ADVERTISEMENT

ಜ. 25ರಿಂದ `ಧಾರವಾಡ ಸಾಹಿತ್ಯ ಸಂಭ್ರಮ'

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

ಧಾರವಾಡ: ಜೈಪುರದಲ್ಲಿ ಪ್ರತಿ ವರ್ಷ ನಡೆಯುವ ಸಾಹಿತ್ಯ ಉತ್ಸವದಿಂದ ಸ್ಫೂರ್ತಿ ಪಡೆದ ನಗರದ ಸಾಹಿತಿಗಳು ಧಾರವಾಡದಲ್ಲೂ ಅದೇ ರೀತಿಯ ಉತ್ಸವ ಏರ್ಪಡಿಸಲು ಸಿದ್ಧತೆ ನಡೆಸಿದ್ದಾರೆ.

`ಧಾರವಾಡ ಸಾಹಿತ್ಯ ಸಂಭ್ರಮ' ಹೆಸರಿನ ಸಾಹಿತ್ಯ ಉತ್ಸವ ಜ.25 ರಿಂದ 27ರವರೆಗೆ ಇಲ್ಲಿನ ಕರ್ನಾಟಕ ವಿ.ವಿ. ಸುವರ್ಣ ಮಹೋತ್ಸವ ಭವನದಲ್ಲಿ ನಡೆಯಲಿದೆ. ಇಲ್ಲಿ ಭಾಷಣ ಇತ್ಯಾದಿಗಳಿಗಿಂತ ಓದು, ಸಂಭಾಷಣೆ, ಮಾತುಕತೆ, ಚರ್ಚೆ, ಪ್ರಶ್ನೋತ್ತರಗಳೇ ಮುಖ್ಯವಾಗಿರುತ್ತವೆ. ಇಂದಿನ ಕನ್ನಡ ಸಾಹಿತ್ಯದಲ್ಲಿ ಅರ್ಥಪೂರ್ಣವಾಗಿ ತೊಡಗಿಸಿಕೊಂಡಿರುವ 100 ಮಂದಿ ಸಾಹಿತಿಗಳು ಭಾಗವಹಿಸಲಿದ್ದಾರೆ' ಎಂದು `ಧಾರವಾಡ ಸಾಹಿತ್ಯ ಸಂಭ್ರಮ' ಅಧ್ಯಕ್ಷ ಡಾ.ಗಿರಡ್ಡಿ ಗೋವಿಂದರಾಜ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

50 ಜನ ಪ್ರಸಿದ್ಧ ಲೇಖಕರು, ಸಿನಿಮಾ ನಿರ್ದೇಶಕರು ಸಂಭ್ರಮದಲ್ಲಿ ಪಾಲ್ಗೊಳ್ಳಲು ಒಪ್ಪಿದ್ದಾರೆ. ಗುಣಮಟ್ಟವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ 300 ಜನರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಒಬ್ಬರಿಗೆ ನೋಂದಣೆ ಶುಲ್ಕ ರೂ 1,500 ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು.

`ಆತ್ಮಕಥೆಗಳ ಆಯ್ದ ಭಾಗಗಳ ಓದು, ಕಾವ್ಯ ವಾಚನ, ಹಳಗನ್ನಡ ಕಾವ್ಯಗಳ ಆಯ್ದ ಭಾಗಗಳ ಓದು, ಕಾರ್ಪೊರೇಟ್ ಜಗತ್ತು ಮತ್ತು ಕನ್ನಡ ಸಾಹಿತ್ಯ, ಸಿನಿಮಾ ಆಗಿ ಸಾಹಿತ್ಯ ಕೃತಿ, ಕತೆ ಹುಟ್ಟುವ ರೀತಿ, ಪ್ರಶಸ್ತಿಗಳ ಹಾವಳಿ ಹೆಚ್ಚಾಗಿದೆಯೇ? ಅಂತರ್ಜಾಲದಲ್ಲಿ ಕನ್ನಡ, ಲೇಖಕರೊಂದಿಗೆ ಪ್ರಶ್ನೋತ್ತರ, ಕಥೆ ಹೇಳುವ ಕಲೆ ಇತ್ಯಾದಿ ಸುಮಾರು 15 ಗೋಷ್ಠಿಗಳಿರುತ್ತವೆ' ಎಂದು ಹೇಳಿದರು.

ಸಂಘಟನೆಯ ಗೌರವಾಧ್ಯಕ್ಷ ಡಾ.ಎಂ.ಎಂ.ಕಲಬುರ್ಗಿ ಮಾತನಾಡಿ, `ಎಷ್ಟೋ ವಿದ್ಯಾರ್ಥಿಗಳಿಗೆ ಪ್ರತಿನಿಧಿ ಶುಲ್ಕವನ್ನು ಭರಿಸುವುದು ಆಗುವುದಿಲ್ಲ. ಆದ್ದರಿಂದ ಆಯ್ದ 50 ವಿದ್ಯಾರ್ಥಿಗಳಿಗೆ ಉಚಿತ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ' ಎಂದರು.

ಡಾ.ಚೆನ್ನವೀರ ಕಣವಿ, ಆರ್ಯ ಆಚಾರ್ಯ, ರಮಾಕಾಂತ ಜೋಶಿ, ಮಲ್ಲಿಕಾರ್ಜುನ ಹಿರೇಮಠ ಪತ್ರಿಕಾಗೋಷ್ಠಿಯಲ್ಲಿ ಇದ್ದರು. ಆಸಕ್ತರು ಸಂಚಾಲಕ ಸಮೀರ ಜೋಶಿ ಅವರನ್ನು (98454 47002) ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.