಾವೆ ಕುಟುಂಬದ ಸಂಕಟ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 19:30 IST
Last Updated 15 ಮಾರ್ಚ್ 2011, 19:30 IST

ಹಿರೀಸಾವೆ:  ಜಪಾನ್‌ನಲ್ಲಿ ಕಳೆದ ಶುಕ್ರವಾರ ಸಂಭವಿಸಿದ ಭಾರಿ ಭೂಕಂಪ ಹಾಗೂ ಆ ಬಳಿಕ ಬಂದ ಸುನಾಮಿಯಲ್ಲಿ ಹಾಸನ ಜಿಲ್ಲೆ ಹಿರೀಸಾವೆಯ ಕುಟುಂಬವೊಂದು ಮನೆ ಕಳೆದುಕೊಂಡು ನಿರಾಶ್ರಿತವಾಗಿದ್ದು ಸಂಕಷ್ಟ ಅನುಭವಿಸುತ್ತಿದೆ.ಭಾರತೀಯ ರಾಯಭಾರಿ ಕಚೇರಿಯವರೂ ಇವರನ್ನು ಸಂಪರ್ಕಿಸದ ಕಾರಣ ಈ ಕುಟುಂಬ ಭಾರತಕ್ಕೆ ಮರಳಲೂ ಸಾಧ್ಯವಾಗದಂಥ ಸ್ಥಿತಿಯಲ್ಲಿದೆ.

ಹಿರೀಸಾವೆ ಹೋಬಳಿಯ ಜಿನ್ನೇನಹಳ್ಳಿಯ ರಂಗಪ್ಪ ಎಂಬವರ ಪುತ್ರ ಡಾ. ದಿನೇಶ್, ಅವರ ಪತ್ನಿ ನವ್ಯರಾಣಿ ಹಾಗೂ ಅವರ ಹತ್ತು ತಿಂಗಳ ಮಗು ಈಗ ನಿರಾಶ್ರಿತರ ಕೇಂದ್ರದಲ್ಲಿ ಜೀವನ ನಡೆಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಸುತ್ತಿದ್ದಾಗ ಜಪಾನ್‌ನ ಸಂಡೈ ವಿಶ್ವವಿದ್ಯಾಲಯದಿಂದ ಬಂದಿದ್ದ ವಿಜ್ಞಾನಿಯೊಬ್ಬರು ಡಾ.ದಿನೇಶ್‌ರಂಗಪ್ಪ ಅವರನ್ನು ಭೇಟಿ ಮಾಡಿ ತಮ್ಮ ವಿಶ್ವವಿದ್ಯಾಲಯಕ್ಕೆ ಬರುವಂತೆ ಆಹ್ವಾನಿಸಿದ್ದರು.

ಅದರಂತೆ ಹತ್ತು ವರ್ಷಗಳ ಹಿಂದೆ ಜಪಾನ್‌ಗೆ ಹೋಗಿದ್ದ ದಿನೇಶ್, ಅಲ್ಲಿ ಎರಡು ಪ್ರಾಜೆಕ್ಟ್‌ಗಳನ್ನು ಮುಗಿಸಿ ಅಲ್ಲಿಂದಲೂ ಪಿಎಚ್.ಡಿ ಪದವಿ ಪಡೆದಿದ್ದಾರೆ. 2006ರಲ್ಲಿ ನವ್ಯರಾಣಿ ಅವರನ್ನು ವಿವಾಹವಾಗಿದ್ದರು. ವೈದ್ಯೆಯಾಗಿರುವ ನವ್ಯರಾಣಿ ಅಲ್ಲಿ ತಮ್ಮ ವೃತ್ತಿ ಮುಂದುವರಿಸಿದ್ದರು.

ದಿನೇಶ್ ಅವರ ಸಂಡೈ ವಿ.ವಿ. ಜೊತೆಗಿನ ಹತ್ತುವರ್ಷದ ಗುತ್ತಿಗೆ ಈ ತಿಂಗಳಲ್ಲಿ ಮುಗಿದಿದ್ದು,  ಮಾ.20ರಂದು ಈ ಕುಟುಂಬ ಸ್ವದೇಶಕ್ಕೆ ಮರಳಲು ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಜೊತೆಗೆ ಹತ್ತು ತಿಂಗಳ ಮಗುವಿನ ನಾಮಕರಣ ಕಾರ್ಯಕ್ರಮವನ್ನೂ ಇಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದ್ದರು. ಈ ನಡುವೆ ಸುನಾಮಿ ಅಪ್ಪಳಿಸಿ ಇವರ ಮನೆ ಸೇರಿದಂತೆ ಎಲ್ಲ ವಸ್ತುಗಳೂ ಕೊಚ್ಚಿ ಹೋದವು.

ಕೈಯಲ್ಲಿ ಒಂದು ದಿನಕ್ಕಾಗುವಷ್ಟೂ ದುಡ್ಡಿರಲಿಲ್ಲ. ಊರಿಗೆ ಮರಳುವ ಖುಷಿಯಲ್ಲಿದ್ದ ಕುಟುಂಬ, ಒಮ್ಮಿಂದೊಮ್ಮೆಲೇ ಎಲ್ಲವನ್ನೂ ಕಳೆದುಕೊಂಡು ಈಗ ನಿರಾಶ್ರಿತರ ಕೇಂದ್ರದಲ್ಲಿ ವಿವಿಧ ದೇಶಗಳ ನಾಗರಿಕರ ಜೊತೆ ಬದುಕುವಂತಾಗಿದೆ.ಮಂಗಳವಾರ ದಿನೇಶ್ ಹಿರೀಸಾವೆಯಲ್ಲಿರುವ ತಮ್ಮ ಮನೆಗೆ ಕರೆಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಅಲ್ಲದೆ ‘ಪ್ರಜಾವಾಣಿ’ ಪ್ರತಿನಿಧಿ ಜತೆಗೂ ಮಾತನಾಡಿದ್ದಾರೆ.

ನವ್ಯರಾಣಿ ನೀಡಿರುವ ಮಾಹಿತಿ ಪ್ರಕಾರ, ‘ಘಟನೆ ನಡೆದು ಒಂದೆರಡು ದಿನಗಳಲ್ಲೇ ವಿವಿಧ ದೇಶಗಳ  ರಾಯಭಾರಿ ಕಚೇರಿಯವರು ತಮ್ಮ ತಮ್ಮ ದೇಶದ ನಾಗರಿಕರನ್ನು ರಕ್ಷಿಸಿ ಕರೆದೊಯ್ದಿದ್ದಾರೆ. ಭಾರತೀಯ ರಾಯಭಾರಿ ಕಚೇರಿಯವರು ಯಾರೂ ಇವರನ್ನು ಸಂಪರ್ಕಿಸಿಲ್ಲ. ಸಂಪರ್ಕಿಸಲು ಇವರು ಮಾಡಿದ ಪ್ರಯತ್ನವೂ ಫಲಿಸಲಿಲ್ಲ.

ದೂರದ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಭಾರತಕ್ಕೆ ಬರಬೇಕಾದರೆ ಒಂದೆರಡು ಲಕ್ಷ ರೂಪಾಯಿಯಾದರೂ ಬೇಕು.ನಮ್ಮ ಕೈಯಲ್ಲಿ ಅಷ್ಟು ಹಣವಿಲ್ಲ. ಇದರಿಂದಾಗಿ ಪುಟ್ಟ ಮಗುವಿನೊಂದಿಗೆ ಹಸಿವೆಯಿಂದ ಕಾಲ ಕಳೆಯುವಂಥ ಸ್ಥಿತಿ ನಿರ್ಮಾಣವಾಗಿದೆ’ ಎಂದು ತಿಳಿಸಿದ್ದಾರೆ. ಇಲ್ಲಿಯ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಸ್ಥಿತಿಯ ಬಗ್ಗೆ ಮಾಹಿತಿ ನೀಡುವಂತೆ ಅವರು ನಮ್ಮಲ್ಲಿ ಕೇಳಿಕೊಂಡಿದ್ದಾರೆ ಎಂದು ದಿನೇಶ್ ಅವರ ತಂದೆ ರಂಗಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.