ADVERTISEMENT

ತವರಿನಲ್ಲಿ ಹೃದಯಸ್ಪರ್ಶಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 19:30 IST
Last Updated 15 ಜುಲೈ 2012, 19:30 IST

ಹುಬ್ಬಳ್ಳಿ: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ  ಮೊದಲ ಬಾರಿ ಭಾನುವಾರ ನಗರಕ್ಕೆ ಆಗಮಿಸಿದ  ಜಗದೀಶ ಶೆಟ್ಟರ್ ಅವರನ್ನು ವಿಮಾನ ನಿಲ್ದಾಣದಿಂದ ಕೇಶ್ವಾಪುರದ ಅವರ ಮನೆಯವರೆಗೆ ತೆರೆದ ವಾಹನದಲ್ಲಿ ಮೆರವಣಿಗೆಯೊಳಗೆ ಕರೆದೊಯ್ಯುವ ಮೂಲಕ ಹೃದಯಸ್ಪರ್ಶಿ ಸ್ವಾಗತ ನೀಡಲಾಯಿತು.

ವಿಶೇಷ ವಿಮಾನದಲ್ಲಿ ಪತ್ನಿ ಶಿಲ್ಪಾ ಅವರೊಂದಿಗೆ ಆಗಮಿಸಿದ ಶೆಟ್ಟರ್ ಅವರನ್ನು ಮೇಯರ್ ಡಾ. ಪಾಂಡುರಂಗ ಪಾಟೀಲ, ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಪ್ರಹ್ಲಾದ ಜೋಶಿ ಸೇರಿದಂತೆ ಹಲವು ಗಣ್ಯರು ಬರಮಾಡಿಕೊಂಡರು. ಮುಖ್ಯಮಂತ್ರಿಯಾಗಿ ತವರು ನೆಲದಲ್ಲಿ ಮೊದಲ ಗೌರವ ವಂದನೆ ಸ್ವೀಕರಿಸಿದ ಶೆಟ್ಟರ್ ಅವರಿಗೆ ಹೆಂಗಳೆಯರು ಆರತಿ ಎತ್ತಿ, ದೃಷ್ಟಿ ತೆಗೆದರು. ಆಗ ಸುರಿಸಿದ ಪುಷ್ಪವೃಷ್ಟಿಯಲ್ಲಿ ಶೆಟ್ಟರ್ ದಂಪತಿ ಮಿಂದೆದ್ದರು.

ಅಷ್ಟರಲ್ಲಿ ಸಿದ್ಧವಾಗಿ ನಿಂತಿದ್ದ ತೆರೆದ ಅಲಂಕೃತ ವಾಹನವನ್ನು ಬೊಮ್ಮಾಯಿ, ಜೋಶಿ, ಪತ್ನಿ ಶಿಲ್ಪಾ ಅವರೊಂದಿಗೆ ಏರಿದ ಶೆಟ್ಟರ್, ಗೆಲುವಿನ ಸಂಕೇತವನ್ನು ತೋರಿಸಿದಾಗ ಕಾರ್ಯಕರ್ತರು ಉತ್ಸಾಹದಿಂದ ಕುಣಿದು, ಕೇಕೆ ಹಾಕಿದರು. ಝಾಂಜ್ ಪಥಕ್ ಹಾಗೂ ಜನಪದ ಮೇಳಗಳ ಸಾಥ್ ಪಡೆದ ಮೆರವಣಿಗೆ ಮುಂದೆ ಹೊರಟಿತು. ಲಂಬಾಣಿಗರ ನೃತ್ಯ ಯಾತ್ರೆಗೆ ಕಳೆಕಟ್ಟಿತು. ಬಿಜೆಪಿ ಧ್ವಜಗಳು ಅಲೆಯಂತೆ ಹಾರಾಡಿದವು. ಅಲ್ಲಿಂದ ಮೆರವಣಿಗೆ ಕೇಶ್ವಾಪುರದಲ್ಲಿರುವ ಮುಖ್ಯಮಂತ್ರಿ ಮನೆಯತ್ತ ಹೊರಟಿತು. ಮಾರ್ಗದುದ್ದಕ್ಕೂ ಸಿಕ್ಕ ಸಿಂಧೂರ ಲಕ್ಷ್ಮಣ, ಜಗಜ್ಯೋತಿ ಬಸವೇಶ್ವರ, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಡಾ. ಬಿ.ಆರ್.ಅಂಬೇಡ್ಕರ್, ಸದಾಶಿವ ಶೆಟ್ಟರ್ ಹಾಗೂ ಕೇಶ್ವಾಪುರದ ಬಸವೇಶ್ವರ ಪ್ರತಿಮೆಗಳಿಗೆ ಶೆಟ್ಟರ್ ಮಾಲಾರ್ಪಣೆ ಮಾಡಿದರು. ದಾರಿಯಲ್ಲಿ ಗುಂಪಾಗಿ ನಿಂತಿದ್ದ ಅಭಿಮಾನಿಗಳು ಮುಖ್ಯಮಂತ್ರಿಯಾಗಿ ಬಂದ ತಮ್ಮೂರಿನ `ಹುಡುಗ~ನಿಗೆ ಪುಷ್ಪಗುಚ್ಛ ನೀಡಿ ಶುಭಾಶಯ ಕೋರಿದರು. ಚನ್ನಮ್ಮನ ವೃತ್ತಕ್ಕೆ ಮೆರವಣಿಗೆ ತಲುಪಿದಾಗ ಪಟಾಕಿ ಸದ್ದು ಮುಗಿಲು ಮುಟ್ಟಿತು.

ADVERTISEMENT

ಬಸ್ ನಿಲ್ದಾಣದ ಬಳಿ ಮುಖ್ಯಮಂತ್ರಿಗಳ ಯಾತ್ರೆ ಸಾಗಿದಾಗ ಹಳ್ಳಿಗಳಿಂದ ಬಂದಿದ್ದ ರುಮಾಲು ಸುತ್ತಿದ್ದ ನೂರಾರು ಮಂದಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು `ದೊರೆ~ ದರ್ಶನ ಮಾಡಿದರು. ಚನ್ನಮ್ಮನ ವೃತ್ತದಿಂದ ಕೇಶ್ವಾಪುರದ ಕಡೆಗೆ ಹೊರಳಿದಾಗ ಮೆರವಣಿಗೆ ಮತ್ತಷ್ಟು ಕಸುವು ಪಡೆದುಕೊಂಡಿತು. ಉಳಿದ ಮಾರ್ಗಗಳಿಂದಲೂ ಕಾರ್ಯಕರ್ತರು ಬಂದು ಕೂಡಿಕೊಂಡರು. ಕೋರ್ಟ್ ವೃತ್ತದಲ್ಲಿ ವಕೀಲರ ದಂಡು, ದೊಡ್ಡ ಹುದ್ದೆಗೇರಿದ ತಮ್ಮ `ಸದಸ್ಯ~ನನ್ನು ಆತ್ಮೀಯವಾಗಿ ಅಭಿನಂದಿಸಿತು.

ಕೇಶ್ವಾಪುರದಲ್ಲಿ ಶೆಟ್ಟರ್ ಅವರ ಒಡನಾಡಿಗಳು, ಅವರ ವಾಕಿಂಗ್‌ಗೆ ನಿತ್ಯ ಸಾಥ್ ಕೊಟ್ಟವರು ಫುಟ್‌ಪಾತ್ ಮೇಲೆ ನಿಂತುಕೊಂಡೇ ಶುಭಾಶಯ ಹೇಳಿದರು. ಶೆಟ್ಟರ್ ಎಲ್ಲರತ್ತ ಕೈಬೀಸಿದರು. ಮಧುರಾ ಎಸ್ಟೇಟ್‌ನಲ್ಲಿ ಮೆರವಣಿಗೆ ಸಾಗಿ ಬಂದಾಗ ಉತ್ಸಾಹ ಇಮ್ಮಡಿಗೊಂಡಿತು. ಶಿಲ್ಪಾ ನೇತೃತ್ವದ ಮಹಿಳಾ ಮಂಡಳದ ಸದಸ್ಯೆಯರೂ ಮೆರವಣಿಗೆಯಲ್ಲಿ ಕೂಡಿಕೊಂಡರು. ವಿಮಾನ ನಿಲ್ದಾಣದಿಂದ ಎಂಟು ಕಿ.ಮೀ. ದೂರದ ಮುಖ್ಯಮಂತ್ರಿಗಳ ಮನೆ ತಲುಪಲು ಮೆರವಣಿಗೆಗೆ  ಮೂರು ಗಂಟೆ ಬೇಕಾಯಿತು. 24 ವರ್ಷಗಳ ನಂತರ `ಹುಬ್ಬಳ್ಳಿಯಾಂವ~ ಮತ್ತೆ ಮುಖ್ಯಮಂತ್ರಿಯಾದ ಸಂಭ್ರಮ ಎದ್ದುಕಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.