ADVERTISEMENT

ಡಿ ಸಿ ಕಚೇರಿ ಮುತ್ತಿಗೆ: ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 19:30 IST
Last Updated 2 ಡಿಸೆಂಬರ್ 2013, 19:30 IST
ರಾಯಚೂರಿನಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕರ್ನಾಟಕ ರೈತ ಸಂಘದ ಮುಖಂಡರು, ಸದಸ್ಯರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು	– ಕೆಪಿಎನ್ ಚಿತ್ರ
ರಾಯಚೂರಿನಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕರ್ನಾಟಕ ರೈತ ಸಂಘದ ಮುಖಂಡರು, ಸದಸ್ಯರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು – ಕೆಪಿಎನ್ ಚಿತ್ರ   

ರಾಯಚೂರು: ಭೂಮಿ ಸಾಗುವಳಿದಾರರಿಗೆ ಪಟ್ಟಾ ಕೊಡಬೇಕು, ಸರ್ಕಾರಿ ಭೂಮಿಯಲ್ಲಿ ವಾಸವಾಗಿರುವ ವಸತಿಹೀನರಿಗೆ ಹಕ್ಕುಪತ್ರ ನೀಡಬೇಕು, ಜಿಲ್ಲೆಯ ಎಲ್ಲ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಕ್ರಮ ಜರುಗಿಸಬೇಕು, ಹಟ್ಟಿ ಚಿನ್ನದ ಗಣಿ ಸೈನೈಡ್ ಬೂದಿ ಮಾರಾಟ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು  ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಈ ಘಟನೆಯಲ್ಲಿ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ ಸವಿತಾ ಅವರ ತಲೆಗೆ ತೀವ್ರ ಗಾಯವಾಗಿದೆ. ಸದರ ಬಜಾರ ಠಾಣೆ ಸಿಪಿಐ ಚಂದ್ರಶೇಖರ, ಪೊಲೀಸ್ ಪೇದೆ ಚನ್ನಪ್ಪ ಸೇರಿದಂತೆ 8 ಜನ ಪೊಲೀಸರು ಗಾಯಗೊಂಡಿದ್ದಾರೆ.ಪೊಲೀಸರ ಲಾಠಿ ಏಟಿಗೆ ಸಂಘಟನೆಯ ಹುಚ್ಚರೆಡ್ಡಿ, ಚಾಂದಾಸಾಬ್, ನರಸಮ್ಮ, ಬಡೇಸಾಬ್, ಮಾನಪ್ಪ, ಕೆಂಚಪ್ಪ, ಬಸವರಾಜ, ಶಿವಮ್ಮ, ಅಯ್ಯಪ್ಪ, ಆಂಜನೇಯ, ಗೌಸ್, ಮುಮತಾಜ್ ಬೇಗಂ ಸೇರಿದಂತೆ ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳೆಲ್ಲ ಜಿಲ್ಲಾ ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದರು.

ಮಧ್ಯಾಹ್ನ 1.30ರ ಸುಮಾರಿಗೆ ಸಂಘಟನೆಯ ಮುಖಂಡರ ನೇತೃತ್ವದಲ್ಲಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ತಡೆಯಲು ಮುಂದಾದರು. ಅವರನ್ನು ಲೆಕ್ಕಿಸದೇ ಮುನ್ನುಗ್ಗಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಆಗ ಕಲ್ಲು, ಇಟ್ಟಿಗೆ ತುಂಡುಗಳು ತೂರಿ ಬಂದವು. ಇದರಿಂದ ಪೊಲೀಸರು ಲಾಠಿ ಪ್ರಹಾರ ಮತ್ತಷ್ಟು ತೀವ್ರಗೊಳಿಸಿ ಪ್ರತಿಭಟನಕಾರರನ್ನು ಚದುರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮಗು ಎತ್ತಿಕೊಂಡು ಬರುತ್ತಿದ್ದ ಗರ್ಭಿಣಿ ಆಯತಪ್ಪಿ ಬಿದ್ದು ಅಸ್ವಸ್ಥಳಾದಳು. ಆಕೆಯನ್ನು ಸಾರ್ವಜನಿಕರ ಸಹಕಾರದಲ್ಲಿ ಮಾರ್ಕೆಟ್ ಯಾರ್ಡ್ ಠಾಣೆ ಇನ್‌ಸ್ಪೆಕ್ಟರ್ ಬೇಬಿ ವಾಲೇಕರ್ ಅವರು ಆಸ್ಪತ್ರೆಗೆ ಕರೆದೊಯ್ದರು. ಲಾಠಿ ಪ್ರಹಾರ ಬಳಿಕ ಸಂಘಟನೆ ಮುಖಂಡರಾದ ರಾಜ್ಯ ಘಟಕದ ಅಧ್ಯಕ್ಷ ಆರ್ ಮಾನಸಯ್ಯ, ಜಿಲ್ಲಾಧ್ಯಕ್ಷ ನಾಗಲಿಂಗ ಸ್ವಾಮಿ, ಮುದುಕಪ್ಪ, ಹುಚ್ಚರೆಡ್ಡಿ, ರಾಜಶೇಖರ ಸೇರಿದಂತೆ ಕೆಲವರನ್ನು ಪೊಲೀಸರು ವ್ಯಾನ್‌ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಕರೆದೊಯ್ದು ಬಳಿಕ ಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.