ADVERTISEMENT

ತಂಗಡಗಿ ಬೆಂಬಲಿಗರ ಕಿರುಕುಳ: ಆರೋಪ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 19:59 IST
Last Updated 2 ಜುಲೈ 2013, 19:59 IST

ಕೊಪ್ಪಳ: ಜಿಲ್ಲಾಧಿಕಾರಿ ವರ್ಗಾವಣೆಗೆ ಸಚಿವ ಶಿವರಾಜ್ ತಂಗಡಗಿ ಒತ್ತಡ ಹೇರಿದ್ದಾರೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ತಂಗಡಗಿ ಬೆಂಬಲಿಗರೂ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದು, ತೆರವಿಗೆ ಮುಂದಾದ ಅಧಿಕಾರಿಗಳಿಗೆ ಬೆದರಿಕೆ ಒಡ್ಡಿ ತಡೆದ, ನೌಕರರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ತಮ್ಮ ಹಿಡಿತಕ್ಕೆ ಸಿಗದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳೂ ಸೇರಿದಂತೆ ತಾಲ್ಲೂಕು, ಜಿಲ್ಲಾಮಟ್ಟದ ಸುಮಾರು 30 ಅಧಿಕಾರಿಗಳ ವರ್ಗಾವಣೆಗೆ ಶಿಫಾರಸು ಮಾಡಿದ್ದಾರೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

ಪ್ರಕರಣ 1: ಗಂಗಾವತಿ ತಾಲ್ಲೂಕು ಗೋನಾಳು ಗ್ರಾಮದ ಸರ್ವೇ ನಂ 3 ಮತ್ತು 19ರ ಸರ್ಕಾರಿ ಜಮೀನು ಒತ್ತುವರಿ ಮಾಡಿದ ದೂರು ಬಂದಿತ್ತು. ಇದೇ ಜಮೀನಿನ ಸಮೀಪದ ಸರ್ವೇ ನಂ 18ರ 36 ಎಕರೆ ಜಮೀನನ್ನು ಸರ್ವೇ ಮಾಡಲು ಹೋದಾಗ, ತಂಗಡಗಿ ಅವರು ದೂರವಾಣಿ ಮೂಲಕ  ಅಧಿಕಾರಿಗಳಿಗೆ ಬೆದರಿಕೆ ಒಡ್ಡಿದ್ದಾರೆ. ಮಾತ್ರವಲ್ಲ ವರ್ಗಾವಣೆಗೂ ಶಿಫಾರಸು ಮಾಡಿದರು. ಅದಕ್ಕೆ ಅಂದಿನ ಜಿಲ್ಲಾಧಿಕಾರಿ ತಡೆಯೊಡ್ಡಿದಾಗ ಸರ್ಕಾರದ ಅಧೀನ ಕಾರ್ಯದರ್ಶಿಯ ಮೂಲಕವೇ ಕಂದಾಯ ನಿರೀಕ್ಷಕರ ವರ್ಗಾವಣೆಗೆ ಆದೇಶ ತಂದಿದ್ದರು. ಆದರೆ, ಕಂದಾಯ ನಿರೀಕ್ಷಕರು ಕರ್ನಾಟಕ ಆಡಳಿತ ನ್ಯಾಯಮಂಡಳಿ ಮೂಲಕ ತಮ್ಮ ವರ್ಗಾವಣೆ ಆದೇಶ ರದ್ದುಗೊಳಿಸಿದರು. ಹಾಗಿದ್ದರೂ ಈಗಲೂ ಸಚಿವರಿಂದ ಒತ್ತಡ ಹೇರಿ ಕರೆ ಬರುತ್ತಿವೆ ಎಂದು ಇಲಾಖೆಯ ಮೂಲಗಳು ವಿವರಿಸಿವೆ.

ಮರಳು ದಂಧೆಕೋರರಿಗೆ ಬೆಂಬಲ?:ಇದೇ ತಾಲ್ಲೂಕಿನ ಢಣಾಪುರ ಗ್ರಾಮದ ಹೆಬ್ಬಾಳು ಹಳ್ಳದಲ್ಲಿ ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್‌ಗಳಿಗೆ ದಂಡ ವಿಧಿಸಲು ಮುಂದಾದಾಗ `ನೌಕರಿ ಮಾಡುವುದಾದರೆ ಇಲ್ಲಿ ಇರು. ಇಲ್ಲವಾದರೆ ಬೇರೆ ಜಾಗ ನೋಡಿಕೋ' ಎಂದು ಸಚಿವರು ದೂರವಾಣಿ ಮೂಲಕ ಬೆದರಿಕೆ ಒಡ್ಡಿದ್ದಾರೆ ಎಂದು ದಾಳಿ ಸಂದರ್ಭ ಭಾಗವಹಿಸಿದ್ದ ಅಧಿಕಾರಿಯೊಬ್ಬರು ತಿಳಿಸಿದರು.

ಲಿಂಗಸೂಗೂರು - ಗಂಗಾವತಿ ನಡುವಿನ ರಾಜ್ಯ ಹೆದ್ದಾರಿಯ ಆಸುಪಾಸಿನ ನೀರಾವರಿ ಜಮೀನಿಗೆ ಸಾಕಷ್ಟು ಬೇಡಿಕೆಯಿದೆ. ಇದೀಗ ತಂಗಡಗಿ ಬೆಂಬಲಿಗರು ಇಲ್ಲಿ ತಮ್ಮ ಸಾಮ್ರಾಜ್ಯ ವಿಸ್ತರಣೆಗೆ ಮುಂದಾಗಿದ್ದಾರೆ. ಅದಕ್ಕೆ ತಕ್ಕಂತೆ ಸಚಿವರು ತಾಳ ಹಾಕುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಮುಜರಾಯಿ ಇಲಾಖೆ ಅನುದಾನಕ್ಕೆ ಕೊಕ್: ಜಿಲ್ಲೆಯ 174 ಮುಜರಾಯಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ರೂ 5 ಕೋಟಿ ಅನುದಾನ ನಿಗದಿಯಾಗಿತ್ತು. ಆದರೆ, ಕ್ರಿಯಾ ಯೋಜನೆ ಪ್ರಕಾರ ಕಾಮಗಾರಿ ಮಾಡದ ಕಾರಣಕ್ಕೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ (ವರ್ಗಾವಣೆಗೊಂಡವರು) ಪೂರ್ಣ ಅನುದಾನ ಬಿಡುಗಡೆ ಮಾಡಲಿಲ್ಲ. ಅನುದಾನ ಬಿಡುಗಡೆಗೆ ಒತ್ತಡ ಹೇರಿ 2012ರ ಡಿಸೆಂಬರ್‌ನಲ್ಲಿ ತಂಗಡಗಿ ಅವರು ಡಿ.ಸಿಗೆ ಪತ್ರ ಬರೆದರು. ಅದಕ್ಕೂ ಮಣಿಯದ ಡಿ.ಸಿ, ನಿಯಮ ಪ್ರಕಾರ ನಡೆದ ಕಾಮಗಾರಿಗೆ ಮಾತ್ರ  ರೂ 1.82 ಕೋಟಿ ಬಿಡುಗಡೆಗೊಳಿಸಿದರು.

ಇಲ್ಲಿಂದ ಆರಂಭವಾದ ಜಿಲ್ಲಾಧಿಕಾರಿ ಮತ್ತು ಸಚಿವ ಶಿವರಾಜ ತಂಗಡಗಿ ಅವರ ನಡುವಿನ ತಿಕ್ಕಾಟ, ವರ್ಗಾವಣೆ ಕಾಲದವರೆಗೂ ಮುಂದುವರಿಯಿತು. ಕಾಕತಾಳೀಯ ಎಂಬಂತೆ ಇದೇ ವೇಳೆ ಅವರ ಸಹೋದರನ ನಿವೇಶನ ವಿವಾದ ಸಂಬಂಧಿಸಿದ ಜಿಲ್ಲಾಧಿಕಾರಿಯ ತೀರ್ಪು ಹೊರ ಬಿದ್ದಿತು.

ಒತ್ತಡ ಹೇರಿಲ್ಲ
`ಯಾವ ಅಧಿಕಾರಿಯ ವರ್ಗಾವಣೆಗೂ ಒತ್ತಡ ಹೇರಿಲ್ಲ. ಯಾರಿಗೂ ವೈಯಕ್ತಿಕವಾಗಿ ಬೆದರಿಕೆ ಒಡ್ಡಿಲ್ಲ. ಕೆಲಸ ಮಾಡುವುದಾದರೆ ಇರಲಿ. ಇಲ್ಲವಾದರೆ ಹೋಗಲಿ. ಅದಕ್ಕೇನೂ ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಬೆಂಬಲಿಗರು ಯಾರಾದರೂ ಜಮೀನು ಒತ್ತುವರಿ ಮಾಡಿದ್ದರೆ, ಅದಕ್ಕೆ ಅಧಿಕಾರಿಗಳು ಕುಮ್ಮಕ್ಕು ನೀಡಿದ್ದರೆ ಇಬ್ಬರನ್ನೂ ಕಿತ್ತೊಗೆಯುತ್ತೇನೆ. ಒತ್ತುವರಿಯಾದ ಜಮೀನು ವಾಪಸ್‌ಗೆ ಕ್ರಮ ಕೈಗೊಳ್ಳುತ್ತೇನೆ. ಎಲ್ಲ ವಿವಾದ, ಪ್ರಶ್ನೆಗಳಿಗೂ ಜುಲೈ 6ರಂದು ಉತ್ತರಿಸುತ್ತೇನೆ' ಎಂದು ಸಚಿವ ತಂಗಡಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.