ADVERTISEMENT

ಡಿನೋಟಿಫೈ: ಶೆಟ್ಟರ್ ವಿರುದ್ಧದೂರು

​ಪ್ರಜಾವಾಣಿ ವಾರ್ತೆ
Published 11 ಜುಲೈ 2012, 18:45 IST
Last Updated 11 ಜುಲೈ 2012, 18:45 IST

ಬೆಂಗಳೂರು: ಬೆಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವತಿಯಿಂದ ಮೆಗಾ ಮಾರುಕಟ್ಟೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿದ್ದ ಜಮೀನನ್ನು ಅಕ್ರಮವಾಗಿ ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಆರೋಪದ ಮೇಲೆ ನಿಯೋಜಿತ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಬುಧವಾರ ಖಾಸಗಿ ದೂರು ದಾಖಲಾಗಿದೆ.

ಸಾಮಾಜಿಕ ಕಾರ್ಯಕರ್ತ ಎಸ್.ಎಂ. ಚೇತನ್ ದೂರು ದಾಖಲು ಮಾಡಿದ್ದಾರೆ. ಕಂದಾಯ ಇಲಾಖೆಯ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿದ್ದ ಬಿ.ನಾಗರಾಜ ಹಾಗೂ ಕೃಷಿ ಮಾರುಕಟ್ಟೆ ಮಾರಾಟ ಸಮಿತಿ ನಿರ್ದೇಶಕರಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಸೈಯದ್ ಜಮೀರ್ ಪಾಷ ಅವರನ್ನೂ ಆರೋಪಿಗಳೆಂದು ದೂರಿನಲ್ಲಿ ಹೆಸರಿಸಲಾಗಿದೆ.

ದೂರಿನಲ್ಲಿರುವ ಆರೋಪಗಳೇನು?:
`ರೈತರು ತಾವು ಬೆಳೆದ ಬೆಳೆಗಳನ್ನು ಒಂದೇ ಸೂರಿನ ಅಡಿ ಮಾರಾಟ ನಡೆಸಲು ಅನುಕೂಲ ಆಗುವ ನಿಟ್ಟಿನಲ್ಲಿ `ಮೆಗಾ ಮಾರುಕಟ್ಟೆ~ ನಿರ್ಮಿಸಲು ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಹೊನ್ನಸಂದ್ರ, ಪಿಳ್ಳಹಳ್ಳಿ, ವಡೇರಹಳ್ಳಿ, ಮಠಹಳ್ಳಿ ಹಾಗೂ ಶೇಷಗಿರಿಪಾಳ್ಯದಲ್ಲಿ ಸರ್ಕಾರ 356.36 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿತ್ತು. ಈ ಪೈಕಿ, 188.09 ಎಕರೆ ಜಮೀನು ಭೂಮಾಲೀಕರಿಗೆ ಹಾಗೂ 168.27 ಎಕರೆ ಜಮೀನು ಸರ್ಕಾರಕ್ಕೆ ಸೇರಿತ್ತು.

ಈ ಸಂಬಂಧ, 2000ನೇ ಸಾಲಿನ ಜನವರಿ 27ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. `ಮೆಗಾ ಮಾರುಕಟ್ಟೆ~ ನಿರ್ಮಾಣದ ಕುರಿತು ಚರ್ಚಿಸಲು ಉನ್ನತ ಮಟ್ಟದ ಸಮಿತಿಯನ್ನೂ ಸರ್ಕಾರ ರಚಿಸಿತ್ತು. ಈ ಜಮೀನುಗಳನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡಿತ್ತು. ಭೂಮಾಲೀಕರಿಗೆ ಪರಿಹಾರದ ಮೊತ್ತವಾಗಿ 13.02 ಕೋಟಿ ರೂಪಾಯಿಗಳನ್ನು ನಿಗದಿ ಮಾಡಲಾಗಿತ್ತು. ಆದರೆ ಪರಿಹಾರ ಮಾತ್ರ ಬಿಡುಗಡೆಗೊಂಡಿರಲಿಲ್ಲ.

`2006ರ ಮಾರ್ಚ್ 21ರಂದು ಶೆಟ್ಟರ್ ಅವರು ಕಂದಾಯ ಸಚಿವರಾಗಿದ್ದ ವೇಳೆ, ಅವರ ಶಿಫಾರಸಿನ ಮೇರೆಗೆ ಭೂಸ್ವಾಧೀನ ಅಧಿಕಾರಿ ನಾಗರಾಜ್ ಅವರು ಪಾಷ ಅವರ ನೆರವಿನೊಂದಿಗೆ ಈ ಜಮೀನುಗಳನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟರು. ಇದರಿಂದಾಗಿ `ಮೆಗಾ ಮಾರುಕಟ್ಟೆ~ ಯೋಜನೆ ಕೈಗೂಡಲಿಲ್ಲ. ಅದು ಸ್ಥಗಿತಗೊಂಡಿತು~ ಎನ್ನುವುದು ಅರ್ಜಿದಾರರ ಆರೋಪ.

`ಸಾರ್ವಜನಿಕ ಉದ್ದೇಶಕ್ಕೆಂದು ಸ್ವಾಧೀನಪಡಿಸಿಕೊಂಡ ಜಮೀನಿಗೆ ಸಚಿವ ಸಂಪುಟ ಅನುಮೋದನೆ ನೀಡಿದ ನಂತರ, ಅದನ್ನು ಸೂಕ್ತ ಕಾರಣಕ್ಕೆ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಅಧಿಕಾರ ಕಾನೂನಿನ ಅಡಿ ಮುಖ್ಯಮಂತ್ರಿಯವರಿಗೆ ಮಾತ್ರ ಇದೆ. ಆದರೆ ಸಚಿವರಾಗಿದ್ದ ಶೆಟ್ಟರ್ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಆದುದರಿಂದ ಎಲ್ಲ ಆರೋಪಿಗಳ ವಿರುದ್ಧ ತನಿಖೆಗೆ ಆದೇಶಿಸಬೇಕು~ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಇದರ ವಿಚಾರಣೆಯನ್ನು ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಕೈಗೆತ್ತಿಕೊಂಡಿದ್ದಾರೆ. ಆರೋಪಕ್ಕೆ ಸಂಬಂಧಿಸಿದಂತೆ ಇನ್ನಷ್ಟು ದಾಖಲೆ ಒದಗಿಸಲು ಅರ್ಜಿದಾರರ ಪರ ವಕೀಲ ರಮೇಶ್ ಬಾಬು ಅವರಿಗೆ ಸೂಚಿಸಿದ ನ್ಯಾಯಾಧೀಶರು, ವಿಚಾರಣೆಯನ್ನು ಜುಲೈ 21ಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.