ADVERTISEMENT

ಜಿಲ್ಲಾಸ್ಪತ್ರೆಗೆ ಸುಕ್ರಿ ಬೊಮ್ಮು ಗೌಡ ದಾಖಲು

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 19:50 IST
Last Updated 7 ಜುಲೈ 2017, 19:50 IST
ಜಿಲ್ಲಾಸ್ಪತ್ರೆಗೆ ಸುಕ್ರಿ ಬೊಮ್ಮು ಗೌಡ  ದಾಖಲು
ಜಿಲ್ಲಾಸ್ಪತ್ರೆಗೆ ಸುಕ್ರಿ ಬೊಮ್ಮು ಗೌಡ ದಾಖಲು   

ಕಾರವಾರ: ಜನಪದ ಕಲಾವಿದೆ ಅಂಕೋಲಾದ ಸುಕ್ರಿ ಬೊಮ್ಮು ಗೌಡ ಶುಕ್ರವಾರ ನಸುಕಿನಲ್ಲಿ ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿರುವ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದ್ದು, ಚೇತರಿಸಿಕೊಂಡ ನಂತರ ವಾರ್ಡ್‌ಗೆ ಸ್ಥಳಾಂತರಿಸಲಾಗುವುದು’ ಎಂದು ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಳಕರ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಂಗಳೂರು ಆಸ್ಪತ್ರೆಯಿಂದ ಸ್ಥಳಾಂತರ:  ‘ಬೆಂಗಳೂರಿನಲ್ಲಿ ಜುಲೈ 1ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜನಪದ ಗೀತೆಯನ್ನು ಹಾಡಿಸುವ ಸಲುವಾಗಿ ಬನವಾಸಿ ಕಲ್ಯಾಣ ಆಶ್ರಮ ಸಂಸ್ಥೆಯ ಪದಾಧಿಕಾರಿಗಳು ಅಂಕೋಲಾದ ಬಡಗೇರಿ ಗ್ರಾಮದಿಂದ ಸುಕ್ರಿ ಅವರನ್ನು ಕರೆದೊಯ್ದಿದ್ದರು.

ಅಲ್ಲಿ ಕಾರ್ಯಕ್ರಮದ ನಂತರ ಕೆಮ್ಮು ಹೆಚ್ಚಾಗಿದ್ದರಿಂದ, ಮರುದಿನ ಅವರನ್ನು ತಿಲಕ್‌ನಗರದ ಸಾಗರ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸುಕ್ರಿ ಅವರ ಮನವಿ ಮೇರೆಗೆ ಅಲ್ಲಿಂದ ಈ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಸಾಗರ ಆಸ್ಪತ್ರೆ ಚಿಕಿತ್ಸಾ ವೆಚ್ಚವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಭರಿಸಿದೆ’ ಎಂದು ಸುಕ್ರಿ ಅವರ ತಂಗಿಯ ಮಗ ಮಂಜುನಾಥ ಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.