ADVERTISEMENT

ಜೆಡಿಎಸ್, ಬಿಜೆಪಿ ಮೈತ್ರಿ: ನಿರ್ಣಾಯಕ ಹಂತಕ್ಕೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 19:59 IST
Last Updated 4 ಆಗಸ್ಟ್ 2013, 19:59 IST

ಬೆಂಗಳೂರು: ಲೋಕಸಭೆ ಮತ್ತು ವಿಧಾನ ಪರಿಷತ್‌ನ ಉಪ ಚುನಾವಣೆಯನ್ನು ಜತೆಗೂಡಿ ಎದುರಿಸುವ ಕುರಿತು ಪ್ರತಿಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ಮಾತುಕತೆ ಮುಂದುವರಿಸಿವೆ. ಘೋಷಿತ ಮೈತ್ರಿಗೆ ಮಾತ್ರ ಸಿದ್ಧವಿರುವುದಾಗಿ ಬಿಜೆಪಿ ಪಟ್ಟು ಹಿಡಿದಿದ್ದು, ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ.

ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಕಾಂಗ್ರೆಸ್ ವಿರೋಧಿ ಮತಗಳ ವಿಭಜನೆ ತಡೆಯುವ ಪ್ರಸ್ತಾವವನ್ನು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ನಾಯಕರ ಮುಂದಿಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಪ್ರಹ್ಲಾದ ಜೋಶಿ ಶನಿವಾರ ಹೇಳಿದ್ದರು.

ವಿಧಾನಮಂಡಲ ಅಧಿವೇಶನ ನಡೆಯುತ್ತಿರುವಾಗಲೇ ಮೈತ್ರಿ ಮಾತುಕತೆಗೆ ಚಾಲನೆ ದೊರಕಿತ್ತು. ವಿಧಾನಸಭೆಯ ವಿರೋಧ ಪಕ್ಷದ ಶಾಸಕರ ಮೊಗಸಾಲೆಯಲ್ಲೇ ಚರ್ಚೆ ಆರಂಭವಾಗಿತ್ತು. ಈಗ ಚರ್ಚೆ ನಿರ್ಣಾಯಕ ಹಂತ ತಲುಪಿದ್ದು, ಸೋಮವಾರ ಅಂತಿಮ ತೀರ್ಮಾನದ ಸಾಧ್ಯತೆ ಇದೆ.

ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಬಿಜೆಪಿ ಬೆಂಬಲಿಸಬೇಕು. ಪ್ರತಿಯಾಗಿ ಸ್ಥಳೀಯ ಸಂಸ್ಥೆಗಳ ಮೂರು ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಬಾರದು ಎಂಬ ಸೂತ್ರ ಗಂಭೀರ ಚರ್ಚೆಯಲ್ಲಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಮತ್ತು ಶಾಸಕ ಆರ್.ಅಶೋಕ ಅವರು ಕುಮಾರಸ್ವಾಮಿ ಅವರೊಂದಿಗೆ ಮಾತುಕತೆಯಲ್ಲಿ ನಿರತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಲ್ಪಸಂಖ್ಯಾತರ ಭಯ: ಬಿಜೆಪಿ ಜೊತೆ ಬಹಿರಂಗವಾಗಿ ಮೈತ್ರಿ ಮಾಡಿಕೊಂಡರೆ ಅಲ್ಪಸಂಖ್ಯಾತ ಮತದಾರರು ಬೆಂಬಲಿಸದೇ ಇರಬಹುದು ಎಂಬ ಭಯ ಜೆಡಿಎಸ್ ನಾಯಕರನ್ನು ಕಾಡುತ್ತಿದೆ. ಈ ಕಾರಣಕ್ಕಾಗಿಯೇ ಅವರು ಅಘೋಷಿತ ಮೈತ್ರಿಗೆ ಒಲವು ತೋರುತ್ತಿದ್ದಾರೆ. ಬಹಿರಂಗವಾಗಿ ಪ್ರಕಟಿಸದೇ ತಮ್ಮ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಬಿಜೆಪಿ ನಾಯಕರನ್ನು ಕೋರಿದ್ದಾರೆ.

 ಆದರೆ, ಬಿಜೆಪಿ ಘೋಷಿತ ಮೈತ್ರಿಗೆ ಮಾತ್ರ ಸಿದ್ಧವಿರುವುದಾಗಿ ಸಂದೇಶ ರವಾನಿಸಿದೆ. ಬಹಿರಂಗವಾಗಿ ಮೈತ್ರಿ ಮಾಡಿಕೊಂಡಲ್ಲಿ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳ ನಾಮಪತ್ರ ವಾಪಸು ಪಡೆಯುವುದಾಗಿ ಬಿಜೆಪಿ ಭರವಸೆ ನೀಡಿದೆ ಎಂದು ಗೊತ್ತಾಗಿದೆ.

ರಹಸ್ಯ ಮಾತುಕತೆ: ಎರಡೂ ಪಕ್ಷಗಳ ನಾಯಕರು ಭಾನುವಾರವೂ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಗೆ ನಾಮಪತ್ರ ಹಿಂದಕ್ಕೆ ಪಡೆಯಲು ಬುಧವಾರ ಕೊನೆಯ ದಿನವಾಗಿದೆ. ಆದ್ದರಿಂದ ಮೈತ್ರಿ ಕುರಿತು ಮಂಗಳವಾರಕ್ಕೂ ಮುನ್ನವೇ ತೀರ್ಮಾನಕ್ಕೆ ಬರಲು ಉಭಯ ಪಕ್ಷಗಳ ನಾಯಕರು ನಿರ್ಧರಿಸಿದ್ದಾರೆ.

ಸೋಮವಾರ ಬೆಳಿಗ್ಗೆ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಭೇಟಿಯಾಗಿ ಅಂತಿಮ ಸುತ್ತಿನ ಚರ್ಚೆ ನಡೆಸುವ ಸಾಧ್ಯತೆ ಇದೆ.

ದೇವೇಗೌಡರಿಂದ ವಿರೋಧ: ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಮೈತ್ರಿಗೆ ಮುಂದಾಗಿರುವುದಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತೆ ಬಿಜೆಪಿ ಜೊತೆ ಕೈಜೋಡಿಸುವುದು ಬೇಡ ಎಂದು ಅವರು ಕುಮಾರಸ್ವಾಮಿ ಅವರಿಗೆ ತಾಕೀತು ಮಾಡಿದ್ದಾರೆ. ಉಪ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೆ ಮುಂಬರುವ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಪಕ್ಷದಿಂದ ದೂರ ಸರಿಯಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ ಎಂದು ಜೆಡಿಎಸ್ ಮೂಲಗಳು ಹೇಳಿವೆ.

ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ
ವಿಧಾನ ಪರಿಷತ್ತಿನ ಚಿತ್ರದುರ್ಗ, ಹುಬ್ಬಳ್ಳಿ-ಧಾರವಾಡ ಮತ್ತು ಮೈಸೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಚಿತ್ರದುರ್ಗದಿಂದ ಸ್ಥಳೀಯ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಸೇತುರಾಂ, ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ನಾಗಾರಾಜ ಛಬ್ಬಿ ಮತ್ತು ಮೈಸೂರು ಕ್ಷೇತ್ರದಿಂದ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಧರ್ಮಸೇನ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ.

ಹುಬ್ಬಳ್ಳಿ-ಧಾರವಾಡ ಕ್ಷೇತ್ರದಿಂದ ಪ್ರದೀಪ್ ಶೆಟ್ಟರ್ ಹಾಗೂ ಮೈಸೂರು ಕ್ಷೇತ್ರದಿಂದ ಯಶಸ್ವಿನಿ ಸೋಮಶೇಖರ್ ಅವರಿಗೆ ಟಿಕೆಟ್ ನೀಡಲಾಗುವುದು. ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಚರ್ಚೆ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳು ಯಾರು ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಈ ಮೂರೂ ಕ್ಷೇತ್ರಗಳ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.