ADVERTISEMENT

ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ಪ್ರತಿಭಟನೆ ನಾಳೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2016, 19:30 IST
Last Updated 6 ನವೆಂಬರ್ 2016, 19:30 IST
ಟಿಪ್ಪು
ಟಿಪ್ಪು   

ಬೆಂಗಳೂರು:  ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಇದೇ 8 ರಂದು ರಾಜ್ಯದಾದ್ಯಂತ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

ನಾಲ್ಕು ದಿನಗಳ ಕಾಲ ಕಾರ್ಯಕರ್ತರಿಗಾಗಿ ಹಮ್ಮಿಕೊಂಡಿದ್ದ ಪ್ರಶಿಕ್ಷಣ ಶಿಬಿರದ ಸಮಾರೋಪ ಸಮಾರಂಭದ  ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಟಿಪ್ಪು ಜಯಂತಿ ಆಚರಿಸಬಾರದು ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಹಾಗಿದ್ದರೂ  ಜಯಂತಿ ಆಚರಿಸಿಯೆ ತೀರುವುದಾಗಿ ಸರ್ಕಾರಕ್ಕೆ ಹಟ ಮಾಡುತ್ತಿದೆ ಎಂದು ದೂರಿದರು.

ಕಳೆದ ವರ್ಷ ಟಿಪ್ಪು ಜಯಂತಿ ಆಚರಣೆ ವೇಳೆ ಮಡಿಕೇರಿಯಲ್ಲಿ ಸಂಘದ ಕಾರ್ಯಕರ್ತ ಕುಟ್ಟಪ್ಪ ಅವರ  ಕೊಲೆಯಾಗಿತ್ತು. ಇಂತಹ ಆಚರಣೆ ಮೂಲಕ ಕೋಮುಸಾಮರಸ್ಯ ಕದಡಲು ಸರ್ಕಾರ ಮುಂದಾಗಿದೆ ಎಂದು ದೂಷಿಸಿದರು.

ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ, ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್ ಇಂಡಿಯಾ ಹಾಗೂ ಕರ್ನಾಟಕ ಫೋರಂ ಫಾರ್‌ ಡಿಗ್ನಿಟಿ ಅಂತಹ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಮೊದಲು ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,  ಒಂದು ವರ್ಷ ದಣಿಯವರಿಯದೆ ಕೆಲಸ ಮಾಡಿದರೆ ಕಾಂಗ್ರೆಸ್‌ ಅನ್ನು ಮಣಿಸಲು ಸಾಧ್ಯ. ಕಾಂಗ್ರೆಸ್‌ ಆಡಳಿತ ಕೊನೆಗಾಣಿಸಲು ಇಂದೇ ಸಂಕಲ್ಪ ಮಾಡೋಣ ಎಂದರು.

ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ  ನಡೆಯುತ್ತಿದ್ದು, ಹತ್ಯೆ ಮಾಡಲಾಗುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಇದ್ದು, ಪರಿಹಾರ ಕಾಮಗಾರಿ ಆರಂಭಿಸುವಲ್ಲಿ ಸರ್ಕಾರ ಆಸಕ್ತಿ ತೋರಿಲ್ಲ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸೋಮವಾರದಿಂದಲೇ ರಾಜ್ಯ ಪ್ರವಾಸ ಆರಂಭಿಸಲಾಗುವುದು ಎಂದು ಹೇಳಿದರು.

ಕೇಂದ್ರ ಯೋಜನಾ ಮತ್ತು ಸಾಂಖ್ಯಿಕ ಸಚಿವ ಡಿ.ವಿ. ಸದಾನಂದಗೌಡ ಅವರು ಮಾತನಾಡಿ, ಬಿಜೆಪಿ ಕಾರ್ಯಕರ್ತರ ಹತ್ಯೆ ಪ್ರಕರಣಗಳನ್ನು ಗಮನಿಸಿದರೆ ಒಂದೇ ರೀತಿಯಲ್ಲಿ ಕಾರ್ಯಾಚರಣೆ ನಡೆದಿರುವುದು ಸ್ಪಷ್ಟವಾಗುತ್ತದೆ. ಇಂತಹ ಹತ್ಯೆಗಳಿಗೆ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂಬ ಸಂಶಯ ಮೂಡುತ್ತಿದೆ ಎಂದು ದೂರಿದರು.

ಶೆಟ್ಟರ್‌ ಆಗ್ರಹ: ಸಂಘಪರಿವಾರ ಕಾರ್ಯಕರ್ತರ ಮೇಲೆ ದೇಶವಿರೋಧಿ ಶಕ್ತಿಗಳು ನಿರಂತರವಾಗಿ ಹಲ್ಲೆ ನಡೆಸುತ್ತಿವೆ.  ಕೋಮುವಾದಿ ಸಂಘಟನೆಗಳನ್ನು ಸದೆ ಬಡಿಯಲು ಗೃಹ ಸಚಿವ ಪರಮೇಶ್ವರ್‌ ಅವರು ಮುಂದಾಗಬೇಕು ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಅವರು ಆಗ್ರಹಿಸಿದ್ದಾರೆ.

ಕೇರಳ ಮೂಲದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ರಾಜ್ಯದಲ್ಲೂ ತನ್ನ ಕಬಂಧ ಬಾಹುವನ್ನು ಚಾಚಲು ಹುನ್ನಾರ ನಡೆಸುತ್ತಿದೆ. ಭಯೋತ್ಪಾದನಾ ಸಿದ್ಧಾಂತಗಳಿಗೆ ಬೆಂಬಲ ನೀಡುವ ಈ ಸಂಘಟನೆ ವಿರುದ್ಧ ಕೂಡಲೇ ಕ್ರಮ ಜರುಗಿಸುವಂತೆ ಅವರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT