ADVERTISEMENT

‘ಟಿಕೆಟ್‌ ಕೊಟ್ಟರೆ ಪಕ್ಷ ಸೇರಲು ಹಲವರು ಸಿದ್ಧ’

ಬಿಜೆಪಿ ಹಲವರು ಸಂಪರ್ಕದಲ್ಲಿದ್ದಾರೆ: ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 19:30 IST
Last Updated 23 ಅಕ್ಟೋಬರ್ 2017, 19:30 IST

ಬೆಂಗಳೂರು: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೊಟ್ಟರೆ ಕಾಂಗ್ರೆಸ್‌ ಸೇರಲು ಬೇರೆ ಪಕ್ಷಗಳ ಕೆಲವು ನಾಯಕರು ಸಿದ್ಧರಿದ್ದಾರೆ’ ಎಂದು ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಜಿ. ಪರಮೇಶ್ವರ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಂಗಳವಾರ ಮಾತನಾಡಿದ ಅವರು, ‘ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ಸಾಮರ್ಥ್ಯ ಇಲ್ಲದ ಕ್ಷೇತ್ರಗಳಲ್ಲಿ ಇತರ ಪಕ್ಷಗಳಿಂದ ಬಂದವರಿಗೆ ಟಿಕೆಟ್‌ ನೀಡುವ ಬಗ್ಗೆ ಚಿಂತಿಸಲಾಗುವುದು’ ಎಂದರು.

‘ಜೆಡಿಎಸ್ ಪಕ್ಷದ ಏಳು ಶಾಸಕರು ಕಾಂಗ್ರೆಸ್‌ ಸೇರಲು ಸಿದ್ಧರಾಗಿದ್ದಾರೆ. ಕೆಲವು ಬಿಜೆಪಿ ಶಾಸಕರೂ ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ, ಯಾರೇ ಬಂದರೂ ಪಕ್ಷಕ್ಕೆ ಸೇರಿಸಿಕೊಳ್ಳುವುದು, ಬಿಡೋದು ನಮ್ಮ ಇಷ್ಟ’ ಎಂದರು.

ADVERTISEMENT

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಚುನಾವಣೆ ವೇಳೆ ನಮ್ಮ ಪಕ್ಷದಿಂದಲೂ ಕೆಲವರು ಬಿಜೆಪಿಗೆ ಹೋಗಬಹುದು. ಹಾಗೆಂದು, ದೊಡ್ಡ ಪ್ರಮಾಣದಲ್ಲಿ ಹೋಗಲ್ಲ’ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಕ್ಷೇತ್ರ ಮತ್ತು ಅಲ್ಲಿ ನಮ್ಮ ಅಭ್ಯರ್ಥಿಯ ಸಾಮರ್ಥ್ಯ ನೋಡಿಕೊಂಡು ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಯಲಿದೆ’ ಎಂದರು.

‘ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರ ಬದಲಾವಣೆ ಮಾಡುವ ಯಾವುದೇ ವಿಚಾರ ಇಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.

ರಾಹುಲ್‌ ಭಾಗಿ:

‘ಚಿಕ್ಕಮಗಳೂರಿನಲ್ಲಿ ನ. 19ರಂದು ನಡೆಯಲಿರುವ ಇಂದಿರಾ ಗಾಂಧಿ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬರಲಿದ್ದಾರೆ. ಈ ಕಾರ್ಯಕ್ರಮದ ಮೂಲಕ ಇಂದಿರಾ ಗಾಂಧಿ ಅವರ ಜನಪ್ರಿಯ‌ ಯೋಜನೆಗಳನ್ನು ಜನರಿಗೆ ಮನವರಿಕೆ ‌ಮಾಡಲಾಗುವುದು’ ಎಂದು ಪರಮೇಶ್ವರ ತಿಳಿಸಿದರು.

‘ಕಾರ್ಯಕ್ರಮದ ಸಿದ್ಧತೆಗಾಗಿ ಪೂರ್ವಭಾವಿ ಸಭೆ ನಡೆಸಿದ್ದೇವೆ. 20ರಂದು ನಡೆಯಲಿರುವ ಕೆಲವು ಕಾರ್ಯಕ್ರಮಗಳು ಮತ್ತು ಮರುದಿನ ಕುಮಟಾದಲ್ಲಿ ಮೀನುಗಾರರ ಸಮಾವೇಶದಲ್ಲೂ ರಾಹುಲ್ ಭಾಗವಹಿಸುವರು’ ಎಂದರು.

‘ರಾಜ್ಯ ಪ್ರವಾಸ ಸಂದರ್ಭದಲ್ಲಿ ರಾಹುಲ್ ಗಾಂಧಿ ಮಠಗಳಿಗೆ ಭೇಟಿ ನೀಡುವಂತೆ ಸಭೆಯಲ್ಲಿ ಕೆಲವರು ಸಲಹೆ ನೀಡಿದ್ದಾರೆ. ಈ ವಿಷಯವನ್ನು ರಾಹುಲ್‌ ಗಮನಕ್ಕೆ ತರಲಾಗುವುದು’ ಎಂದೂ ಅವರು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್, ಸಚಿವರಾದ ಕಾಗೋಡು ತಿಮ್ಮಪ್ಪ, ಎ. ಮಂಜು, ಯು.ಟಿ. ಖಾದರ್ ಪ್ರಮೋದ್ ಮಧ್ವರಾಜ್, ರೋಷನ್ ಬೇಗ್ ಸಭೆಯಲ್ಲಿದ್ದರು. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ಕೊಡಗು ಜಿಲ್ಲೆಯ ಪಕ್ಷದ ಪ್ರಮುಖರೂ ಇದ್ದರು.

* ಟಿಪ್ಪು ಜಯಂತಿ ಆಚರಣೆ ಸರ್ಕಾರಿ ಕಾರ್ಯಕ್ರಮ. ಸರ್ಕಾರದ ಕಾರ್ಯಕ್ರಮಕ್ಕೆ ಸಂವಿಧಾನಾತ್ಮಕವಾಗಿ ಚುನಾಯಿತ ಪ್ರತಿನಿಧಿಗಳು ಬರಬೇಕು. ಬರುವುದಿಲ್ಲ ಎನ್ನುವುದು ಅವರ ಮನಸ್ಥಿತಿ ತೋರಿಸುತ್ತದೆ

–ಜಿ. ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.