ADVERTISEMENT

ಜಾರ್ಜ್‌ ರಾಜೀನಾಮೆ ಕೊಡಲ್ಲ: ಸಿದ್ದರಾಮಯ್ಯ

‘ಸಿಬಿಐಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿ’

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 11:10 IST
Last Updated 27 ಅಕ್ಟೋಬರ್ 2017, 11:10 IST
ಜಾರ್ಜ್‌ ರಾಜೀನಾಮೆ ಕೊಡಲ್ಲ: ಸಿದ್ದರಾಮಯ್ಯ
ಜಾರ್ಜ್‌ ರಾಜೀನಾಮೆ ಕೊಡಲ್ಲ: ಸಿದ್ದರಾಮಯ್ಯ   

ಬೆಂಗಳೂರು: ಸಚಿವ ಕೆ.ಜೆ. ಜಾರ್ಜ್‌ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಬಿಜೆಪಿ ಪ್ರತಿನಿಧಿಸುವ ಕೇಂದ್ರ ಸಚಿವರು, ಮುಖ್ಯಮಂತ್ರಿ ವಿರುದ್ಧವೂ ಹಲವಾರು ಕ್ರಿಮಿನಲ್ ಮೊಕದ್ದಮೆಗಳಿವೆ. ಅವರು ಮೊದಲು ರಾಜೀನಾಮೆ ಕೊಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.

ಶುಕ್ರವಾರ ಬೆಳಗ್ಗೆಯಿಂದ ಸರಣಿ ಸಭೆ ನಡೆಸಿದ ಬಳಿಕ ಹಿರಿಯ ಸಚಿವರ ಜತೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಸಚಿವ ಸಂಪುಟದ ಎಂಟು ಸಂಪುಟ ದರ್ಜೆ, ಮೂವರು ರಾಜ್ಯ ಖಾತೆ ಸಚಿವರು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ ಕೊಲೆ, ಕೊಲೆಯತ್ನ, ವಂಚನೆ, 420 ಹೀಗೆ ವಿವಿಧ ಕೇಸುಗಳಿವೆ. ಅವರೆಲ್ಲ ಸಚಿವ ಸಂಪುಟದಲ್ಲಿ  ಮುಂದುವರಿದಿಲ್ಲವೇ ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.‌

ಜಾರ್ಜ್‌ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿಯವರು ಮೊದಲು ತಮ್ಮ ಪಕ್ಷದ ಸಚಿವರಿಂದ ರಾಜೀನಾಮೆ ಪಡೆಯಲಿ. ನಮಗೊಂದು, ಅವರಿಗೊಂದು ಅಳತೆಗೋಲು ಇರಲು ಸಾಧ್ಯವೇ. ರಾಜಕೀಯದಲ್ಲಿ ಎಲ್ಲರಿಗೂ ಒಂದೇ ಮಾನದಂಡ ಅಲ್ಲವೇ ಎಂದರು.

ADVERTISEMENT

ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದಾರೆ. ಅವರ ವಿರುದ್ಧ ಏಳು ವಂಚನೆಯ ಮೊಕದ್ದಮೆ, 420 ಮೊಕದ್ದಮೆ, ಫೋರ್ಜರಿ ಹಾಗೂ ಅಪರಾಧಿಕ ಕತ್ಯ ಎಸಗಿದ ವಿವಿಧ ಮೊಕದ್ದಮೆಗಳು ಇವೆ. ರಾಜ್ಯವನ್ನು ಪ್ರತಿನಿಧಿಸುವ ಅನಂತಕುಮಾರ ಹೆಗಡೆ, ರಮೇಶ ಜಿಗಜಿಣಗಿ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆಗಳಿವೆ. ಜಾರ್ಜ್ ರಾಜೀನಾಮೆ ಕೇಳುವ ನೈತಿಕತೆಯನ್ನು ಬಿಜೆಪಿಯವರು ಕಳೆದುಕೊಂಡಿದ್ದಾರೆ ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.