ADVERTISEMENT

ಜಯದೇವದಲ್ಲಿ ಆಂಜಿಯೊಪ್ಲಾಸ್ಟಿ ದಸರೋತ್ಸವ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:35 IST
Last Updated 7 ಅಕ್ಟೋಬರ್ 2011, 19:35 IST

ಬೆಂಗಳೂರು: ಕೇವಲ ಐದು ದಿನಗಳಲ್ಲಿ 200 ಬಡರೋಗಿಗಳಿಗೆ ಉಚಿತವಾಗಿ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಡೆಸಿದ ಕೀರ್ತಿಗೆ ನಗರದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಪಾತ್ರವಾಗಿದೆ.

`ಆಂಜಿಯೋಪ್ಲಾಸ್ಟಿ ದಸರಾ ಉತ್ಸವ~ ಹೆಸರಿನ ಕಾರ್ಯಾಗಾರಕ್ಕೆ ಅಮೆರಿಕದ ಹೃದ್ರೋಗ ಸಂಸ್ಥೆಗಳಾದ ಡಾ.ಗೋವಿಂದರಾಜು ಸುಬ್ರಮಣಿ ಹಾರ್ಟ್ ಫೌಂಡೇಷನ್, ಮತ್ತು ಮೆಡ್ಟ್ರಾನಿಕ್ ವ್ಯಾಸ್ಕುಲರ್ ಡಿವಿಷನ್ 2 ಕೋಟಿ ರೂಪಾಯಿ ಮೌಲ್ಯದ ಸ್ಟಂಟ್‌ಗಳನ್ನು ಉಚಿತವಾಗಿ ಒದಗಿಸಿವೆ.

ಈ ಕುರಿತು ಮಾತನಾಡಿದ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್, `ಅಕ್ಟೋಬರ್ 3ರಿಂದ ಶುಕ್ರವಾರದವರೆಗೆ ಐದು ದಿನಗಳ ಕಾಲ ಕಾರ್ಯಾಗಾರ ನಡೆಯಿತು. ಇದೇ ಮೊದಲ ಬಾರಿಗೆ 200 ಜನರಿಗೆ ಕೇವಲ ಐದು ದಿನಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಪ್ರತಿಯೊಬ್ಬ ರೋಗಿಗೂ ಸುಮಾರು 50 ಸಾವಿರ ರೂಪಾಯಿಯಿಂದ ಒಂದು ಲಕ್ಷ ರೂಪಾಯಿವರೆಗೆ  ಬೆಲೆಬಾಳುವ ಸ್ಟಂಟ್‌ಗಳನ್ನು  ಉಚಿತವಾಗಿ ಅಳವಡಿಸಲಾಗಿದೆ. ಶಸ್ತ್ರಚಿಕಿತ್ಸೆಗೆ ಒಳಪಟ್ಟವರು ಬಡರೈತರು, ದಿನಗೂಲಿ ನೌಕರರು, ಬೀದಿ ಕಾರ್ಮಿಕರು ಹಾಗೂ ಅಸಹಾಯಕ ಹಿರಿಯ ನಾಗರಿಕರಾಗಿದ್ದಾರೆ~ ಎಂದು ಹೇಳಿದರು.

`ದಿನಕ್ಕೆ 40 ಶಸ್ತ್ರಚಿಕಿತ್ಸೆ ನಡೆಸುವುದು ಸುಲಭದ ಮಾತಲ್ಲ. ದಸರಾ ಹಬ್ಬದ ಹಿನ್ನೆಲೆಯಲ್ಲಿ ರಜೆ ಘೋಷಿಸಲಾಗಿದ್ದರೂ ಸಂಸ್ಥೆಯ ಸಿಬ್ಬಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ನಾಲ್ಕು ಕ್ಯಾಥ್‌ಲ್ಯಾಬ್, 38 ನುರಿತ ಸಂಸ್ಥೆಯ ವೈದ್ಯರು ಹಾಗೂ ತಂತ್ರಜ್ಞರು ಮತ್ತು ಶುಶ್ರೂಷಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಸಂಸ್ಥೆಯ ವತಿಯಿಂದ ಸುಮಾರು ರೂ. 50 ಲಕ್ಷಗಳಷ್ಟು ಹಣವನ್ನು ಈ ಬಡರೋಗಿಗಳ ಚಿಕಿತ್ಸೆಗಾಗಿ ಭರಿಸಲಾಗಿದೆ. ಸ್ಟಂಟ್‌ಗಳನ್ನು ಒದಗಿಸಿದ್ದು ಮಾತ್ರವಲ್ಲದೇ ಶಸ್ತ್ರಚಿಕಿತ್ಸೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಡಾ. ಜಿ. ಸುಬ್ರಮಣಿ ಮತ್ತು ಡಾ. ದೇವರಾಜು ಅವರ ಸಾಮಾಜಿಕ ಕಳಕಳಿ ಪ್ರಶಂಸನೀಯ~ ಎಂದರು.

`ಕಾರ್ಯಾಗಾರದಲ್ಲಿ 34 ವರ್ಷದ ಕಿರಿಯ ಹೃದ್ರೋಗಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶಸ್ತ್ರಚಿಕಿತ್ಸೆಗೆ ಒಳಗಾದ ಶೇಕಡಾ 40 ರಷ್ಟು ರೋಗಿಗಳು 50 ವರ್ಷಕ್ಕೂ ಕಡಿಮೆ ವಯಸ್ಸಿನವರಾಗಿದ್ದರು.  ಶೇಕಡ 50 ರಷ್ಟು ಮಂದಿ ಮಧುಮೇಹದಿಂದ ಬಳಲುತ್ತಿದ್ದರು~ ಎಂದು ಹೇಳಿದರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT