ADVERTISEMENT

ಟಿಕೆಟ್‌ಗಾಗಿ ಕೈ ನಾಯಕರ ಲಾಬಿ

ಮಕ್ಕಳು, ಆಪ್ತ ಸಂಬಂಧಿಕರಿಗೆ ಟಿಕೆಟ್‌ ನೀಡುವಂತೆ ಹೈಕಮಾಂಡ್‌ ಮೇಲೆ ಒತ್ತಡ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 19:30 IST
Last Updated 4 ಡಿಸೆಂಬರ್ 2017, 19:30 IST
ಟಿಕೆಟ್‌ಗಾಗಿ ಕೈ ನಾಯಕರ ಲಾಬಿ
ಟಿಕೆಟ್‌ಗಾಗಿ ಕೈ ನಾಯಕರ ಲಾಬಿ   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟದ ಐವರು ಸಹೋದ್ಯೋಗಿಗಳೂ ಸೇರಿ ಕಾಂಗ್ರೆಸ್ಸಿನ ಎರಡು ಡಜನ್‌ಗೂ ಹೆಚ್ಚು ಹಿರಿಯ ನಾಯಕರು ತಮ್ಮ ಪುತ್ರರು ಮತ್ತು ಸಂಬಂಧಿಕರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ಗಿಟ್ಟಿಸಿಕೊಳ್ಳಲು ತೀವ್ರ ಲಾಬಿ ಆರಂಭಿಸಿದ್ದಾರೆ.

ತಮ್ಮ ಪುತ್ರರನ್ನು ಕಣಕ್ಕಿಳಿಸಲು ತುದಿಗಾಲಲ್ಲಿ ನಿಂತಿರುವ ಪ್ರಮುಖರಲ್ಲಿ ಸಂಪುಟ ದರ್ಜೆ ಸಚಿವರಾದ ಎಚ್‌.ಸಿ. ಮಹದೇವಪ್ಪ, ಕಾಗೋಡು ತಿಮ್ಮಪ್ಪ, ರಾಮಲಿಂಗಾಗರೆಡ್ಡಿ, ಟಿ.ಬಿ. ಜಯಚಂದ್ರ ಮತ್ತು ಎ. ಮಂಜು ಸೇರಿದ್ದಾರೆ. ಈ ಪೈಕಿ ಕೆಲವರು, ತಾವು ಹಾಲಿ ಪ್ರತಿನಿಧಿಸುತ್ತಿರುವ ಕ್ಷೇತ್ರವನ್ನು ಮಕ್ಕಳಿಗೆ ಬಿಟ್ಟುಕೊಟ್ಟು, ಮತ್ತೊಂದು ಕ್ಷೇತ್ರಕ್ಕೆ ವಲಸೆ ಹೋಗಲು ತೀರ್ಮಾನಿಸಿದ್ದಾರೆ.

ಸಿದ್ದರಾಮಯ್ಯ, ತಮ್ಮ ಪುತ್ರ ಡಾ. ಯತೀಂದ್ರ ಅವರನ್ನು ಸ್ವಕ್ಷೇತ್ರ ವರುಣಾದಿಂದ ಕಣಕ್ಕಿಳಿಸಲು  ಬಯಸಿದ್ದಾರೆ. ಪಕ್ಕದ ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿಯಲು ಮುಖ್ಯಮಂತ್ರಿ ಚಿಂತನೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಲೋಕೋಪಯೋಗಿ ಸಚಿವ ಎಚ್‌.ಸಿ. ಮಹದೇವಪ್ಪ, ತಮ್ಮ ಪುತ್ರ ಸುನಿಲ್‌ ಬೋಸ್‌ಗೆ ನಂಜನಗೂಡು ಕ್ಷೇತ್ರದ ಟಿಕೆಟ್‌ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಅದು ಸಾಧ್ಯವಾಗದಿದ್ದರೆ ತಾವು ಪ್ರತಿನಿಧಿಸಿರುವ ಟಿ. ನರಸೀಪುರ ಕ್ಷೇತ್ರವನ್ನು ಮಗನಿಗೆ ಬಿಟ್ಟು ಕೊಟ್ಟು, ಬೆಂಗಳೂರಿನ ಸಿ.ವಿ. ರಾಮನ್‌ ನಗರ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿಯಲು ಯೋಚಿಸುತ್ತಿದ್ದಾರೆ.

ADVERTISEMENT

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಪಶು ಸಂಗೋಪನೆ ಸಚಿವ ಎ. ಮಂಜು ಸ್ವಕ್ಷೇತ್ರಗಳಿಂದ ಮಕ್ಕಳನ್ನು ಕಣಕ್ಕಿಳಿಸಲು ಆಸಕ್ತಿ ತೋರಿಸಿದ್ದಾರೆ.

ಸಾಗರ ಕ್ಷೇತ್ರದಿಂದ ಪುತ್ರಿ ಡಾ. ರಾಜನಂದಿನಿ ಅವರನ್ನು ಕಣಕ್ಕಿಳಿಸಲು ಕಾಗೋಡು ತಿಮ್ಮಪ್ಪ ಬಯಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಕಾಗೋಡು ತೀರ್ಮಾನಿಸಿದ್ದಾರೆ ಎಂದೂ ಗೊತ್ತಾಗಿದೆ.

ಅರಕಲಗೂಡು ಕ್ಷೇತ್ರವನ್ನು ಮಗ ಮಂಥರ್‌ಗೌಡ ಅವರಿಗೆ ಬಿಟ್ಟುಕೊಟ್ಟು ತಾವು ಬೇಲೂರು ಕ್ಷೇತ್ರದಿಂದ ಸ್ಪರ್ಧಿಸಲು ಎ. ಮಂಜು ಚಿಂತಿಸಿದ್ದಾರೆ. ಗೃಹ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿಯನ್ನು ಜಯನಗರ ವಿಧಾನಸಭಾ ಕ್ಷೇತ್ರದಿಂದ, ಕಾನೂನು ಸಚಿವ ಟಿ.ಬಿ. ಜಯಚಂದ್ರ ಪುತ್ರ ಸಂತೋಷ್‌ ಜಯಚಂದ್ರ ಅವರನ್ನು ತುಮಕೂರು ಜಿಲ್ಲೆ ಚಿಕ್ಕನಾಯಕಹಳ್ಳಿ ಕ್ಷೇತ್ರದಿಂದ ಕಣಕ್ಕಿಳಿಸಲು ಬಯಸಿದ್ದಾರೆ ಎಂದೂ ಮೂಲಗಳು ಹೇಳಿವೆ.

ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್‌ ಷರೀಫ್‌ ತಮ್ಮ ಮೊಮ್ಮಗ ಅಬ್ದುಲ್‌ ರಹಮಾನ್‌ ಷರೀಫ್‌ಗೆ ಹೆಬ್ಬಾಳ ಕ್ಷೇತ್ರ ಟಿಕೆಟ್‌ ನೀಡುವಂತೆ ಹೈಕಮಾಂಡ್‌ ಮೇಲೆ ಒತ್ತಡ ಹೇರುತ್ತಿದ್ದಾರೆ. ಹೆಬ್ಬಾಳ ಕ್ಷೇತ್ರಕ್ಕೆ 2016ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿದ್ದ ಅಬ್ದುಲ್‌ ಬಿಜೆಪಿ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದರು.

ಕೆಜಿಎಫ್‌ ಅಥವಾ ಮುಳಬಾಗಿಲು ಕ್ಷೇತ್ರದಿಂದ ಮಗಳು ರೂಪಾ ಶಶಿಧರ್‌ಗೆ ಟಿಕೆಟ್‌ ನೀಡುವಂತೆ ಪಕ್ಷದ ವರಿಷ್ಠರ ಮುಂದೆ ಹಿರಿಯ ನಾಯಕ ಕೆ.ಎಚ್‌. ಮುನಿಯಪ್ಪ ಬೇಡಿಕೆ ಇಟ್ಟಿದ್ದಾರೆ.

ರಹಮಾನ್‌ ಖಾನ್‌ ತಮ್ಮ ಪುತ್ರನಿಗೆ ಟಿಕೆಟ್‌ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರು ರಾಣಿಬೆನ್ನೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಈ ಕ್ಷೇತ್ರದಿಂದ ಮಗನಿಗೆ ಟಿಕೆಟ್‌ ಬಯಸಿದ್ದಾರೆ ಎಂದೂ ಪಕ್ಷದ ಮೂಲಗಳು ವಿವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.