ADVERTISEMENT

ಜೇಮ್ಸ್‌ ಉತ್ತಂಗಿ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 19:30 IST
Last Updated 4 ಜನವರಿ 2014, 19:30 IST
ಜೇಮ್ಸ್‌ ಉತ್ತಂಗಿ ಇನ್ನಿಲ್ಲ
ಜೇಮ್ಸ್‌ ಉತ್ತಂಗಿ ಇನ್ನಿಲ್ಲ   

ಧಾರವಾಡ: ಹಿರಿಯ ಪಕ್ಷಿ ವಿಜ್ಞಾನಿ, ಕರ್ನಾಟಕ  ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಚಾರ್ಯ  ಡಾ.ಜೇಮ್ಸ್‌ ಉತ್ತಂಗಿ (98) ಶನಿವಾರ ನಗರದ  ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ದೀರ್ಘಕಾಲದ ಅನಾರೋಗ್ಯ­ದಿಂದ ಅವರು  ಬಳಲುತ್ತಿದ್ದರು. ಅವ­ರಿಗೆ ನಾಲ್ವರು ಪುತ್ರಿಯರು ಇದ್ದಾರೆ.

ಭಾರತದ ಮೈನಾ ಪಕ್ಷಿಗಳ ಕುರಿತು ಜನಪದ ಸಾಹಿತ್ಯ ಕುರಿತ ಅವರ ಪ್ರಬಂಧಕ್ಕೆ ಇಟಲಿಯ ಪಕ್ಷಿ­ಶಾಸ್ತ್ರ ಸಂಸ್ಥೆ ‘ಸೋಷಿಯೊ ಆನರೇ­ರಿಯೋ’ ಪ್ರಶಸ್ತಿ ನೀಡಿ ಗೌರವಿಸಿದೆ. ರಾಜ್ಯ ಅರಣ್ಯ ಹಾಗೂ ಪರಿಸರ ಇಲಾಖೆ 1995­ರಲ್ಲಿ ಪರಿಸರ ಪ್ರೇಮಿ ಪ್ರಶಸ್ತಿ ನೀಡಿ ಗೌರವಿಸಿದೆ.

2005ರಲ್ಲಿ ‘ನ್ಯಾಷನಲ್ ಕೌನ್ಸಿಲ್ ಫಾರ್ ಎಜು­ಕೇಷನಲ್ ರಿಸರ್ಚ್‌ ಮತ್ತು ಟ್ರೇನಿಂಗ್’ (ಎನ್‌ಸಿ­ಇ­ಆರ್‌ಟಿ)ಸಂಸ್ಥೆ­­­ಯು  ಜೀವಮಾನ ಸಾಧನೆ­ಗಾಗಿ ರಾಷ್ಟ್ರ­ಪತಿಗಳ ಪ್ರಶಸ್ತಿ ನೀಡಿ ಪುರ­ಸ್ಕ­ರಿಸಿದೆ. 2006ರಲ್ಲಿ ಧಾರ­ವಾಡ ಅಕಾ­ಡೆಮಿ ಆಫ್ ಸೈನ್ಸ್‌­ನವರು ಆನರರಿ ಫೆಲೊ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.  ಶನಿವಾರ ಸಂಜೆ ಅಂತ್ಯಕ್ರಿಯೆ ನೆರವೇರಿತು.

ಎಲೆಮರೆ ಕಾಯಿಯಾಗೇ ಉಳಿದ ಪಕ್ಷಿ ವಿಜ್ಞಾನಿ

ಧಾರವಾಡ: ಭಾರತದ ‘ಪಕ್ಷಿ ಮಾನವ’ ಸಲೀಂ ಅಲಿ ಅವರು ಮೆಚ್ಚಿ­ಕೊಂಡ, ಧಾರವಾಡ ನೆಲದ ಅಪ್ಪಟ ದೇಸಿ ಪ್ರತಿಭೆ ಡಾ.ಜೇಮ್ಸ್‌ ಚನ್ನಪ್ಪ ಉತ್ತಂಗಿ (98) ಬಹುತೇಕ ಎಲೆ­ಮರೆಯ ಕಾಯಿಯಂತೆಯೇ ಜೀವನ ಸವೆಸಿದವರು.

ಸರ್ವಜ್ಞನ ವಚನಗಳನ್ನು ಸಾಹಿತ್ಯ ಲೋಕಕ್ಕೆ ಕಾಣಿಕೆಯಾಗಿ ನೀಡಿದ ಉತ್ತಂಗಿ ಚನ್ನಪ್ಪನವರ ಪುತ್ರ ಜೇಮ್ಸ್‌ ಉತ್ತಂಗಿ, ವಿಜ್ಞಾನ ಕ್ಷೇತ್ರದಲ್ಲಿ ಮೇರು ಸಾಧನೆಯನ್ನು ಕೈಗೊಂಡವರು. ಆದರೆ, ತಮ್ಮ ಸಂಶೋಧನೆಗಳನ್ನು ಇತರರ ಮುಂದೆ ತಿಳಿಸಲು ಅವರು ಸಂಕೋಚ­ಪಟ್ಟುಕೊಂಡ ಕಾರಣ ವಿಜ್ಞಾನ ಲೋಕ ಕೊಂಚ ಬಡವಾಯಿತು.

‘ಲಂಡನ್‌ನ ಓರಿಯಂಟಲ್‌ ಬರ್ಡ್‌ ಕ್ಲಬ್‌’ನ (ಒಬಿಸಿ) ಅಪೇಕ್ಷೆಯ ಮೇರೆಗೆ ಮೂರು ಪ್ರಮುಖ ಸಂಗತಿಗಳ ಬಗ್ಗೆ ಸಂಶೋಧನೆ ನಡೆಸಿ ಅದರ ವರದಿ­ಯನ್ನು ಸಂಸ್ಥೆಗೇ ನೀಡಿದರು. ಅವುಗ­ಳೆಂದರೆ, ‘ಮಹಾದಾಯಿ ನದಿ ಕಣಿವೆ­ಯ ಸುತ್ತಲಿನ ಪರಿಸರ ವೈವಿಧ್ಯ’, ‘ಅವಿಭ­ಜಿತ ಧಾರವಾಡ ಜಿಲ್ಲೆಯಲ್ಲಿನ ಪಕ್ಷಿಗಳು’ ಹಾಗೂ ‘ಅಣಶಿ ರಾಷ್ಟ್ರೀಯ ಉದ್ಯಾನವನದ ಪಕ್ಷಿಗಳ ಸಮೀಕ್ಷೆ’.

ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ ಉತ್ತಂಗಿಯವರು ಚಿಕ್ಕಂದಿನಿಂದಲೂ ಬಹಳ ಚುರುಕು ಸ್ವಭಾವದವರು ಹಾಗೂ ಅಷ್ಟೇ ಬುದ್ಧಿಮತ್ತೆಯುಳ್ಳ­ವರು. ಅವರು ಮಂಡಿಸಿದ ‘ಉತ್ತರ ಕರ್ನಾಟಕ ಹಾಗೂ ಉತ್ತರ ಗುಜ­ರಾತಿನ ಕಪ್ಪೆಗಳು, ಸಹಸ್ರಪಾದಿಗಳು ಹಾಗೂ ಗೆದ್ದಲು ಹುಳುಗಳ ಏಕಕೋಶ ಪರೋಪಜೀವಿಗಳ ಒಂದು ಅಧ್ಯಯನ’ ಎಂಬ ಸಂಶೋಧನಾ ಪ್ರಬಂಧ ಕರ್ನಾ­ಟಕ ವಿ.ವಿ.ಯ ಪ್ರಾಣಿಶಾಸ್ತ್ರ ವಿಭಾಗ­ದಿಂದ ಹೊರಬಂದ ಮೊದಲ ಪಿಎಚ್‌.ಡಿ ಪ್ರಬಂಧ.

ಗೆದ್ದಲು ಹುಳುಗಳ ಬಗ್ಗೆಯೇ ಏಕೆ ಸಂಶೋಧನೆ ಕೈಗೊಂಡರು ಎಂಬ ಬಗ್ಗೆ ಒಂದು ಸ್ವಾರಸ್ಯಕರ ಘಟನೆಯನ್ನು ಜೆ.ಸಿ.­ಉತ್ತಂಗಿ ಅವರ ಜೀವನ ಚರಿತ್ರೆ ಬರೆದಿರುವ ಡಾ. ಆರ್‌. ಪರಿಮಳಾ ವಿವರಿಸುವುದು ಹೀಗೆ: ‘ಜೇಮ್ಸ್‌ ತಂದೆ ಚನ್ನಪ್ಪ ಉತ್ತಂಗಿ ಸಾಕಷ್ಟು ಸಾಹಿತ್ಯ­ವನ್ನು ರಚನೆ ಮಾಡಿದ್ದರು. ಆದರೆ, ಬಹುತೇಕ ಸಾಹಿತ್ಯವನ್ನು ಗೆದ್ದಲು ಹುಳುಗಳು ತಿಂದು ಹಾಕಿದ್ದವು. ಈ ಹುಳುಗಳ ಬಗ್ಗೆ ಸಂಶೋಧನೆ ಮಾಡು­ವಂತೆ ಹೇಳಿದ್ದೇ ಯುವಕ ಜೇಮ್ಸ್‌ಗೆ ಒಬ್ಬ ಶ್ರೇಷ್ಠ ವಿಜ್ಞಾನಿಯಾಗಲು ಕಾರಣ­ವಾಯಿತು’.

ಧಾರವಾಡ ಅಂದು ಬಾಂಬೆ ಪ್ರೆಸಿ­ಡೆನ್ಸಿ­ಯಲ್ಲಿ ಇದ್ದುದರಿಂದ ಧಾರ­ವಾಡದ ಕರ್ನಾಟಕ ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದ ಉತ್ತಂಗಿ ಅವ­ರನ್ನು ಗುಜರಾತಿನ ವೀಸ ನಗರಕ್ಕೆ ಉಪ­ನ್ಯಾಸಕರಾಗಿ ಬಡ್ತಿ ನೀಡಿ ವರ್ಗಾವಣೆ ಮಾಡಲಾಯಿತು. ಅಲ್ಲಿಯೂ ಕಪ್ಪೆಗಳ ಸಂಶೋಧನೆಯನ್ನು ಅವರು ಮುಂದು­ವರೆಸಿದರು. 1957ರಲ್ಲಿ ಮರಳಿ ಕರ್ನಾಟಕ ಕಾಲೇಜಿಗೆ ವರ್ಗಾವಣೆ­ಗೊಂಡು 1958ರಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದರು. 1969­ರಿಂದ 1976ರವರೆಗೆ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಲೀಂ ಅಲಿ ಧಾರವಾಡಕ್ಕೆ ಬಂದು, ಜೇಮ್‌್ಸ ಸಂಗ್ರ­ಹಿಸಿದ್ದ ಪಕ್ಷಿ ಪ್ರಭೇದಗಳನ್ನು ಬೆರಗು­ಗಣ್ಣಿಂದ ನೋಡಿದರು. ಪಕ್ಷಿ ಸಂಗ್ರ­ಹಾ­ಲಯದಲ್ಲಿದ್ದ ಮಲಬಾರ್‌ ಟ್ರಾಗನ್‌ ಎನ್ನುವ ಪಕ್ಷಿಯನ್ನು ನೋಡಿ ಅದರ ವಾಸ್ತವ್ಯದ ವಿವರಗಳನ್ನು ವಿಚಾರಿಸಿ, ‘ಧಾರವಾಡ ಪರಿಸರದಲ್ಲಿನ ಬಹಳ ನಮೂನೆಯ ಹಕ್ಕಿಗಳ ಬಗ್ಗೆ ಅಧ್ಯಯನ ಕೈಗೊಳ್ಳಲೇಬೇಕು. ಇದಕ್ಕೆ ಬಾಂಬೆ ನ್ಯಾಚುರಲ್‌ ಹಿಸ್ಟರಿ ಸೊಸೈಟಿ ಸಹಕಾರ ನೀಡಲಿದೆ’ ಎಂದರು.

ಇಷ್ಟಂದದ್ದೇ ತಡ, ನಿವೃತ್ತಿಯ ನಂತರ ಇಂದಿನ ಹಾವೇರಿ, ಗದಗ ಜಿಲ್ಲೆ­ಗಳನ್ನೊಳಗೊಂಡ ಅವಿಭಜಿತ ಧಾರ­ವಾಡ ಜಿಲ್ಲೆಯ 54 ಕೆರೆಗಳಿಗೆ ವಲಸೆ ಬರುವ 60 ಜಾತಿಯ ವಿಶಿಷ್ಟ ಹಕ್ಕಿ­ಗ­ಳನ್ನು ಪತ್ತೆ ಮಾಡುವ ಮೂಲಕ ಪಕ್ಷಿ­ವೀಕ್ಷಕರ ಗೌರವಕ್ಕೆ ಪಾತ್ರರಾದರು. 98 ವರ್ಷಗಳ ತಮ್ಮ ಸಾರ್ಥಕ ಬದುಕಿ­ನಲ್ಲಿ ಕನಿಷ್ಠ 70 ವರ್ಷಗಳನ್ನು ಸಂಶೋ­ಧನೆ ಹಾಗೂ ಪ್ರವಾಸದಲ್ಲಿಯೇ ಕಳೆದರು.

2000 ಸೆಪ್ಟೆಂಬರ್‌ 22ರ ಮಳೆ­ಗಾಲದ ದಿನ ಧಾರವಾಡದ ಹೆಬಿಕ್‌ ಸ್ಮಾರಕ ಚರ್ಚ್‌ಗೆ ಭೇಟಿ ನೀಡಿದ್ದ ಉತ್ತಂಗಿಯವರು ಬೆಳಿಗ್ಗೆ 9.45ರಿಂದ 10.30ರವರೆಗಿನ ಅವಧಿಯಲ್ಲಿ ಚರ್ಚ್‌ ಹೊರಭಾಗದಲ್ಲಿ 27 ಪ್ರಭೇ­ದದ 80 ಪಾತರಗಿತ್ತಿಗಳನ್ನು ಗುರು­ತಿಸಿದರು.

ತಮ್ಮ 84ರ ಇಳಿವಯಸ್ಸಿ­ನಲ್ಲಿ ಅವರು ಅಷ್ಟೊಂದು ಪಾತರಗಿತ್ತಿ­ಗಳನ್ನು ಗುರುತಿಸಿದ್ದು, ಅವರ ಅಗಾಧ ಸ್ಮರಣ ಶಕ್ತಿಯ ದ್ಯೋತಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT