ADVERTISEMENT

ತಾ.ಪಂ. ಸಭೆಯಲ್ಲಿ ಮತ್ತೆ ಎಂಇಎಸ್ ಸದಸ್ಯರಿಂದ ಗದ್ದಲ:ಬೆಳಗಾವಿ ಎಂದು ಹೇಳಿದ್ದಕ್ಕೆ ತೀವ್ರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2012, 19:30 IST
Last Updated 24 ಮಾರ್ಚ್ 2012, 19:30 IST

ಬೆಳಗಾವಿ: ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ `ಬೆಳಗಾವಿ~ ಎಂದು ಉಚ್ಚರಿಸಿದ ಅಧಿಕಾರಿಗಳನ್ನು ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ಅಸಂವಿಧಾನಿಕ ಹಾಗೂ ಅಶ್ಲೀಲ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ ಘಟನೆ ಶನಿವಾರ ನಡೆಯಿತು.

ಸಭೆ ಆರಂಭವಾದಾಗ ಅಧಿಕಾರಿಗಳು ಮಾತನಾಡುವಾಗ `ಬೆಳಗಾವಿ~ ಎಂದು ಉಚ್ಚರಿಸಿದ್ದಕ್ಕೆ ಎಂಇಎಸ್ ಸದಸ್ಯರು ಆಕ್ಷೇಪಿಸಿದರು.  `ಬೆಳಗಾಮ್~ ಎಂಬುದನ್ನು `ಬೆಳಗಾವಿ~ ಎಂದು ಯಾವ ಆಧಾರದಲ್ಲಿ ನೀವು ಹೇಳಿದಿರಿ. ಇದನ್ನು ಬದಲಾಯಿಸಿರುವ ಬಗ್ಗೆ ದಾಖಲೆಗಳನ್ನು ನೀಡಿರಿ ಎಂದು ಗದ್ದಲ ಎಬ್ಬಿಸಿದರು.

“ಈ ವಿಷಯವು ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಗೆ ಬರುವುದಿಲ್ಲ ಹಾಗೂ ಈ ಬಗ್ಗೆ ಚರ್ಚಿಸಲು ಇದು ಸಮರ್ಪಕವಾದ ವೇದಿಕೆಯೂ ಅಲ್ಲ” ಎಂದು ಅಧಿಕಾರಿಗಳು ಸಮಾಧಾನ ಪಡಿಸಲು ಯತ್ನಿಸಿದರು. ಹೀಗಿದ್ದರೂ ಸಹ ಎಂಇಎಸ್ ಸದಸ್ಯರು ಘೋಷಣೆಗಳನ್ನು ಕೂಗುತ್ತ, ಅಶ್ಲೀಲ ಹಾಗೂ ಅಸಂವಿಧಾನಿಕ ಪದಗಳಿಂದ ನಿಂದಿಸಿ, ಅಧಿಕಾರಿ ಐ.ಸಿ. ಹೆದ್ದುರಿ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದರು.
 
ಈ ವಿಷಯವನ್ನು ಕೈಬಿಟ್ಟು ಸಭೆಯ ಕಾರ್ಯಸೂಚಿ ಪ್ರಕಾರ ಚರ್ಚಿಸುವಂತೆ ಅಧಿಕಾರಿಗಳು ಮನವಿ ಮಾಡಿದರೂ, ಎಂಇಎಸ್ ಸದಸ್ಯರಾದ ಸುರೇಶ ರಾಜುಕರ್, ಸಾಗರ ಪಾಟೀಲ, ರಮೇಶ ಬೆಳಗಾಂವಕರ ಮತ್ತಿತರರು ಕನ್ನಡದ ವಿರುದ್ಧ ಘೋಷಣೆ ಕೂಗುತ್ತ, ಕನ್ನಡದಲ್ಲಿ `ಬೆಳಗಾವಿ~ ಎಂದು ಕರೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

ಬಿಜೆಪಿ ಹಾಗೂ ಕಾಂಗ್ರೆಸ್‌ನ ಕನ್ನಡ ಪರ ಸದಸ್ಯರು ಮಧ್ಯ ಪ್ರವೇಶಿಸಿ, `ಅಪ್ರಸ್ತುತ ವಿಷಯದ ಮೇಲೆ ಚರ್ಚೆ ನಡೆಸುವುದನ್ನು ಬಿಟ್ಟು, ಕುಡಿಯುವ ನೀರಿನ ಸಮಸ್ಯೆ ಹಾಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸೋಣ~ ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎಂಇಎಸ್ ಹಾಗೂ ಕನ್ನಡ ಪರ ಸದಸ್ಯರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಬಳಿಕ ಕೆಲ ಕಾಲ ಸಭೆಯನ್ನು ಮುಂಡೂಡಲಾಯಿತು.

ಬಳಿಕ ಸಭೆ ಆರಂಭವಾಗುತ್ತಿದ್ದಂತೆಯೇ, ಕನ್ನಡ ಪರ ಸದಸ್ಯ ಬಸನಗೌಡ ಪಾಟೀಲ ಮಾತನಾಡಿ, “ಸಭೆಯಲ್ಲಿನ ಬೆಳವಣಿಗೆ ಹಾಗೂ ಎಂಇಎಸ್ ಸದಸ್ಯರು ಪ್ರತಿ ಬಾರಿಯೂ ಸಭೆ ನಡೆಸಲು ಅಡ್ಡಿಪಡಿಸುತ್ತಿರುವ ಬಗ್ಗೆ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು” ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅವರನ್ನು ಒತ್ತಾಯಿಸಿದರು.

ಕಾರ್ಯನಿರ್ವಹಣಾಧಿಕಾರಿ ಎ.ಎಂ. ಪಾಟೀಲ ಮಾತನಾಡಿ, `ಸಭೆಯಲ್ಲಿ ಅಸಂವಿಧಾನಿಕ ಪದ ಬಳಕೆ ಹಾಗೂ ಅಶ್ಲೀಲ ನಿಂದಿನೆ ಸಹಿಸಲಸಾಧ್ಯ. ಇದು ಸಭೆಗೆ ಶೋಭೆ ತರುವುದಿಲ್ಲ. ಈ ಘಟನೆ ಖಂಡನೀಯ~ ಎಂದು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಮಲ್ಲವ್ವ ಕೋಲಕಾರ ವಹಿಸಿದ್ದರು. ಉಪಾಧ್ಯಕ್ಷೆ ಸುನೀತಾ ಬುವಾ ಹಾಜರಿದ್ದರು.

ತಾ.ಪಂ.ನ ಪ್ರತಿ ಸಾಮಾನ್ಯ ಸಭೆಯಲ್ಲೂ ಎಂಇಎಸ್ ಸದಸ್ಯರು `ಕನ್ನಡ- ಮರಾಠಿ~ ವಿಷಯಕ್ಕೆ ಸಂಬಂಧಿಸಿದಂತೆ ಗದ್ದಲ ಎಬ್ಬಿಸುತ್ತಿದ್ದಾರೆ. ಸಭೆಯ ನಡಾವಳಿಯಂತೆ ಕ್ಷೇತ್ರದ ಸಮಸ್ಯೆ, ಅಭಿವೃದ್ಧಿ ಕುರಿತು ಚರ್ಚಿಸುವುದನ್ನು ಬಿಟ್ಟು, ಭಾಷಾ ಸಮಸ್ಯೆ ಕುರಿತು `ಗದ್ದಲ~ ಎಬ್ಬಿಸುವುದನ್ನೇ ತಮ್ಮ ಕಾರ್ಯಸೂಚಿ ಮಾಡಿಕೊಂಡಿದ್ದಾರೆ ಎಂದು ಸದಸ್ಯ ಬಸನಗೌಡ ಪಾಟೀಲ ವಿಷಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.