ಬೆಂಗಳೂರು: ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 7, 8 ಮತ್ತು 9ರಂದು ಮಡಿಕೇರಿಯಲ್ಲಿ ನಡೆಯಲಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಲಾಂಛನ ಬಿಡುಗಡೆ ಮಾಡಿ ದಿನಾಂಕಗಳನ್ನು ಪ್ರಕಟಿಸಿದ ಲೋಕೋಪಯೋಗಿ ಸಚಿವ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಎಚ್.ಸಿ. ಮಹದೇವಪ್ಪ, ಸಮ್ಮೇಳನಕ್ಕೆ ಅಂದಾಜು ರೂ2.5 ಕೋಟಿ ವೆಚ್ಚವಾಗಲಿದೆ. ಸರ್ಕಾರ ಈಗಾಗಲೇ ಬಜೆಟ್‌ನಲ್ಲಿ ರೂ1 ಕೋಟಿ ಮೀಸಲಿಟ್ಟಿದೆ ಎಂದರು.
ಜ್ಞಾನಪೀಠ ಪ್ರಶಸ್ತಿ ಪಡೆದ ಎಲ್ಲ ಕನ್ನಡ ಸಾಹಿತಿಗಳನ್ನು ಹಾಗೂ ಇದುವರೆಗಿನ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆ ವಹಿಸಿದ್ದವರನ್ನು ಸಮ್ಮೇಳನಕ್ಕೆ ಆಹ್ವಾನಿಸಲು ಉದ್ದೇಶಿಸಲಾಗಿದೆ. ಸಮ್ಮೇಳನವನ್ನು ವ್ಯವಸ್ಥಿತವಾಗಿ ಆಯೋಜಿಸಲು 28 ಉಪಸಮಿತಿಗಳನ್ನು ರಚಿಸಲಾಗಿದೆ. ಕೊಡಗಿನ ಹೋಟೆಲ್ಗಳು, ರೆಸಾರ್ಟ್ಗಳು, ಹೋಮ್ಸ್ಟೇಗಳು, ಕಲ್ಯಾಣಮಂಟಪಗಳು, ಎಲ್ಲ ವಿದ್ಯಾರ್ಥಿ ನಿಲಯಗಳು, ಶಿಕ್ಷಣ ಸಂಸ್ಥೆಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ಸಿದ್ಧತೆಗಳು ನಡೆದಿವೆ. ಕೊಡಗು ಜಿಲ್ಲೆಯ ಹೊಟೇಲ್ ಮಾಲೀಕರ ಸಂಘ ತಲಾ ಎರಡು ಕೊಠಡಿಗಳನ್ನು ಉಚಿತವಾಗಿ ನೀಡಲು ತೀರ್ಮಾನಿಸದೆ ಎಂದರು.
ಡಿ.15ರ ಒಳಗೆ ನೋಂದಾಯಿಸಿ
ಸಮ್ಮೇಳನಕ್ಕೆ ಪ್ರತಿನಿಧಿಗಳಾಗಿ ಬರಲಿಚ್ಛಿಸುವವರು ಡಿಸೆಂಬರ್ 15ರ ಒಳಗೆ ತಮ್ಮ ಹೆಸರುಗಳನ್ನು ನಿಗದಿತ ಶುಲ್ಕ ₨ 300 ನೀಡಿ ಆಯಾ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಕೋರಿದರು.
ಮಡಿಕೇರಿಯಲ್ಲಿ ಎಲ್ಲರಿಗೂ ವಸತಿ ಸೌಲಭ್ಯ ಕಲ್ಪಿಸಲು ಸಾಧ್ಯವಿಲ್ಲ. ಸಂಘಟಕರು 3–4 ಸಾವಿರ ಮಂದಿಗೆ ಮಾತ್ರ ವಸತಿ ಸೌಲಭ್ಯ ಕಲ್ಪಿಸಲು ತಯಾರಿ ನಡೆಸಿದ್ದಾರೆ. ಆದ್ದರಿಂದ ಹೆಸರು ನೋಂದಾಯಿಸಿಕೊಳ್ಳಲು ಡಿ.15 ಕೊನೆಯ ದಿನವಾಗಿದೆ ಎಂದು ತಿಳಿಸಿದರು.
ಉಟೋಪಚಾರ ವ್ಯವಸ್ಥೆಯನ್ನು ಎಲ್ಲರಿಗೂ ಕಲ್ಪಿಸಲಾಗಿದೆ. ಆದರೆ, ಒಂದೇ ಜಾಗದಲ್ಲಿ ಎಲ್ಲರಿಗೂ ಇರುವುದಿಲ್ಲ. ನೋಂದಾಯಿಸಿದ ಪ್ರತಿನಿಧಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ಅವ್ಯವಸ್ಥೆಯಾಗುವುದನ್ನು ತಡೆಯಲು ಕೂಪನ್ ನೀಡಲಾಗುವುದು ಎಂದು ವಿವರಿಸಿದರು.
ಪ್ರತಿನಿಧಿಗಳಾಗಿ ಭಾಗವಹಿಸುವ ಸರ್ಕಾರಿ ನೌಕರರಿಗೆ ಮೂರು ದಿನಗಳ ಹಾಜರಾತಿಯನ್ನು ಗಮನಿಸಿ, ಸಮ್ಮೇಳನ ಮುಗಿದ ನಂತರ ಆಯಾ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಮೂಲಕವೇ ಹಾಜರಾತಿ ಪತ್ರ ನೀಡಲಾಗುವುದು ಎಂದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ.ಪಿ. ರಮೇಶ್ ಹಾಜರಿದ್ದರು.
ಸಮ್ಮೇಳನದ ಲಾಂಛನ
ಸಮ್ಮೇಳನದ ಲಾಂಛನವನ್ನು ಕಲಾವಿದ ಬಿ.ಆರ್. ಸತೀಶ್ ರೂಪಿಸಿದ್ದು, ಕರ್ನಾಟಕ ನಕಾಶೆಯ ಒಳಗೆ ಕೊಡಗು ಜಿಲ್ಲೆಯ ನಕಾಶೆಯನ್ನು ರಚಿಸಲಾಗಿದೆ.
ರಾಜ್ಯದ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿನ ಪವಿತ್ರ ಕುಂಡಿಕೆಯ ಮೇಲೆ ಕೊಡಗಿನ ಕುಲದೇವತೆ ಕಾವೇರಿ ತಾಯಿಯ ವಿಗ್ರಹ ಹಾಗೂ ನಕಾಶೆಯ ಒಳಭಾಗದಲ್ಲಿ ಮಡಿಕೇರಿಯ ಪ್ರವಾಸಿ ಕೇಂದ್ರ ರಾಜಾಸೀಟ್‌ನ್ನು ಚಿತ್ರಿಸಲಾಗಿದೆ.
ಸಾಹಿತ್ಯ ಸಮ್ಮೇಳನ ಬಿಂಬಿಸುವ ಪುಸ್ತಕ ಹಾಗೂ ಲೇಖನಿ, ಕೊಡಗಿನ ಪ್ರವಾಸಿಗರ ಕೇಂದ್ರ ಪರ್ವತ ಮಾಂದಲ್‌ಪಟ್ಟಿ, ಅಬ್ಬಿಜಲಪಾತ, ಪ್ರಮುಖ ಬೆಳೆಗಳಾದ ಕಾಫಿ, ಏಲಕ್ಕಿ, ಕಿತ್ತಳೆ ಹಾಗೂ ಕರಿಮೆಣಸು ಚಿತ್ರಗಳನ್ನು ಈ ಲಾಂಛನ ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.