ADVERTISEMENT

ಜೆಡಿಎಸ್‌ ಮುಖಂಡರಿಂದ ಕಾರ್ಯಕರ್ತರಿಗೆ ಶಿಸ್ತಿನ ಪಾಠ

​ಪ್ರಜಾವಾಣಿ ವಾರ್ತೆ
Published 23 ಜನವರಿ 2016, 19:56 IST
Last Updated 23 ಜನವರಿ 2016, 19:56 IST
ಬೆಂಗಳೂರಿನಲ್ಲಿ ಶನಿವಾರ ನಡೆದ ಜೆಡಿಎಸ್‌ ಸಭೆಗೆ ಬಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರನ್ನು ಕಾರ್ಯಕರ್ತರೊಬ್ಬರು ಸ್ವಾಗತಿಸಿದರು
ಬೆಂಗಳೂರಿನಲ್ಲಿ ಶನಿವಾರ ನಡೆದ ಜೆಡಿಎಸ್‌ ಸಭೆಗೆ ಬಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರನ್ನು ಕಾರ್ಯಕರ್ತರೊಬ್ಬರು ಸ್ವಾಗತಿಸಿದರು   

ಬೆಂಗಳೂರು: ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಶನಿವಾರ  ತುರ್ತು ಸಭೆ ನಡೆಸಿದ ಜೆಡಿಎಸ್‌ ಪ್ರಮುಖರು, ಕಾರ್ಯಕರ್ತರಿಗೆ ಸಂಘಟನೆ ಮತ್ತು ಶಿಸ್ತಿನ ಪಾಠ ಹೇಳಿದರು.

ಸಭೆಯಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ‘ಚುನಾವಣೆಯಲ್ಲಿ ಸ್ಪರ್ಧಿಸಲು ಬಿ- ಫಾರಂ ಕೇಳುವ ಜೊತೆಗೆ ಪಕ್ಷಕ್ಕಾಗಿ ನೀವು ಏನು ಮಾಡಿದ್ದೀರಿ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಿ. ಪಕ್ಷದಲ್ಲಿ ಶಿಸ್ತು, ನಿಯಮ, ಬದ್ಧತೆ ಇರಬೇಕು’ ಎಂಬ ಕಿವಿಮಾತು ಹೇಳಿದರು.

‘ಯಾರು ಬೇಕಿದ್ದರೂ ಈ ಪಕ್ಷದ ಅಭ್ಯರ್ಥಿಯಾಗಲು ಸಾಧ್ಯವಿಲ್ಲ. ಪಕ್ಷದ ಬಗ್ಗೆ ನಿಷ್ಠೆ ಇರಬೇಕು’ ಎಂದು ತಾಕೀತು ಮಾಡಿದರು. ಡಿಎಂಕೆ ಪಕ್ಷದ ಮುಖ್ಯಸ್ಥ ಎಂ. ಕರುಣಾನಿಧಿ ಪುತ್ರಿ ಕನಿಮೋಳಿ ಜೈಲಿಗೆ ಹೋದರೂ, ಒಬ್ಬನೇ ಒಬ್ಬ ನಾಯಕ ಆ ಪಕ್ಷ ತೊರೆಯಲಿಲ್ಲ. ಆದರೆ ಜೆಡಿಎಸ್‌ನಲ್ಲಿ ‘ಆಯಾರಾಂ – ಗಯಾರಾಂ’ ಪದ್ಧತಿ ಬೆಳೆದಿದೆ ಎಂದರು.

‘ಜೆಡಿಎಸ್‌ನಲ್ಲಿ ಕಾರ್ಯಕರ್ತರನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಇದು ನಮ್ಮೆಲ್ಲರ ತಪ್ಪು. ನಮ್ಮ ಪಕ್ಷ ಗೆಲ್ಲುವ ಸಾಧ್ಯತೆ ಇರುವ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿಯನ್ನು ಸರ್ಕಾರ ಉದ್ದೇಶಪೂರ್ವಕವಾಗಿ ಬದಲಾಯಿಸಿದೆ’ ಎಂದು ಶಾಸಕ ಜಮೀರ್ ಅಹಮದ್ ಖಾನ್‌ ದೂರಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯವನ್ನು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣಾ ಪ್ರಚಾರದ ವೇಳೆ ಜನರಿಗೆ ವಿವರಿಸಬೇಕು. ಈ ಹಿಂದೆ ಜನತಾ ಪರಿವಾರದಲ್ಲಿ ಇದ್ದು, ಈಗ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಎಲ್ಲರನ್ನೂ ಪಕ್ಷಕ್ಕೆ ಮರಳಿ ಕರೆತರಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

‘ಷಡ್ಯಂತ್ರ ನಡೆಯುತ್ತಿದೆ’: ಜೆಡಿಎಸ್‌ ಪಕ್ಷವನ್ನು ಮುಗಿಸಬೇಕು ಎಂಬ ಷಡ್ಯಂತ್ರ ನಡೆದಿದೆ. ಈ ಪಕ್ಷ ಮುಳುಗಿದರೆ ನಷ್ಟ ರಾಜ್ಯದ ಜನತೆಗೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಉತ್ತರ ಪ್ರದೇಶ ಸರ್ಕಾರ ಪ್ರತಿ ಟನ್‌ ಕಬ್ಬಿಗೆ ₹ 500 ಸಹಾಯಧನ ನೀಡುತ್ತಿದೆ. ಆದರೆ ಕರ್ನಾಟಕ ಸರ್ಕಾರ ಇಂಥ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು. ಗರಿಷ್ಠ 18 ಜಿಲ್ಲಾ ಪಂಚಾಯಿತಿಗಳಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕು. ಕಾರ್ಯಕರ್ತರು ತಕ್ಷಣದಿಂದ ಚುನಾವಣಾ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು. ಪಕ್ಷದ ಮುಖಂಡರಾದ ವೈ.ಎಸ್.ವಿ. ದತ್ತ, ಬಸವರಾಜ ಹೊರಟ್ಟಿ, ಎಚ್.ಡಿ. ರೇವಣ್ಣ ಸಭೆಗೆ ಬಂದಿರಲಿಲ್ಲ.

ದೇವದುರ್ಗ: ಕರಿಯಮ್ಮ ಜೆಡಿಎಸ್‌ ಅಭ್ಯರ್ಥಿ
ಬೆಂಗಳೂರು: ದೇವದುರ್ಗ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನಾಗಿ ಕರಿಯಮ್ಮ ಅವರನ್ನು ಕಣಕ್ಕಿಳಿಸಲಾಗುವುದು ಎಂದು ಎಚ್.ಡಿ. ದೇವೇಗೌಡ ಸಭೆಯಲ್ಲಿ ತಿಳಿಸಿದರು. ಜಮೀರ್‌ ಅಹಮದ್‌ ಖಾನ್‌ ಅವರ ಜೊತೆ ಚರ್ಚೆ ನಡೆಸಿ ಹೆಬ್ಬಾಳ ಕ್ಷೇತ್ರದಲ್ಲಿ ಪಕ್ಷ ಸ್ಪರ್ಧಿಸಬೇಕೇ ಎಂಬುದನ್ನು ತೀರ್ಮಾನಿಸಲಾಗುವುದು. ಆ ಕ್ಷೇತ್ರದಲ್ಲಿ 55 ಸಾವಿರ ಮುಸ್ಲಿಂ ಮತಗಳು ಇವೆ. ಜಮೀರ್ ಅವರು ಹೋರಾಟ ನಡೆಸುತ್ತಾರೆ ಎಂದಾದರೆ, ಅಲ್ಲಿ ಅಭ್ಯರ್ಥಿ ಕಣಕ್ಕಿಳಿಸಬಹುದು ಎಂದು ಹೇಳಿದರು.

ಮುಖಂಡ ಬಂಡೆಪ್ಪ ಕಾಶಂಪುರ ಅವರ ಜೊತೆ ಮಾತುಕತೆ ನಡೆಸಿ ಬೀದರ್‌ ಅಭ್ಯರ್ಥಿ ಯಾರೆಂಬುದನ್ನು ಅಂತಿಮಗೊಳಿಸಲಾಗುವುದು ಎಂದರು. ‘ಆಡಳಿತ ಪಕ್ಷ ಉಪ ಚುನಾವಣೆಗಳಲ್ಲಿ ಹೆಚ್ಚಿನ ಪ್ರಾಬಲ್ಯ ಮೆರೆಯುತ್ತದೆ. ಸ್ಪರ್ಧಿಸುವ ಆಕಾಂಕ್ಷೆ ಇರುವವರು ನಮ್ಮಲ್ಲಿದ್ದಾರೆ. ಆದರೆ ರಾಷ್ಟ್ರೀಯ ಪಕ್ಷಗಳಲ್ಲಿ ಇರುವಷ್ಟು ಹಣಬಲ ನಮ್ಮಲ್ಲಿಲ್ಲ’ ಎಂದರು.

ನನಗೆ ಕಾಮನ್ ಸೆನ್ಸ್‌ ಇಲ್ಲ ಎಂದು ಯಾರೋ ಆರೋಪಿಸಿದ್ದಾರೆ. ನಿಜ, ಈಗ ಆಗುತ್ತಿರುವಂತೆ ರಾಜ್ಯವನ್ನು ಲೂಟಿ ಮಾಡಬೇಕು ಎಂಬ ಕಾಮನ್‌ ಸೆನ್ಸ್‌ ಅಧಿಕಾರದಲ್ಲಿದ್ದಾಗ ನನಗೆ ಇರಲಿಲ್ಲ!
ಎಚ್.ಡಿ. ಕುಮಾರಸ್ವಾಮಿ,
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT