ADVERTISEMENT

ಟಿಪ್ಪು ಜಯಂತಿ ವಿವಾದ ಕೈಬಿಟ್ಟು ರೈತರ ಸಂಕಷ್ಟಗಳತ್ತ ಸರ್ಕಾರ ಗಮನ ಕೊಡಲಿ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 10:46 IST
Last Updated 23 ಅಕ್ಟೋಬರ್ 2017, 10:46 IST
ಟಿಪ್ಪು ಜಯಂತಿ ವಿವಾದ ಕೈಬಿಟ್ಟು ರೈತರ ಸಂಕಷ್ಟಗಳತ್ತ ಸರ್ಕಾರ ಗಮನ ಕೊಡಲಿ: ದೇವೇಗೌಡ
ಟಿಪ್ಪು ಜಯಂತಿ ವಿವಾದ ಕೈಬಿಟ್ಟು ರೈತರ ಸಂಕಷ್ಟಗಳತ್ತ ಸರ್ಕಾರ ಗಮನ ಕೊಡಲಿ: ದೇವೇಗೌಡ   

ಚಿತ್ರದುರ್ಗ: 'ಟಿಪ್ಪು ಜಯಂತಿಯ ವಿವಾದ ಎಬ್ಬಿಸಿ‌ ಕಾಲಹರಣ ಮಾಡುವ ಬದಲು ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕು' ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ಆಗ್ರಹಿಸಿದರು.

ತಾಲ್ಲೂಕಿನ ಭರಮಸಾಗರದಲ್ಲಿ ಕೀಟಬಾಧೆಯಿಂದ ನಾಶವಾಗಿರುವ ಜಮೀನುಗಳಿಗೆ ಸೋಮವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ' ಈ ಭಾಗದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಈ ವೇಳೆ ಇಲ್ಲಿನ ರೈತರ ಹೊಲಗಳಿಗೆ ಭೇಟಿ ನೀಡಿದೆ. ಈ ಭಾಗದಲ್ಲಿ ಮೆಕ್ಕೆಜೋಳಕ್ಕೆ ಕೀಟಬಾಧೆ ತಗುಲಿದೆ, ಹೀಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ, ಎಕರೆಗೆ 20, 25 ಚೀಲ ಬೆಳೆಯುತ್ತಿದ್ದರು. ಆದ್ರೆ, ಈಗ ಏನು ಸಿಗದಂತಾಗಿದೆ ಎಂದರು.

ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗಳ ಬಳಿ ಈ ಬಗ್ಗೆ ಗಮನ ಸೆಳೆಯುತ್ತೇನೆ. ಕೇಂದ್ರ, ರಾಜ್ಯ ಸರ್ಕಾರಗಳು ಅನಗತ್ಯ ಕೆಸರೆರಚಾಟ ಬಿಟ್ಟು ರೈತರ ಸಂಕಷ್ಟದ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು. 'ಈ ಹಿಂದೆ ಹಿರಿಯೂರು ಭಾಗದ ತೆಂಗು, ಅಡಿಕೆ ತೋಟಗಳಿಗೆ ಭೇಟಿ ನೀಡಿ, ಬೆಳೆನಷ್ಟದ ಬಗ್ಗೆ ಸರ್ಕಾರದ ಬಗ್ಗೆ ಗಮನಸೆಳೆದಿದ್ದೆ. ಕೃಷಿ ಸಚಿವರಿಗೆ, ಕೇಂದ್ರದ ಗಮನಕ್ಕೂ ತಂದಿದ್ದೆ. ಆದರೆ ಕೇಂದ್ರದ ಕೃಷಿ ಸಚಿವರು ರಾಜ್ಯಕ್ಕೆ ಪತ್ರ ಬರೆದು ಈಗಾಗಲೇ ನೀಡಿರುವ ಬೆಳೆನಷ್ಟ ಪರಿಹಾರದ ಹಣದಲ್ಲೇ ತೋಟದ ಬೆಳೆಹಾನಿ ಪರಿಹಾರ ಸೇರಿಸಿ ಎಂದು ಪ್ರತಿಕ್ರಿಯಿಸಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಮಂಗಳೂರಿಗೆ ಹೋಗಿ ಪರಿವರ್ತನಾ ರ್ಯಾಲಿ ಮಾಡಿ ಏನು ಸಾಧಿಸುತ್ತಾರೆ ? ಎಂದು ಬಿಜೆಪಿಯವರನ್ನು ಪ್ರಶ್ನಿಸಿದ ಗೌಡರು, 'ಅವರು ಯಾರನ್ನು ಪರಿವರ್ತನೆ ಮಾಡಿದ್ದಾರೆ. ರೈತರ ಬಗ್ಗೆ ಕಾಳಜಿ ಇದ್ರೆ ಪ್ರಧಾನಿ ಮೋದಿ ಜಮೀನುಗಳಿಗೆ ಬಂದು ನೋಡಲಿ' ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.