ADVERTISEMENT

ಜೈನರನ್ನು 2 ಎ ಗೆ ಸೇರಿಸಲು ಗಡುವು

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ಹಾಸನ: `ಜೈನ ಸಮುದಾಯವನ್ನು ಬರುವ ಮಾರ್ಚ್ 22ರೊಳಗೆ  `2ಎ~ ಅಡಿ ಸೇರಿಸಿ ಮೀಸಲಾತಿ ಸೌಲಭ್ಯಗಳನ್ನು ಕಲ್ಪಿಸದಿದ್ದರೆ ರಾಜ್ಯದಾದ್ಯಂತ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು~ ಎಂದು ಜೈನ ಮುನಿ ಗುಣಧರನಂದಿ ಮಹಾರಾಜ್ ಎಚ್ಚರಿಕೆ ನೀಡಿದ್ದಾರೆ.

ಹಾಸನದ ಜೈನ ಸಮಾಜದವರು ಆಯೋಜಿಸಿರುವ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿರುವ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. `ಜೈನರು ಶಾಂತಿ ಪ್ರಿಯರು. ಕನ್ನಡ ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಯಲ್ಲಿ ಜೈನರ ಕೊಡುಗೆಯನ್ನು ಮರೆಯಲಾಗುವುದಿಲ್ಲ. ಅನೇಕ ಜೈನ ಅರಸರು ನಾಡಿಗೆ ಹೆಮ್ಮೆ ತಂದಿದ್ದಾರೆ. ಆದರೆ ಇಂದಿನ ಸರ್ಕಾರ ಈ ಸಮುದಾಯವನ್ನು ಕಡೆಗಣಿಸುತ್ತಿದೆ. ಜೈನ ಸಮುದಾಯದವರೆಲ್ಲ ಶ್ರೀಮಂತರಲ್ಲ. ಅನೇಕ ಯುವಕರು ನಿರುದ್ಯೋಗಿಗಳಾಗಿ ಬೀದಿಗೆ ಬೀಳುವ ಸ್ಥಿತಿಯಲ್ಲಿದ್ದಾರೆ. ಮೀಸಲಾತಿ ಕಲ್ಪಿಸಿದಲ್ಲಿ ಅವರಿಗೆ ಅನುಕೂಲವಾಗುತ್ತದೆ. ಸಮುದಾಯದ ಯಾವುದೇ ಕಾರ್ಯಕ್ರಮಕ್ಕೂ ಸರ್ಕಾರ ಅನುದಾನ ನೀಡುತ್ತಿಲ್ಲ. ಇಂಥ ಹತ್ತು ಹಲವು ಸಮಸ್ಯೆಗಳನ್ನು ಸಮುದಾಯ ಎದುರಿಸುತ್ತಿದೆ.  ರಾಜ್ಯದಲ್ಲಿ ಸಮುದಾಯಕ್ಕೆ ಸೇರಿದ 16 ಲಕ್ಷ ಜನರಿದ್ದು, ಮಾರ್ಚ್ 22ರೊಳಗೆ ಬೇಡಿಕೆ ಈಡೇರಿಸದಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದರು.

 ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದರೆ ಸ್ವಾಮೀಜಿಗಳು ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ. ರಾಜ್ಯದಲ್ಲಿ ಜೈನ ಸಮುದಾಯದ ಐದು ಮಂದಿ ಶಾಸಕರಿದ್ದರೂ ಒಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಪ್ರಾತಿನಿಧ್ಯವೇ ಇಲ್ಲದ ಮೇಲೆ ನಮ್ಮ ಬೇಡಿಕೆಯನ್ನು ಈಡೇರಿಸುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಇದೇ ಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ~ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.