ADVERTISEMENT

ಡಾ.ಶಾಂತ ಅಮಾನತು ಆದೇಶ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 19:40 IST
Last Updated 13 ಏಪ್ರಿಲ್ 2018, 19:40 IST

ಬೆಂಗಳೂರು: ಕರ್ತವ್ಯಲೋಪ ಮತ್ತು ದುರ್ನಡತೆ ಆರೋಪದಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ವೈದ್ಯಾಧಿಕಾರಿ ಡಾ.ಪಿ.ಶಾಂತ ಅವರ ಅಮಾನತು ರದ್ದುಪಡಿಸಿದ್ದ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.

ಕೆಎಟಿ ಆದೇಶ ಪ್ರಶ್ನಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿದೆ.

ವಿಚಾರಣೆ ವೇಳೆ ಸರ್ಕಾರದ ಪರ ಹಾಜರಿದ್ದ ವಕೀಲೆ ಪ್ರತಿಮಾ ಹೊನ್ನಾಪುರ, ‘ಶಾಂತ, ಸಾವಿರಾರು ಮಹಿಳೆಯರಿಗೆ ಗರ್ಭಕೋಶ ಶಸ್ತ್ರಚಿಕಿತ್ಸೆ ಮಾಡಿಸಿದ್ದರು. ಇವರಲ್ಲಿ 500ಕ್ಕೂ ಹೆಚ್ಚು ಮಹಿಳೆಯರ ಗರ್ಭಕೋಶಗಳನ್ನು ಕಾನೂನು ಬಾಹಿರವಾಗಿ ತೆಗೆಯಲಾಗಿದೆ ಎಂಬ ಆರೋಪವಿದೆ’ ಎಂದರು.

ADVERTISEMENT

‘ಈ ಕುರಿತಂತೆ ಶಾಂತ ವಿರುದ್ಧದ ವಿಚಾರಣೆ ಪೂರ್ಣಗೊಂಡಿದೆ. ಶೀಘ್ರವೇ ವರದಿ ಸಲ್ಲಿಸಲಾಗುವುದು. ಆದರೆ, ಕೆಎಟಿ ಅಮಾನತು ಆದೇಶ ರದ್ದುಪಡಿಸಿದ್ದು ಇದಕ್ಕೆ ತಡೆ ನೀಡಬೇಕು’ ಎಂದು ಕೋರಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಕೆಎಟಿ ಆದೇಶಕ್ಕೆ ತಡೆ ನೀಡಿ ವಿಚಾರಣೆ ಮುಂದೂಡಿದೆ. ಡಾ.ಶಾಂತ ವಿರುದ್ಧ ಸ್ಥಳೀಯರು ಮತ್ತು ವಂದೇ ಮಾತರಂ ಯುವಕ ಸ್ವಯಂ ಸೇವಾ ಸಮಿತಿ ಸದಸ್ಯರು ಆರೋಗ್ಯ ಇಲಾಖೆಗೆ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.