ADVERTISEMENT

ಜಲಸಂವರ್ಧನಾ ಯೋಜನೆ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2014, 19:30 IST
Last Updated 17 ಫೆಬ್ರುವರಿ 2014, 19:30 IST
ತಂಗಡಗಿ
ತಂಗಡಗಿ   

ಬೆಂಗಳೂರು: ಜಲಸಂವರ್ಧನಾ ಯೋಜನೆಯನ್ನು 2014–15ನೇ ಸಾಲಿನಲ್ಲೂ ಮುಂದು­ವರಿಸ­ಲಾಗು­ವುದು ಎಂದು ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ವಿಶ್ವಬ್ಯಾಂಕ್‌ನೊಂದಿಗೆ ಮಾಡಿಕೊಂಡಿದ್ದ 5 ವರ್ಷ­ಗಳ ಒಪ್ಪಂದ ಮುಕ್ತಾಯವಾಗಿದೆ. ಜಪಾನ್‌ ಅಂತರ­ರಾಷ್ಟ್ರೀಯ ಸಹಕಾರ ಬ್ಯಾಂಕ್‌ ನೊಂದಿಗೆ ಒಪ್ಪಂದ ಮಾಡಿ­ಕೊಂಡು ಯೋಜನೆ ಮುಂದುವರಿಸ­ಲಾಗುವುದು ಎಂದು ಭರವಸೆ ನೀಡಿದರು.

ಬಜೆಟ್‌ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುವಾಗ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಮಾಡಿದ ಟೀಕೆಗೆ ಪ್ರತಿಕ್ರಿಯಿಸಿದ ಸಚಿವರು, ಈ ವಿಷಯವನ್ನು ಸಂಪುಟದ ಮುಂದೆ ತಂದು ಆದಷ್ಟು ಬೇಗ ಒಪ್ಪಿಗೆ ಪಡೆಯ­ಲಾಗುವುದು ಎಂದರು.

‘ಕೆರೆ ಉಳಿಸುವುದಕ್ಕಿಂತ ದೊಡ್ಡ ಕೆಲಸ ಮತ್ತೊಂದಿಲ್ಲ. ಆ ಕಾಲದಲ್ಲಿ ವಿಶ್ವವಿದ್ಯಾ­ಲಯ­ಗಳು ಇರಲಿಲ್ಲ. ಬಿ.ಇ ಪದವೀ­ಧರರೂ ಇರಲಿಲ್ಲ. ಆದರೂ ನಮ್ಮ ಪೂರ್ವಿಕರು ಅಚ್ಚುಕಟ್ಟಾಗಿ ಕೆರೆಗಳನ್ನು ಕಟ್ಟಿದ್ದಾರೆ. ಈಗ ತಂತ್ರಜ್ಞಾನ ಬೆಳೆದಿದೆ. ಎಂಜಿನಿಯರ್‌­ಗಳೂ ಇದ್ದಾರೆ.

ಆದರೆ ಅವರು ಕೈಗೊ­ಳ್ಳುವ ಕಾಮಗಾರಿಗಳು ಒಂದು ವರ್ಷ ಬಾಳಿಕೆ ಬರುವುದಿಲ್ಲ. ಅವರಿಗೆಲ್ಲ ಏನಾಗಿದೆ’ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಖಾರವಾಗಿ ಪ್ರಶ್ನಿಸಿದರು.

‘ನಮ್ಮ ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಗ್ರಾಮವೊಂದಕ್ಕೆ ರಾಷ್ಟ್ರಪತಿಗಳ ಪ್ರಶಸ್ತಿ ಬಂತು. ಅಲ್ಲಿ ಯಾವ ರೀತಿ ಮಾಡಿದ್ದಾರೆ ಎಂದು ನೋಡಲು ಹೋದಾಗ ಶೌಚಾಲಯ ನಿರ್ಮಾಣಕ್ಕೆ ಬಳಸುವ ಸಾಮಗ್ರಿಗಳನ್ನು ಒಂದು ಕಡೆ ಕೂಡಿ ಹಾಕಿರುವುದು ಕಂಡು ಬಂತು. ಇದು ನಮ್ಮ ವ್ಯವಸ್ಥೆಯ ಕೈಗನ್ನಡಿ’ ಎಂದು ಮಾರ್ಮಿಕವಾಗಿ ಹೇಳಿದರು.

ಕೊಪ್ಪಳ ಜಿಲ್ಲೆಯಲ್ಲಿ ಒಂದು ಲಕ್ಷ ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದ­ಲಾಗಿದೆ. ಈಗಾಗಲೇ 65 ಸಾವಿರ ಶೌಚಾ­ಲಯ­ಗಳು ನಿರ್ಮಾಣವಾಗಿದ್ದು, ಮಾರ್ಚ್ ವೇಳೆಗೆ ಗುರಿ ಮುಟ್ಟಲಾಗುವುದು ಎಂದು ಸಚಿವ ತಂಗಡಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.