ADVERTISEMENT

ಜೂನ್ 24ರಿಂದ ಮೂರುದಿನ ಶ್ರವಣಬೆಳಗೊಳದಲ್ಲಿ ಹಳಗನ್ನಡದ ಕಂಪು

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 19:34 IST
Last Updated 7 ಜೂನ್ 2018, 19:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಅಖಿಲ ಭಾರತ ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನ, ಪ್ರಖ್ಯಾತ ವಿದ್ವಾಂಸ ಡಾ. ಷ. ಶೆಟ್ಟರ್‌ ಅಧ್ಯಕ್ಷತೆಯಲ್ಲಿ ಜೂನ್‌ 24ರಿಂದ 26ರವರೆಗೆ ಶ್ರವಣಬೆಳಗೊಳದಲ್ಲಿ ನಡೆಯಲಿದೆ.

ವಿಶ್ವ ಸಾಹಿತ್ಯದಲ್ಲಿ ಮಹತ್ವದ ಸ್ಥಾನ ಪಡೆದಿರುವ ಹಳಗನ್ನಡ ಸಾಹಿತ್ಯವನ್ನು ಹೊಸ ತಲೆಮಾರಿಗೆ ತಲುಪಿಸುವ ಉದ್ದೇಶದಿಂದ ಈ ಸಮ್ಮೇಳನ ನಡೆಸುತ್ತಿದ್ದೇವೆ ಎಂದು ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಬುಧವಾರ ಹೇಳಿದರು.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಸಮ್ಮೇಳನ ಉದ್ಘಾಟಿಸುವರು. ಶ್ರವಣಬೆಳಗೊಳ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಹಳಗನ್ನಡ ಸಾಹಿತ್ಯದ ಬಗ್ಗೆ ಪ್ರಭುತ್ವವುಳ್ಳ ಪ್ರಮುಖ ವಿದ್ವಾಂಸರು, ಅಧ್ಯಾಪಕರು ಹಾಗೂ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಸಂಶೋಧನಾ ವಿದ್ಯಾರ್ಥಿಗಳು ಗೋಷ್ಠಿಗಳಲ್ಲಿ ಪಾಲ್ಗೊಳ್ಳುವರು.

ADVERTISEMENT

ಮಠದ ಸಹಕಾರ: ಕನ್ನಡದ ಅಸ್ಮಿತೆಯನ್ನು ಪ್ರತಿನಿಧಿಸುವ ಕಾರಣದಿಂದಾಗಿ ಶ್ರವಣಬೆಳಗೊಳವನ್ನು ಸಮ್ಮೇಳನದ ಆತಿಥ್ಯಕ್ಕೆ ಆಯ್ಕೆ ಮಾಡಲಾಗಿದೆ. ಸಮ್ಮೇಳನದ ಊಟ ಮತ್ತು ವಸತಿಯ ಜವಾಬ್ದಾರಿಯನ್ನು ಜೈನಮಠ ನಿರ್ವಹಿಸಲಿದ್ದು, ಸುಮಾರು 2000 ಮಂದಿ ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು. ಸಮ್ಮೇಳನ ನಡೆಸಲು ಸರ್ಕಾರದಿಂದ 35 ಲಕ್ಷ ರೂಪಾಯಿ ಅನುದಾನ ದೊರೆತಿದೆ ಎಂದೂ
ತಿಳಿಸಿದರು.

ಪರಿಷತ್ತಿನ ವಾರ್ಷಿಕ ಸಾಹಿತ್ಯ ಸಮ್ಮೇಳನಗಳಿಗಿಂತಲೂ ಇದು ಸಂಪೂರ್ಣ ಭಿನ್ನವಾಗಿದ್ದು, ವಿದ್ವತ್ಪೂರ್ಣ ಪ್ರಬಂಧಗಳ ಮಂಡನೆ ಹಾಗೂ ಸಂವಾದಕ್ಕೆ ಅವಕಾಶವಿರಲಿದೆ. ವರ್ತಮಾನದ ನೆಲೆಯಲ್ಲಿ ಹಳಗನ್ನಡದ ಪ್ರಮುಖ ಕವಿಗಳು ಹಾಗೂ ಅವರ ಕೃತಿಗಳ ಕುರಿತಂತೆ ಹಲವು ಗೋಷ್ಠಿಗಳು ನಡೆಯಲಿವೆ. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಬಳಿಗಾರ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.