ADVERTISEMENT

‘ತಜ್ಞರ ವರದಿ ಕೇಂದ್ರಕ್ಕೆ ಶಿಫಾರಸು ಮಾಡಿ’

ಧರ್ಮ ಯುದ್ಧ ಬೆದರಿಕೆಗೆ ಸೊಪ್ಪು ಹಾಕುವ ಅಗತ್ಯವಿಲ್ಲ: ಬಸವ ಜಯಮೃತ್ಯುಂಜಯ ಶ್ರೀ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 19:42 IST
Last Updated 6 ಮಾರ್ಚ್ 2018, 19:42 IST
‘ತಜ್ಞರ ವರದಿ ಕೇಂದ್ರಕ್ಕೆ ಶಿಫಾರಸು ಮಾಡಿ’
‘ತಜ್ಞರ ವರದಿ ಕೇಂದ್ರಕ್ಕೆ ಶಿಫಾರಸು ಮಾಡಿ’   

ಬಾಗಲಕೋಟೆ: ನ್ಯಾಯಮೂರ್ತಿ ನಾಗಮೋಹನದಾಸ್‌ ನೇತೃತ್ವದ ತಜ್ಞರ ಸಮಿತಿಯು ಪ್ರತ್ಯೇಕ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ನೀಡಿರುವ ವರದಿಯನ್ನು ಸ್ವಾಗತಿಸಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ವರದಿಯನ್ನು ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮಂಗಳವಾರ ಇಲ್ಲಿ ಆಗ್ರಹಿಸಿದರು.

ಜೈನ, ಸಿಖ್‌ ಹಾಗೂ ಬೌದ್ಧ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಿದಾಗ ಆಗದ ಧರ್ಮಯುದ್ಧಗಳು, ಬಾರದ ಬೆದರಿಕೆಗಳು ಈಗೇಕೆ ಎಂದು ಪ್ರಶ್ನಿಸಿದ ಅವರು, ಅದಕ್ಕೆಲ್ಲ ಸೊಪ್ಪು ಹಾಕುವ ಅಗತ್ಯವಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸ್ವತಂತ್ರ ಧರ್ಮ ಮನ್ನಣೆ ಬೇಡಿಕೆ ಮೂಲಕ ನಾವು ನಮ್ಮ ಬೆವರಿನ ಪಾಲು ಕೇಳುತ್ತಿದ್ದೇವೆ. ಇದರಲ್ಲಿ ಯಾರೂ ರಾಜಕೀಯ ಮಾಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರ ಕೂಡ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ವಿಶ್ವಾಸವಿದೆ. ರಾಜ್ಯ ಸರ್ಕಾರವೂ ಆ ನಿಟ್ಟಿನಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಬೇಕು’ ಎಂದು ಒತ್ತಾಯಿಸಿದ ಅವರು, ಒಂದು ವೇಳೆ ಕೇಂದ್ರ ನಿರಾಕರಿಸಿದರೆ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲಾಗುವುದು ಎಂದರು.

ADVERTISEMENT

‘ಚುನಾವಣೆಗೂ ಮೊದಲೇ ಶಿಫಾರಸು ಮಾಡಿ’
ಬೆಳಗಾವಿ:
ನ್ಯಾಯಮೂರ್ತಿ ನಾಗಮೋಹನದಾಸ್‌ ನೇತೃತ್ವದ ತಜ್ಞರ ಸಮಿತಿಯ ವರದಿಯನ್ನು, ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಗೂ ಮುನ್ನವೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ನಾಗನೂರ ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಜಾತ್ಯತೀತ ರಾಷ್ಟ್ರವೆಂದು ಸಂವಿಧಾನದಲ್ಲಿ ಘೋಷಿಸಲಾಗಿದ್ದರೂ, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಹೊರಟಿರುವ ಬಿಜೆಪಿಯ ಕ್ರಮವು ಸಂವಿಧಾನ ವಿರೋಧಿ ಕ್ರಮವಾಗಿದೆ’ ಎಂದರು.

’ಕೆಲವರು, ಸಮಿತಿಯ ವರದಿಯನ್ನು ‘ದಾಸರ ವರದಿ’ ಎಂದು ಹೀಯಾಳಿಸಿದ್ದಾರೆ. ಸಮಿತಿ ಮುಖ್ಯಸ್ಥರಾದ ನಾಗಮೋಹನ ದಾಸ್‌ ಅವರು ನಿವೃತ್ತ ನ್ಯಾಯಮೂರ್ತಿಗಳು. ಇಂತಹ ವ್ಯಕ್ತಿಗಳಿಗೆ ದಾಸರು ಎಂದು ಹಣೆಪಟ್ಟಿ ಕಟ್ಟುವುದು ಅಕ್ಷಮ್ಯ. ಅನೇಕ ದಾಖಲೆಗಳನ್ನು ಅಧ್ಯಯನ ಮಾಡಿಯೇ ಅವರು ವರದಿ ನೀಡಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.