ADVERTISEMENT

ಟ್ಯಾಕ್ಸಿಗಳಿಗೂ ಸ್ಪೀಡ್‌ ಗವರ್ನರ್ ಕಡ್ಡಾಯ

ಟ್ಯಾಕ್ಸಿ ಮಾಲೀಕರು, ಚಾಲಕರ ವಿರೋಧ

ವಿಜಯಕುಮಾರ್ ಸಿಗರನಹಳ್ಳಿ
Published 1 ಜುಲೈ 2017, 19:30 IST
Last Updated 1 ಜುಲೈ 2017, 19:30 IST
ಟ್ಯಾಕ್ಸಿಗಳಿಗೂ ಸ್ಪೀಡ್‌ ಗವರ್ನರ್ ಕಡ್ಡಾಯ
ಟ್ಯಾಕ್ಸಿಗಳಿಗೂ ಸ್ಪೀಡ್‌ ಗವರ್ನರ್ ಕಡ್ಡಾಯ   

ಬೆಂಗಳೂರು: ರಾಜ್ಯದಲ್ಲಿರುವ ಎಲ್ಲಾ ಟ್ಯಾಕ್ಸಿಗಳಿಗೆ ಸ್ಪೀಡ್ ಗವರ್ನರ್‌ ಕಡ್ಡಾಯವಾಗಿ ಅಳವಡಿಸಲು ಸಾರಿಗೆ ಇಲಾಖೆ ಮುಂದಾಗಿದ್ದು, ಈ ಸಂಬಂಧ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ.

2017ರ ಮೇ 1ರಂದು ಅಧಿಸೂಚನೆ ಹೊರಡಿಸಿರುವ ಕೇಂದ್ರ ಸರ್ಕಾರ ಹೊಸದಾಗಿ ರಸ್ತೆಗೆ ಇಳಿಯುವ ಎಲ್ಲಾ ವಾಹನಗಳಿಗೆ (ಟ್ಯಾಕ್ಸಿಗಳೂ ಸೇರಿ) ಸ್ಪೀಡ್‌ ಗವರ್ನರ್ ಅಳವಡಿಕೆ ಕಡ್ಡಾಯಗೊಳಿಸಿದೆ.

ಈ ಮೊದಲು, ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಗೆ  ತಿದ್ದುಪಡಿ ಮಾಡಿ 2015 ಏಪ್ರಿಲ್‌ 15ರಂದು ಅಧಿಸೂಚನೆ ಹೊರಡಿಸಿತ್ತು. ಚಾಲಕ ಸೇರಿ ಎಂಟು ಸೀಟು ಮತ್ತು 3,500 ಕೆ.ಜಿಗೂ ಕಡಿಮೆ ತೂಕ ಇರುವ  ನಾಲ್ಕು ಚಕ್ರದ ವಾಹನಗಳಿಗೆ ಸ್ಪೀಡ್‌ ಗವರ್ನರ್ ಅಳವಡಿಕೆಯಿಂದ ವಿನಾಯಿತಿ ನೀಡಿತ್ತು. ಎರಡೇ ವರ್ಷಗಳಲ್ಲಿ ಕೇಂದ್ರದ ನಿರ್ಧಾರ ಬದಲಾಗಿದೆ.

ADVERTISEMENT

ಹಳೇ ವಾಹನಗಳಿಗೂ ಕಡ್ಡಾಯ: ಹೊಸ ವಾಹನಗಳ ಜೊತೆಗೆ ಹಳೆಯ ಟ್ಯಾಕ್ಸಿಗಳಿಗೂ ಸ್ಪೀಡ್‌ ಗವರ್ನರ್   ಕಡ್ಡಾಯಗೊಳಿಸಲು ಈಗ ರಾಜ್ಯ ಸಾರಿಗೆ ಇಲಾಖೆ ಮುಂದಾಗಿದೆ.

‘ಟ್ಯಾಕ್ಸಿಗಳಿಗಿದ್ದ  ವಿನಾಯಿತಿಯನ್ನು ಕೇಂದ್ರ ತೆಗೆದು ಹಾಕಿರುವ ಕಾರಣ ಎಲ್ಲಾ ಟ್ಯಾಕ್ಸಿಗಳಿಗೂ ಈ ನಿಯಮ ಕಡ್ಡಾಯಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ’ ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಸದ್ಯದಲ್ಲೇ ಅಧಿಸೂಚನೆ ಹೊರ ಬೀಳಲಿದೆ’ ಎಂದು ಅವರು ಮಾಹಿತಿ ನೀಡಿದರು.

ಟ್ಯಾಕ್ಸಿ ಮಾಲೀಕರ ವಿರೋಧ

ಹಳೇ ಟ್ಯಾಕ್ಸಿಗಳಿಗೂ ಸ್ಪೀಡ್ ಗವರ್ನರ್ ಅಳವಡಿಕೆಗೆ  ಮುಂದಾಗಿರುವ ಸಾರಿಗೆ ಇಲಾಖೆ ಕ್ರಮಕ್ಕೆ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರು ವಿರೋಧ ವ್ಯಕ್ತವಾಗಿದೆ.

‘ಸ್ಪೀಡ್‌ ಗವರ್ನರ್ ಉಪಕರಣ ಪೂರೈಸುವ ಕಂಪೆನಿಗೆ ಅನುಕೂಲ ಮಾಡಿಕೊಡುವ ಸಲುವಾಗಿಯೇ ಈ ತೀರ್ಮಾನ ಕೈಗೊಳ್ಳಲಾಗುತ್ತಿದೆ’ ಎಂದು ದಕ್ಷಿಣ ಭಾರತ ವಾಣಿಜ್ಯ ವಾಹನಗಳ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಷಣ್ಮುಖಪ್ಪ ಆರೋಪಿಸಿದ್ದಾರೆ.

‘ಹೊರ ರಾಜ್ಯಗಳಲ್ಲಿ ಹಳೇ ಟ್ಯಾಕ್ಸಿಗಳಿಗೆ ವಿನಾಯಿತಿ ಇದೆ. ಕರ್ನಾಟಕದಲ್ಲಿ ಖಾಸಗಿ ವಾಹನಗಳನ್ನು(ಬಿಳಿ ಬಣ್ಣದ ಬೋರ್ಡ್‌) ಹೊರಗಿಟ್ಟು  ಟ್ಯಾಕ್ಸಿಗಳಿಗೆ (ಹಳದಿ ಬಣ್ಣದ ಬೋರ್ಡ್‌) ಈ ನಿಯಮ ಹೇರುವುದು ತಾರತಮ್ಯ ನೀತಿ’ ಎಂದರು.

‘ಅಂತರ ರಾಷ್ಟ್ರೀಯ ಗುಣಮಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಆಗುತ್ತಿವೆ. ಈ ರಸ್ತೆಗಳಲ್ಲಿ ವೇಗದ ಮಿತಿ ಗಂಟೆಗೆ 80 ಕಿ.ಮೀ ಇದ್ದರೆ ವಾಹನ ಚಾಲನೆ ಮಾಡುವುದೇ ಕಷ್ಟ’ ಎಂದು  ಅವರು ಅಭಿಪ್ರಾಯಪಟ್ಟರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಹಳೇ ಟ್ಯಾಕ್ಸಿಗಳಿಗೆ ಸ್ಪೀಡ್ ಗವರ್ನರ್ ಕಡ್ಡಾಯ ಮಾಡಬಾರದೆಂದು ಮನವಿ ಮಾಡಲಾಗುವುದು ಎಂದೂ ಷಣ್ಮುಖಪ್ಪ  ‘ಪ್ರಜಾವಾಣಿ’ಗೆ ತಿಳಿಸಿದರು.

ಮುಖ್ಯಾಂಶಗಳು

* ಹೊಸ ವಾಹನಗಳಿಗೆ ಸ್ಪೀಡ್‌ ಗವರ್ನರ್ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ
* ಹಳೇ ಟ್ಯಾಕ್ಸಿಗಳಿಗೂ ಕಡ್ಡಾಯ ಅಳವಡಿಕೆಗೆ ಮುಂದಾದ ರಾಜ್ಯದ ಸಾರಿಗೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.