ADVERTISEMENT

ಡಾ. ಆಚಾರ್ಯ ಅವರಿಗೆ ವಿಧಾನಸಭೆ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 9:55 IST
Last Updated 20 ಮಾರ್ಚ್ 2012, 9:55 IST

ಬೆಂಗಳೂರು (ಪಿಟಿಐ): ಹೃದಯಾಘಾತದಿಂದ ಕಳೆದ ತಿಂಗಳು ನಿಧನರಾದ ದಿವಂಗತ ಸಚಿವ ಡಾ. ವಿ.ಎಸ್. ಆಚಾರ್ಯ ಅವರಿಗೆ ರಾಜ್ಯ ವಿಧಾನಸಭೆ ಮಂಗಳವಾರ ತನ್ನ ಶ್ರದ್ಧಾಂಜಲಿ ಸಲ್ಲಿಸಿತು.

ಆಚಾರ್ಯ ಅವರು ಸಜ್ಜನ ರಾಜಕಾರಣಿಯಾಗಿದ್ದು ಉಡುಪಿ ನಗರಸಭೆಯನ್ನು ರಾಷ್ಟ್ರದ ಸ್ಥಳೀಯ ಸಂಸ್ಥೆಗಳಲ್ಲೇ ಮಾದರಿ ಸ್ಥಳೀಯ ಸಂಸ್ಥೆಯನ್ನಾಗಿ ಮಾಡುವಲ್ಲಿ ಅಪೂರ್ವ ಸೇವೆ ಸಲ್ಲಿಸಿದ್ದಾರೆ ಎಂದು ಮುಖ್ಯಮಂತ್ರಿ ಸದಾನಂದ ಗೌಡ ನೆನೆದರು. ರಾಜ್ಯ ಮುಂಗಡಪತ್ರಗಳು ಮತ್ತು ಬಿಜೆಪಿ ಪ್ರಣಾಳಿಕೆಗಳನ್ನು ತಯಾರಿಸುವಲ್ಲಿ ಆಚಾರ್ಯರ ನೆರವು ಅಪಾರವಾಗಿತ್ತು ಎಂದೂ ಅವರು ನುಡಿದರು.

ಬದ್ಧತೆ ಹಾಗೂ ಪ್ರಾಮಾಣಿಕತೆಯ ನಾಯಕ ಎಂಬುದಾಗಿ ಆಚಾರ್ಯ ಅವರನ್ನು ಪ್ರಶಂಸಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ~ಆಚಾರ್ಯರ ಮರಣ ರಾಜ್ಯಕ್ಕಷ್ಟೇ ದೊಡ್ಡ ನಷ್ಟವಲ್ಲ, ಬಿಜೆಪಿಗೂ ದೊಡ್ಡ ನಷ್ಟ ನಷ್ಟ, ಏಕೆಂದರೆ ಕೆಲವೇ ಕೆಲವು ಬುದ್ಧಿವಂತ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ಅವರು ಯಾವ ಪಕ್ಷದ ಮೂಲಕ ಆಳ್ವಿಕೆ ನಡೆಸಿದರು ಎಂಬುದು ಮುಖ್ಯವಲ್ಲ, ಅವರು ಒಬ್ಬ ಉಪಯುಕ್ತ ವ್ಯಕ್ತಿಯಾಗಿದ್ದರು~ ಎಂದು ಹೇಳಿದರು.

~ಅವರು ಅಜಾತ ಶತ್ರುವಾಗಿದ್ದರು. ಅವರು ಯಾವುದೇ ಸಂದರ್ಭದಲ್ಲಿ ಅದರಲ್ಲೂ ಸದನ ಕಲಾಪದ ಸಮಯದಲ್ಲಿ ಸಿಟ್ಟಿಗೆದ್ದುದನ್ನು ನಾನು ನೋಡಿಯೇ ಇಲ್ಲ~  ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಜಗದೀಶ ಶೆಟ್ಟರ ನುಡಿದರು.

ಆಚಾರ್ಯ ಅವರು ಫೆಬ್ರುವರಿ 14ರಂದು ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದಾಗ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದು ನಿಧನರಾಗಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.