ADVERTISEMENT

ಜೆಡಿಎಸ್ ಮುಖಂಡ ಪಂಚಲಿಂಗಯ್ಯ ಬಂಧನ

​ಪ್ರಜಾವಾಣಿ ವಾರ್ತೆ
Published 25 ಮೇ 2012, 19:30 IST
Last Updated 25 ಮೇ 2012, 19:30 IST
ಜೆಡಿಎಸ್ ಮುಖಂಡ ಪಂಚಲಿಂಗಯ್ಯ ಬಂಧನ
ಜೆಡಿಎಸ್ ಮುಖಂಡ ಪಂಚಲಿಂಗಯ್ಯ ಬಂಧನ   

ಬೆಂಗಳೂರು: ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದಿಂದಲೇ ಪರಿಹಾರ ಪಡೆದ ಆರೋಪದ ಮೇಲೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಪಂಚಲಿಂಗಯ್ಯ ಅವರನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಆರೋಪಿಯನ್ನು ಜೂನ್ 8ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಫೆಬ್ರುವರಿಯಲ್ಲಿ ಖಾಸಗಿ ದೂರು ಸಲ್ಲಿಸಿದ್ದ ಗಾಂಧಿನಗರದ ಜಿ.ಎನ್.ಸದಾನಂದ ಸ್ವಾಮಿ ಎಂಬುವರು, ಕೆಂಗೇರಿ ಹೋಬಳಿಯ ಹೆಮ್ಮಿಗೆಪುರ ಗ್ರಾಮದಲ್ಲಿನ ಸರ್ಕಾರಿ ಭೂಮಿ ತಮ್ಮದೆಂದು ನಕಲಿ ದಾಖಲೆ ಸೃಷ್ಟಿಸಿ ಪಂಚಲಿಂಗಯ್ಯ ಪರಿಹಾರ ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು.

ಫೆಬ್ರುವರಿ 29ರಂದು ಪಂಚಲಿಂಗಯ್ಯ ಮತ್ತು ಇತರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದ ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್‌ಪಿ ಎಚ್.ಎಸ್.ಮಂಜುನಾಥ್ ಪ್ರಕರಣದ ತನಿಖೆ ಆರಂಭಿಸಿದ್ದರು. ಆರೋಪಿಯು ನಕಲಿ ದಾಖಲೆ ಸೃಷ್ಟಿಸಿ, ಸರ್ಕಾರವನ್ನು ವಂಚಿಸಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್.ಸತ್ಯನಾರಾಯಣ ರಾವ್ ತಿಳಿಸಿದ್ದಾರೆ.

ಬನಶಂಕರಿ ಆರನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ ಹೆಮ್ಮಿಗೆಪುರದ ವಿವಿಧ ಸರ್ವೆ ನಂಬರುಗಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 2000ನೇ ಇಸವಿಯಲ್ಲಿ ಅಧಿಸೂಚನೆ ಪ್ರಕಟಿಸಿತ್ತು.

ಹೆಮ್ಮಿಗೆಪುರದ ಸರ್ವೆ ನಂಬರು 64/`ಪಿ~ನಲ್ಲಿ ತಾನು ಒಂದು ಎಕರೆ ಜಮೀನು ಹೊಂದಿದ್ದು, ಅದನ್ನು ಸ್ವಾಧೀನಪಡಿಸಿಕೊಳ್ಳಬಾರದು ಎಂದು ಪಂಚಲಿಂಗಯ್ಯ ಆಕ್ಷೇಪಣೆ ಸಲ್ಲಿಸಿದ್ದರು. 1978ರಲ್ಲಿ ಸರ್ಕಾರ ತನಗೆ ಸದರಿ ಭೂಮಿಯನ್ನು ಮಂಜೂರು ಮಾಡಿರುವುದಾಗಿಯೂ ತಿಳಿಸಿದ್ದರು.

ಆದರೆ, ಆಕ್ಷೇಪಣೆಯನ್ನು ತಳ್ಳಿ ಹಾಕಿದ್ದ ಬಿಡಿಎ, ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಪಂಚಲಿಂಗಯ್ಯ ಅವರಿಗೆ ಆರು ಲಕ್ಷ ರೂಪಾಯಿ ಪರಿಹಾರ ಮತ್ತು 60/40 ಅಡಿ ವಿಸ್ತೀರ್ಣದ ಒಂದು ನಿವೇಶನ ನೀಡಲಾಗಿತ್ತು. ಆದರೆ, ಸರ್ವೆ ನಂಬರ್ 64/`ಪಿ~ನಲ್ಲಿ ಸರ್ಕಾರ ಪಂಚಲಿಂಗಯ್ಯ ಅವರಿಗೆ ಜಮೀನು ಮಂಜೂರು ಮಾಡಿರಲಿಲ್ಲ. ತಹಶೀಲ್ದಾರರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪರಿಹಾರ ಪಡೆದಿದ್ದರು ಎಂಬುದು ತನಿಖೆಯಿಂದ ಪತ್ತೆಯಾಗಿದೆ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.

ನಂತರ ಪಂಚಲಿಂಗಯ್ಯ ಅವರನ್ನು ಬಂಧಿಸಿ, ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂಧ್ರ ರಾವ್ ಅವರ ಎದುರು ಹಾಜರುಪಡಿಸಿದರು. ಆರೋಪಿಯನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದರು.

ಇನ್ನೂ ಎರಡು ಪ್ರಕರಣ: ಹೆಮ್ಮಿಗೆಪುರದ ವಿವಿಧ ಸರ್ವೆ ನಂಬರುಗಳಲ್ಲಿ ಒಟ್ಟು 9 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಪರಿಹಾರ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಪಂಚಲಿಂಗಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ಇನ್ನೂ ಎರಡು ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ. ಅನುಕ್ರಮವಾಗಿ 4 ಮತ್ತು 5 ಎಕರೆಗಳಿಗೆ ನಕಲಿ ದಾಖಲೆ ಸೃಷ್ಟಿಸಿದ ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ.

ರಾಮನಗರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಆರೋಪಿಯ ವಿರುದ್ಧ 10ಕ್ಕೂ ಹೆಚ್ಚು ಜಾಮೀನುರಹಿತ ವಾರೆಂಟ್‌ಗಳು ಜಾರಿಯಾಗಿವೆ. ಆರೋಪಿಯನ್ನು ಬಂಧಿಸಿರುವ ಕುರಿತು ಲೋಕಾಯುಕ್ತ ಪೊಲೀಸರು ಈ ಎಲ್ಲ ಠಾಣೆಗಳಿಗೂ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.