ADVERTISEMENT

ಟಿ.ವಿ.9 ನಿರೂಪಕನಿಂದ ಹಣಕ್ಕಾಗಿ ಬೆದರಿಕೆ: ಎಚ್‌.ಡಿ.ಕುಮಾರಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2017, 19:30 IST
Last Updated 14 ಡಿಸೆಂಬರ್ 2017, 19:30 IST
ಟಿ.ವಿ.9 ನಿರೂಪಕನಿಂದ ಹಣಕ್ಕಾಗಿ ಬೆದರಿಕೆ: ಎಚ್‌.ಡಿ.ಕುಮಾರಸ್ವಾಮಿ ಆರೋಪ
ಟಿ.ವಿ.9 ನಿರೂಪಕನಿಂದ ಹಣಕ್ಕಾಗಿ ಬೆದರಿಕೆ: ಎಚ್‌.ಡಿ.ಕುಮಾರಸ್ವಾಮಿ ಆರೋಪ   

ಬೆಂಗಳೂರು: ‘ಹಣ ನೀಡದಿದ್ದರೆ ಚುನಾವಣೆಯಲ್ಲಿ ಗೆಲ್ಲದಂತೆ ನೋಡಿಕೊಳ್ಳುವುದಾಗಿ ಟಿ.ವಿ 9  ನಿರೂಪಕ ರಂಗನಾಥ್ ಭಾರದ್ವಾಜ್ ನಮ್ಮ ಪಕ್ಷದ ನಾಯಕರೊಬ್ಬರಿಗೆ ಬೆದರಿಕೆ ಹಾಕಿದ್ದಾರೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

‘ಹಣಕ್ಕಾಗಿ ಬೆದರಿಕೆ ಹಾಕಿರುವ ಧ್ವನಿ ಮುದ್ರಿಕೆ ನನ್ನ ಬಳಿ ಇದೆ’ ಎಂದು ಅವರು ಗುರುವಾರ ತಿಳಿಸಿದರು.

‘ಕೆಲ ದಿನಗಳ ಹಿಂದೆ ರಂಗನಾಥ್ ಭಾರದ್ವಾಜ್ ನನ್ನನ್ನು ಸಂವಾದಕ್ಕೆ ಆಹ್ವಾನಿಸಿದ್ದರು. ಅಲ್ಲಿ ಅನಗತ್ಯ  ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಸಿಟ್ಟು ತರಿಸಿದ್ದರು. ಸಂವಾದದಿಂದ ಅರ್ಧಕ್ಕೆ ಹೊರಬಂದೆ. ಆ ಸಂದರ್ಭದಲ್ಲಿ ನಾನಾಡಿದ ಆಕ್ಷೇಪಾರ್ಹ ಮಾತನ್ನು ರೆಕಾರ್ಡ್‌ ಮಾಡಿಕೊಂಡು ಸಾಮಾಜಿಕ ಜಾಲತಾಣದ ಮೂಲಕ ವೈರಲ್‌ ಮಾಡಿದ್ದಾರೆ. ಇದರಿಂದ ನನ್ನ ಘನತೆಗೆ ಕುಂದುಂಟಾಗಿದೆ. ಈ ಸಂಬಂಧ  ಭಾರದ್ವಾಜ್ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುತ್ತೇನೆ’ ಎಂದು ಅವರು ಹೇಳಿದರು.

ADVERTISEMENT

‘ತಾಳ್ಮೆಗೆಟ್ಟು ಬೈದಿದ್ದು ನಿಜ. ಗ್ರಾಮೀಣ ಭಾಗದಲ್ಲಿ ಇಂತಹ ಪದವನ್ನು ಸಹಜವಾಗಿ ಬಳಸುತ್ತಾರೆ. ನಾವು ಶೂದ್ರರು, ಇಂತಹ ಪದಗಳನ್ನು ಬಳಸುತ್ತೇವೆ. ನಾನು ಬೈದ ಪದವನ್ನು ವೈರಲ್‌ ಮಾಡುವ ಮೂಲಕ, ನನ್ನನ್ನು ಸರ್ವ ನಾಶ ಮಾಡಲು ಹೊರಟಿದ್ದಾರೆ’ ಎಂದು ಅವರು ಆರೋಪಿಸಿದರು.

‘ಮಾಧ್ಯಮಗಳಲ್ಲಿ ಇರುವವರು ಜವಾಬ್ದಾರಿಯಿಂದ ವರ್ತಿಸಬೇಕು. ಹುಡುಗಾಟಿಕೆ ಮಾಡಬಾರದು’ ಎಂದು ಕುಮಾರಸ್ವಾಮಿ ಹೇಳಿದರು.

ರಂಗನಾಥ್‌ ಭಾರದ್ವಾಜ್‌ ಪ್ರತಿಕ್ರಿಯೆಗೆ ‘ಪ್ರಜಾವಾಣಿ’ ಪ್ರಯತ್ನಿಸಿತು. ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಅಕ್ರಮ ಬಯಲು

ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್‌ ₹ 2,000 ಕೋಟಿ ಮೌಲ್ಯದ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ ಹಗರಣವನ್ನು ಸದ್ಯವೇ ದಾಖಲೆಗಳ ಸಮೇತ ಬಯಲಿಗೆಳೆಯುವುದಾಗಿ ಕುಮಾರಸ್ವಾಮಿ ಹೇಳಿದರು.

ಇಷ್ಟು ಪ್ರಮಾಣದ ಅದಿರನ್ನು ಹೇಗೆ ರಫ್ತು ಮಾಡಲಾಯಿತು. ಇದಕ್ಕೆ ಕಾರಣಕರ್ತರು ಯಾರು ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಬೇಕು. ಗುಜರಾತ್‌ ಫಲಿತಾಂಶ ಬಂದ ಬಳಿಕ ಎಲ್ಲ ದಾಖಲೆಗಳನ್ನೂ ಬಿಡುಗಡೆ ಮಾಡುತ್ತೇನೆ ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕೋಮು ಸಂಘರ್ಷ ನಡೆಯುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ತುಟಿ ಬಿಚ್ಚಿಲ್ಲ. ಗಲಭೆ
ಯನ್ನು ಆರಂಭದಲ್ಲೇ ತಡೆಯಬಹುದಿತ್ತು. ಈಗ ಸೌಹಾರ್ದದ ಬಗ್ಗೆ ಜಾಹೀರಾತು ನೀಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ದಕ್ಷಿಣ ಕನ್ನಡದಲ್ಲಿ ಕೋಮು ಗಲಭೆ ನಡೆಯುವಾಗ ಸರ್ಕಾರ ಕಣ್ಣು ಮುಚ್ಚಿ ಕುಳಿತಿತ್ತು. ಆದರೆ, ಈಗ ಸಚಿವ ರಮಾನಾಥ ರೈ ಸೌಹಾರ್ದ ಯಾತ್ರೆ ಮಾಡಿದ್ದಾರೆ. ಬೆಂಕಿ ಇಟ್ಟ ಮೇಲೆ ಯಾವ ಪುರುಷಾರ್ಥಕ್ಕಾಗಿ ಸೌಹಾರ್ದ ಯಾತ್ರೆ ಎಂದು ಕುಮಾರ್‌ ಸ್ವಾಮಿ ಅವರು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.