ADVERTISEMENT

ಡಿ.ಕೆ. ಶಿವಕುಮಾರ್, ಕುಟುಂಬ ಸದಸ್ಯರ ವಿಚಾರಣೆ

ಎರಡೂವರೆ ಗಂಟೆ ಪ್ರತ್ಯೇಕವಾಗಿ ಪ್ರಶ್ನಿಸಿದ ಐ.ಟಿ. ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 19:30 IST
Last Updated 6 ನವೆಂಬರ್ 2017, 19:30 IST
ಕುಟುಂಬ ಸದಸ್ಯರೊಂದಿಗೆ ಆದಾಯ ತೆರಿಗೆ ಇಲಾಖೆ ಕಚೇರಿಗೆ ತೆರಳುತ್ತಿರುವ ಡಿ.ಕೆ. ಶಿವಕುಮಾರ್. ಮಗಳು ಐಶ್ವರ್ಯಾ (ಎಡದಿಂದ ಮೊದಲನೆಯವರು), ತಾಯಿ ಗೌರಮ್ಮ ಮತ್ತು ಪತ್ನಿ ಉಷಾ ಇದ್ದರು.  –ಪ್ರಜಾವಾಣಿ ಚಿತ್ರ
ಕುಟುಂಬ ಸದಸ್ಯರೊಂದಿಗೆ ಆದಾಯ ತೆರಿಗೆ ಇಲಾಖೆ ಕಚೇರಿಗೆ ತೆರಳುತ್ತಿರುವ ಡಿ.ಕೆ. ಶಿವಕುಮಾರ್. ಮಗಳು ಐಶ್ವರ್ಯಾ (ಎಡದಿಂದ ಮೊದಲನೆಯವರು), ತಾಯಿ ಗೌರಮ್ಮ ಮತ್ತು ಪತ್ನಿ ಉಷಾ ಇದ್ದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಅವರ ಕುಟುಂಬ ಸದಸ್ಯರು ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳ ಮುಂದೆ ಸೋಮವಾರ ವಿಚಾರಣೆಗೆ ಹಾಜರಾದರು.

ಶಿವಕುಮಾರ್ ತಾಯಿ ಗೌರಮ್ಮ, ಪತ್ನಿ ಉಷಾ, ಮಗಳು ಐಶ್ವರ್ಯಾ, ಸಂಬಂಧಿಯೂ ಆಗಿರುವ ವಿಧಾನ ಪರಿಷತ್ ಸದಸ್ಯ ರವಿ ಹಾಜರಾಗಿದ್ದರು. ಇದಲ್ಲದೆ, ಶಿವಕುಮಾರ್‌ ಆಪ್ತ ವಲಯದ 15ಕ್ಕೂ ಹೆಚ್ಚು ಜನ ವಿಚಾರಣೆಗೆ ಬಂದಿದ್ದರು.

ಮಧ್ಯಾಹ್ನ 2.40ರ ಸುಮಾರಿಗೆ ಕುಟುಂಬ ಸದಸ್ಯರೊಂದಿಗೆ ಕಚೇರಿಯ ಒಳಗೆ ಹೋದ ಶಿವಕುಮಾರ್, ಸಂಜೆ 5.10ರ ಸುಮಾರಿಗೆ ಹೊರಬಂದರು.

ADVERTISEMENT

ಆಗಸ್ಟ್ 2ರಿಂದ ನಾಲ್ಕು ದಿನ ಶಿವಕುಮಾರ್‌ ಮತ್ತು ಅವರ ಆಪ್ತರ ಮನೆ ಮತ್ತು ಕಚೇರಿಗಳ ಮೇಲೆ ಐ.ಟಿ ದಾಳಿ ನಡೆದಿತ್ತು. ಈ ಸಂದರ್ಭದಲ್ಲಿ ಸುಮಾರು ₹ 300 ಕೋಟಿಗೂ ಹೆಚ್ಚು ಮೊತ್ತದ ಅಘೋಷಿತ ಆಸ್ತಿ ಪತ್ತೆಯಾಗಿತ್ತು. ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಹೆಸರಿನಲ್ಲಿ ವಿವಿಧೆಡೆ ಆಸ್ತಿ ಇರುವ ದಾಖಲೆಗಳು ಸಿಕ್ಕಿದ ಕಾರಣ ಐ.ಟಿ ಅಧಿಕಾರಿಗಳು ಎಲ್ಲರನ್ನು ವಿಚಾರಣೆಗೆ ಕರೆದಿದ್ದರು. ಆದರೆ, ವಕೀಲರು ಅಥವಾ ಲೆಕ್ಕ ಪರಿಶೋಧಕರನ್ನು ಜೊತೆಗೆ ಕರೆದುಕೊಂಡು ಬರದಂತೆ ಸೂಚಿಸಿದ್ದರು.

‘ನಿಮ್ಮ ಹೆಸರಿನಲ್ಲಿರುವ ಆಸ್ತಿಯ ಬಗ್ಗೆ ನಿಮಗೆ ಮಾಹಿತಿ ಇದೆಯೇ, ಆ ಆಸ್ತಿಯನ್ನು ಯಾವ ಆದಾಯ ಮೂಲದಿಂದ ಖರೀದಿಸಲಾಗಿದೆ ಎಂಬ ಪ್ರಶ್ನೆಗಳನ್ನು ಕೇಳಿ ಉತ್ತರ ದಾಖಲಿಸಿಕೊಳ್ಳಲಾಗಿದೆ. ಮಂಗಳವಾರವೂ ವಿಚಾರಣೆಗೆ ಹಾಜರಾಗುವಂತೆ ಶಿವಕುಮಾರ್‌ ಅವರೊಬ್ಬರಿಗೆ ಸೂಚಿಸಲಾಗಿದೆ’ ಎಂದು ಐ.ಟಿ ಮೂಲಗಳು ತಿಳಿಸಿವೆ.

ತಪ್ಪು ಮಾಡಿದ್ದರೆ ಶಿಕ್ಷೆಗೆ ಸಿದ್ಧ
ವಿಚಾರಣೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಶಿವಕುಮಾರ್, ‘ನನ್ನ ಜೀವನ ತೆರೆದ ಪುಸ್ತಕ ಇದ್ದಂತೆ. ತಪ್ಪು ಮಾಡಿದ್ದರೆ ಯಾವುದೇ ತನಿಖೆ ಅಥವಾ ಶಿಕ್ಷೆ ಎದುರಿಸಲು ಸಿದ್ಧ’ ಎಂದು ಹೇಳಿದರು.

‘ಸಿಕ್ಕಿರುವ ಮಾಹಿತಿ ಸಾಲದು ಎಂಬ ಕಾರಣಕ್ಕೆ ಕುಟುಂಬದವರನ್ನು ಕರೆದಿದ್ದರು. ಎಲ್ಲರ ಹೇಳಿಕೆಗಳನ್ನು ಅಧಿಕಾರಿಗಳು ಪ್ರತ್ಯೇಕವಾಗಿ ಪಡೆದುಕೊಂಡಿದ್ದಾರೆ. ಮಂಗಳವಾರ ಮಧ್ಯಾಹ್ನ ನಾನು ಹಾಜರಾಗುತ್ತೇನೆ.   ಉಳಿದ ವಿಚಾರಣೆಗೆ ಬೆಳಗಾವಿ ಅಧಿವೇಶನದ ಬಳಿಕ ಬರುವುದಾಗಿ ತಿಳಿಸಿದ್ದೇನೆ’ ಎಂದು ವಿವರಿಸಿದರು.

‘ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ನಮ್ಮನ್ನು ಗೌರವದಿಂದ ನಡೆಸಿಕೊಂಡಿದ್ದಾರೆ. ಎರಡೂ ಕಡೆಗಳಿಂದಲೂ ಗೋಪ್ಯತೆ ಕಾಪಾಡಿಕೊಳ್ಳಲಾಗಿದೆ. ಬೇರೆಯವರು ಏನು ಬೇಕಾದರೂ ಬರೆದುಕೊಳ್ಳಲಿ.  ಅದು ಅವರಿಗೇ ಬಿಟ್ಟು ವಿಷಯ’ ಎಂದರು.

‘ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಸಮಾವೇಶಕ್ಕೆ ಹೋಗದಂತೆ ನಿಮ್ಮನ್ನು ತಡೆಯಲು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆಯೇ’ ಎಂದು ಕೇಳಿದ ಪ್ರಶ್ನೆಗೆ, ‘ಹಾಸನ, ಮೈಸೂರು ಮತ್ತು ಚಿಕ್ಕಮಗಳೂರಿನಲ್ಲಿ ಪಕ್ಷ ಸಂಘಟನೆಗೆ ಹೋಗಬೇಕಿತ್ತು. ಆದರೆ, ಪತ್ನಿ, ಮಗಳು ಮತ್ತು ವಯಸ್ಸಾದ ತಾಯಿಯನ್ನಷ್ಟೇ ಕಳುಹಿಸಿಕೊಡುವುದು ಸಾಧ್ಯ ಇರಲಿಲ್ಲ. ಹೀಗಾಗಿ, ನಾನೂ ಜೊತೆಯಲ್ಲಿ ಬಂದಿದ್ದೇನೆ’ ಎಂದು ತಿಳಿಸಿದರು.

‘ನನ್ನ ಬಾಯಿ ಮುಚ್ಚಿಸಲು ಈ ತಂತ್ರ ಹೆಣೆಯಲಾಗಿದೆ ಎಂಬುದನ್ನು ಈ ಸಂದರ್ಭದಲ್ಲಿ ಹೇಳುವುದಿಲ್ಲ. ನಾನೊಬ್ಬ ಸಾಮಾನ್ಯ ತೆರಿಗೆದಾರನಾಗಿ ವಿಚಾರಣೆಗೆ ಹಾಜರಾಗುತ್ತಿದ್ದೇನೆ. ನನ್ನ ಅಧಿಕಾರ, ಸಚಿವ ಸ್ಥಾನ ಬಳಸಿಕೊಂಡು ಯಾರ ಮೇಲೂ ಪ್ರಭಾವ ಬೀರಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.
*
‘ಇ.ಡಿಗೆ ವಹಿಸುವುದು ಐ.ಟಿಗೆ ಬಿಟ್ಟ ವಿಷಯ’
‘ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ(ಇ.ಡಿ) ವಹಿಸುವುದು ಐ.ಟಿ ಅಧಿಕಾರಿಗಳಿಗೆ ಬಿಟ್ಟ ವಿಷಯ’ ಎಂದು ಶಿವಕುಮಾರ್ ಪ್ರತಿಕ್ರಿಯಿಸಿದರು.

‘ನಾನು ರಾಜಕೀಯದಲ್ಲಿ ತುಂಬಾ ವರ್ಷದಿಂದ ಇದ್ದೇನೆ. ಬೇಕಾದಷ್ಟು ತನಿಖೆ, ಹೋರಾಟ ನೋಡಿದ್ದೇನೆ. ಇ.ಡಿ ಅಥವಾ ಸಿಬಿಐಗೆ ವಹಿಸಲು ಐ.ಟಿ ಅಧಿಕಾರಿಗಳಿಗೆ ಕಾನೂನಿನಲ್ಲಿ ಅವಕಾಶ ಇದೆ. ಕೊಡಬೇಕು ಎನಿಸಿದರೆ ಅವರನ್ನು ತಡೆಯಲು ಆಗುವುದಿಲ್ಲ. ಅದಕ್ಕೆಲ್ಲಾ ನಾನು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.