ADVERTISEMENT

ಜೊತೆಗೆ ಊಟ ಮಾಡಿದಾಕ್ಷಣ ಪಕ್ಷ ಸೇರಲಿಕ್ಕಾಗುತ್ತಾ: ಶಾಮನೂರು ಶಿವಶಂಕರಪ್ಪ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2018, 16:40 IST
Last Updated 12 ಮಾರ್ಚ್ 2018, 16:40 IST
ಜೊತೆಗೆ ಊಟ ಮಾಡಿದಾಕ್ಷಣ ಪಕ್ಷ ಸೇರಲಿಕ್ಕಾಗುತ್ತಾ: ಶಾಮನೂರು ಶಿವಶಂಕರಪ್ಪ
ಜೊತೆಗೆ ಊಟ ಮಾಡಿದಾಕ್ಷಣ ಪಕ್ಷ ಸೇರಲಿಕ್ಕಾಗುತ್ತಾ: ಶಾಮನೂರು ಶಿವಶಂಕರಪ್ಪ   

ದಾವಣಗೆರೆ: ‘ಜೊತೆಗೆ ಕುಳಿತು ಊಟ ಮಾಡಿದಾಕ್ಷಣ ಯಾರಾದರೂ ಪಕ್ಷ ಸೇರಲಿಕ್ಕಾಗುತ್ತಾ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ನಗರದಲ್ಲಿ ಸೋಮವಾರ ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಭಾನುವಾರ ತುಮಕೂರು ಸಿದ್ಧಗಂಗಾ ಶ್ರೀ ಗಳ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಸಹ ಬಂದಿದ್ದರು. ಜೊತೆಗೆ ಕುಳಿತು ಊಟ ಮಾಡಿದ್ದೆವು. ಹಾಗಂತ ನಾನು ಬಿಜೆಪಿ ಸೇರಿದೆ ಅಂದರೆ’ ಎಂದು ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಐದು ದಶಕಗಳಿಂದ ಕಾಂಗ್ರೆಸ್‌ನಲ್ಲೇ ಇದ್ದೇನೆ. ನಾನು ಅಪ್ಪಟ ಕಾಂಗ್ರೆಸ್ಸಿಗ. ಬಿಜೆಪಿಗೆ ಏಕೆ ಹೋಗಲಿ. ಬೇಕಿದ್ದರೆ ಯಡಿಯೂರಪ್ಪ ಅವರೇ ಕಾಂಗ್ರೆಸ್‌ಗೆ ಬರಲಿ’ ಎಂದು ಹೇಳಿದರು.

ಲಿಂಗಾಯತ ಸ್ವತಂತ್ರ ಧರ್ಮ ವಿಚಾರ ಕುರಿತಂತೆ ಸಚಿವ ಎಂ.ಬಿ.ಪಾಟೀಲ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಮನೂರು, ‘ಪಾಟೀಲ್‌ ನಮ್ಮ ಹುಡುಗ. ಆತ ಒಂದೊಂದು ಸಮಯದಲ್ಲಿ ಒಂದೊಂದು ಮಾತನಾಡುತ್ತಾನೆ. ಒಮ್ಮೊಮ್ಮೆ ಬೈಯುತ್ತಾನೆ. ಇನ್ನೊಮ್ಮೆ ಹೊಗಳುತ್ತಾನೆ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಕಿಲ್ಲ’ ಎಂದರು.

‘ಇದೇ 14ರಂದು ಸಚಿವ ಸಂಪುಟದ ಸಭೆ ಇದೆ. ಅಂದು ಏನು ನಿರ್ಧಾರವಾಗುತ್ತದೆ ಕಾದು ನೋಡಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.