ADVERTISEMENT

ಡಿಕೆಶಿಗೆ ಇಂಧನ, ಬೇಗ್‌ಗೆ ಹಜ್‌

ಖಾತೆ ಹಂಚಿಕೆ ಕಸರತ್ತು ಪೂರ್ಣ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 19:30 IST
Last Updated 2 ಜನವರಿ 2014, 19:30 IST

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾ­ಮಯ್ಯ ಅವರು ತೀವ್ರ ಕಸರತ್ತು ನಡೆಸಿದ ಬಳಿಕ ಗುರುವಾರ ಸಂಜೆ ಇಬ್ಬರು ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಬುಧವಾರ ಸಂಪುಟ ಸೇರಿದ  ಡಿ.ಕೆ.­ಶಿವಕುಮಾರ್‌ ಅವರಿಗೆ ನಿರೀಕ್ಷೆ­ಯಂತೆ ಇಂಧನ ಖಾತೆ ನೀಡಲಾಗಿದೆ. ಮತ್ತೊಬ್ಬ ಸಚಿವ ಆರ್‌.ರೋಷನ್ ಬೇಗ್‌ ಪಟ್ಟು ಹಿಡಿದು ಹಜ್‌ ಖಾತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಗೆ ವಾರ್ತೆ, ಮೂಲಸೌಕರ್ಯ ಖಾತೆಯನ್ನೂ ನೀಡಲಾಗಿದೆ.

ಮುಖ್ಯಮಂತ್ರಿಗಳ ಶಿಫಾರಸಿನಂತೆ ರಾಜ್ಯಪಾಲ ಎಚ್‌.ಆರ್.ಭಾರದ್ವಾಜ್‌ ಅವರು ಹೊಸ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿ­ದ್ದಾರೆ. ಬೇಗ್‌ ಅವರು ಹಜ್‌ ಖಾತೆ ನೀಡು­ವಂತೆ ಪಟ್ಟುಹಿಡಿದರೆ, ಖಮರುಲ್‌ ಇಸ್ಲಾಂ ಅವರು ತಮ್ಮ ಬಳಿ ಇದ್ದ ಹಜ್‌ ಖಾತೆಯನ್ನು  ಬಿಟ್ಟುಕೊಡುವುದಿಲ್ಲ ಎಂದು ಹಟ ಹಿಡಿದ ಪರಿಣಾಮ ಗುರುವಾರ ಬೆಳಿಗ್ಗೆ ಖಾತೆ ಹಂಚಿಕೆ ಕಗ್ಗಂಟಾಗಿ ಪರಿಣಮಿಸಿತ್ತು.

ಆದರೆ, ಮುಖ್ಯಮಂತ್ರಿಗಳ ಸೂಚನೆ­ಯಂತೆ ಹಿರಿಯ ಸಚಿವರಾದ ಎಚ್‌.ಕೆ.­ಪಾಟೀಲ, ಟಿ.ಬಿ. ಜಯಚಂದ್ರ ಅವರು ಮಧ್ಯಾಹ್ನದ ವೇಳೆಗೆ ಖಮರುಲ್‌ ಇಸ್ಲಾಂ ಮನವೊಲಿಸಿ ಹಜ್‌ ಖಾತೆ­ಯನ್ನು ಬೇಗ್‌ ಅವರಿಗೆ ಕೊಡಿಸುವಲ್ಲಿ ಯಶಸ್ವಿಯಾದರು.

ಖಮರುಲ್‌ ಇಸ್ಲಾಂ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಪಾಟೀಲ ಅವರು, ಸುಮಾರು ಅರ್ಧ ಗಂಟೆ ಕಾಲ ಚರ್ಚೆ ನಡೆಸಿದರು. ಜಯಚಂದ್ರ, ಡಾ.ಶರಣ ಪ್ರಕಾಶ ಪಾಟೀಲ ಅವರೂ ಈ ಸಂದರ್ಭದಲ್ಲಿ ಇದ್ದರು. ಬೇಗ್‌ ಅವರಿಗೆ ಹಜ್‌ ಖಾತೆಯನ್ನು ನೀಡಬೇಕು ಎಂಬುದು ಮುಖ್ಯಮಂತ್ರಿ ಅವರ ಅಭಿಲಾಷೆ. ಇದಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಮನವರಿಕೆ ಮಾಡಿಕೊಟ್ಟರು ಎನ್ನಲಾಗಿದೆ.

ಇದಾದ ಬಳಿಕ ಅಲ್ಲಿಂದಲೇ ದೂರ­ವಾಣಿ ಮೂಲಕ ಸಿದ್ದರಾಮಯ್ಯ ಅವ­ರೊಂದಿಗೆ ಮಾತನಾಡಿದ ಖಮರುಲ್‌ ಇಸ್ಲಾಂ, ‘ಜಂಟಿ ಅಧಿವೇಶನ ಅಥವಾ ಬಜೆಟ್‌ ಅಧಿವೇಶ­ನ­ದ­ವರೆಗೆ ಖಾತೆ ಬದಲಾವಣೆ ಮಾಡುವುದು ಬೇಡ’ ಎಂದು ಮನವಿ ಮಾಡಿದರು.

‘ಅಲ್ಪಸಂಖ್ಯಾತರ ಹಾಗೂ ವಕ್ಫ್‌ ಖಾತೆ ನಿಮ್ಮ ಬಳಿಯೇ ಇರುತ್ತದೆ. ಹಜ್‌ ಖಾತೆಯನ್ನು ಮಾತ್ರ ವಾಪಸ್‌ ಪಡೆಯ­ಲಾಗುತ್ತದೆ ಅಷ್ಟೆ. ಮನೆಗೆ ಬನ್ನಿ ಮಾತನಾಡೋಣ’ ಎಂದು ಮುಖ್ಯ­ಮಂತ್ರಿಗಳು ಸೂಚಿಸಿದರು. ನಂತರ ‘ಕೃಷ್ಣಾ’ಗೆ ತೆರಳಿದ ಖಮ­ರುಲ್‌ ಇಸ್ಲಾಂ ಅವರು ಸಿದ್ದರಾಮಯ್ಯ ಅವರೊಂದಿಗೆ ಸ್ವಲ್ಪ ಹೊತ್ತು ಚರ್ಚೆ ನಡೆಸಿದರು. ಕೊನೆಗೆ ಅನ್ಯಮಾರ್ಗ­ವಿಲ್ಲದೆ ಖಮರುಲ್ ಅವರು ಹಜ್‌ ಖಾತೆ ಬಿಟ್ಟುಕೊಡಲು ಒಪ್ಪಿದರು. ಇದಾದ ಬಳಿಕ ಅಧಿಕೃತವಾಗಿ ಖಾತೆ ಹಂಚಿಕೆ ಪ್ರಸ್ತಾವನೆಯನ್ನು ರಾಜ್ಯಪಾಲ­ರಿಗೆ ಕಳುಹಿಸಲಾಯಿತು ಎಂದು ಗೊತ್ತಾಗಿದೆ.

ಎಚ್‌.ಕೆ. ಸ್ಪಷ್ಟನೆ: ಈ ಮಧ್ಯೆ ಸುದ್ದಿಗಾರ­ರೊಂದಿಗೆ ಮಾತನಾಡಿದ ಸಚಿವ ಎಚ್‌.ಕೆ.­ಪಾಟೀಲ ‘ನಾನು ಮನವೊ­ಲಿ­ಸುವ ಕಾರ್ಯ ಮಾಡಿಲ್ಲ. ನಮ್ಮ ಮನೆ­ಯಲ್ಲಿ ಊಟಕ್ಕೆ ಸೇರಿದ್ದೆವು ಅಷ್ಟೆ’ ಎಂದು ಸ್ಪಷ್ಟಪಡಿಸಿದರು.

ಸಂತೋಷ್‌ ಲಾಡ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಎಸ್‌.ಆರ್.­ ಪಾಟೀಲ ಅವರಿಗೆ ಹೆಚ್ಚುವರಿ­­ಯಾಗಿ ನೀಡಲಾಗಿದ್ದ ಮೂಲ­ಸೌಕರ್ಯ ಖಾತೆಯನ್ನು ಈಗ ಬೇಗ್‌ ಅವರಿಗೆ ನೀಡಲಾಗಿದೆ. ಮುಖ್ಯಮಂತ್ರಿ­ಗಳು ತಮ್ಮ ಬಳಿಯೇ ಇಟ್ಟುಕೊಂಡಿದ್ದ ವಾರ್ತಾ ಖಾತೆಯನ್ನೂ ಬೇಗ್‌ ಅವರಿಗೆ ವಹಿಸಲಾಗಿದೆ. ಶಿವಕುಮಾರ್‌ ಅವರಿಗೆ ನೀಡಿರುವ ಇಂಧನ ಖಾತೆಯನ್ನು ಇದುವರೆಗೆ ಮುಖ್ಯ­ಮಂತ್ರಿಗಳೇ ನೋಡಿ­ಕೊಳ್ಳು­ತ್ತಿದ್ದರು.

ಒತ್ತಡ ಇಲ್ಲ:  ‘ಖಾತೆ ಹಂಚಿಕೆ ಸಂಬಂಧ ಯಾವುದೇ ಗೊಂದಲ ಇಲ್ಲ. ಇಂತ­ಹದ್ದೇ ಖಾತೆ ನೀಡುವಂತೆ ನನ್ನ ಮೇಲೆ ಯಾರೂ ಒತ್ತಡ ಹೇರಿರಲಿಲ್ಲ’ ಎಂದು ಸಿದ್ದರಾಮಯ್ಯ ಅವರು ಸಂಜೆ ಸುದ್ದಿಗಾರರಿಗೆ ತಿಳಿಸಿದರು.

‘ನನ್ನ ವಿವೇಚನೆ ಪ್ರಕಾರ ಖಾತೆಗಳ ಹಂಚಿಕೆಯಾಗಿದೆ. ಹಜ್‌ ಖಾತೆ ಬಿಟ್ಟು­ಕೊಡಲು ಖಮರುಲ್‌ ಇಸ್ಲಾಂ ಸಮ್ಮತಿ­ಸಿ­ದ್ದಾರೆ. ಅಲ್ಲದೆ ಇದನ್ನು ವಹಿಸಿ­ಕೊಳ್ಳಲು ಬೇಗ್‌ ಅವರು ಒಪ್ಪಿದ್ದಾರೆ’ ಎಂದರು.

ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್‌ನೊಂದಿಗೆ ಚರ್ಚೆ ಮಾಡಿ­ರು­ವುದು ನಿಜ. ಆದರೆ, ‘ಇಂತಹವರನ್ನೇ ಸಂಪುಟಕ್ಕೆ ತೆಗೆದುಕೊಳ್ಳಿ, ಇಂತಹದ್ದೇ ಖಾತೆ ನೀಡಿ ಎಂದು ಯಾರೂ ಹೇಳಿರಲಿಲ್ಲ’ ಎಂದು ತಿಳಿಸಿದರು.

ಗುಂಪುಗಾರಿಕೆ ಇಲ್ಲ:  ‘ಸಚಿವ ಸ್ಥಾನ ಸಿಗದ ಶಾಸಕರ ಒಕ್ಕೂಟ ಅಥವಾ ಗುಂಪು ರಚನೆಯಾಗಿಲ್ಲ. ಸಚಿವ ಸ್ಥಾನದ ಆಕಾಂಕ್ಷಿಗಳು ಇರುವುದು ನಿಜ. ಆದರೆ, ಎಲ್ಲರನ್ನೂ ಸಚಿವರನ್ನಾಗಿ ಮಾಡಲು ಆಗುವುದಿಲ್ಲ’ ಎಂದು ಮನವರಿಕೆ ಮಾಡಿ­ಕೊಡಲಾಗಿದೆ ಎಂದು ವಿವರಿಸಿದರು.

ಶಿವಕುಮಾರ್‌, ಬೇಗ್‌ ವಿರುದ್ಧ ಕೇಳಿ­ಬಂದಿರುವ ಆರೋಪಗಳ ಬಗ್ಗೆ ಸಾಕ್ಷ್ಯಾ­ಧಾರಗಳು ಇಲ್ಲ. ಅಲ್ಲದೆ ಅವು ಗುರು­ತರವಾದ ಆರೋಪಗಳೂ ಅಲ್ಲ. ಸಮಾಜ ಪರಿವರ್ತನಾ ಸಮು­­ದಾ­­ಯದ ಮುಖ್ಯಸ್ಥ ಎಸ್.ಆರ್‌.­­ ಹಿರೇಮಠ ಅವರು ಈ ವಿಷಯದಲ್ಲಿ ಹೋರಾಟ ಮಾಡಲು ಸ್ವತಂತ್ರರಿದ್ದಾರೆ. ಅವರ ಹೋರಾಟಕ್ಕೆ ಅಡ್ಡಿ ಮಾಡುವು­ದಿಲ್ಲ ಎಂದು ಅವರು ತಿಳಿಸಿದರು.

22ರಿಂದ ಅಧಿವೇಶನ?
ವಿಧಾನಮಂಡಲದ ಜಂಟಿ ಅಧಿ­ವೇಶನ ಬೆಂಗಳೂರಿನಲ್ಲೇ ನಡೆಯ­ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಈ ತಿಂಗಳ 22ರಿಂದ ಅಧಿವೇಶನ ಆರಂಭವಾಗುವ ಸಾಧ್ಯತೆ ಇದ್ದು, ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆ ನಂತರ ಅಧಿವೇಶನದ ದಿನಾಂಕ­ವನ್ನು ಅಧಿಕೃತವಾಗಿ ಪ್ರಕಟಿ­ಸಲಾಗು­ತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.