ADVERTISEMENT

ತುಮಕೂರಲ್ಲಿ 18 ಸೆಂ.ಮೀ. ಮಳೆ

ಯಾದಗಿರಿಯಲ್ಲಿ ಗೋಡೆ ಕುಸಿದು ವೃದ್ಧ, ದೇವದುರ್ಗದಲ್ಲಿ ಸಿಡಿಲು ಬಡಿದು ಶುಶ್ರೂಷಕಿ ಸಾವು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 19:30 IST
Last Updated 10 ಅಕ್ಟೋಬರ್ 2017, 19:30 IST
ಸೋಮವಾರ ರಾತ್ರಿ ಸುರಿದ ಮಳೆಗೆ ತುಮಕೂರು–ದೇವರಾಯನದುರ್ಗ ರಸ್ತೆಯ ನಾಮದ ಚಿಲುಮೆ ಹತ್ತಿರ ಬಂಡೆಗಳು ರಸ್ತೆಗೆ ಉರುಳಿರುವುದು
ಸೋಮವಾರ ರಾತ್ರಿ ಸುರಿದ ಮಳೆಗೆ ತುಮಕೂರು–ದೇವರಾಯನದುರ್ಗ ರಸ್ತೆಯ ನಾಮದ ಚಿಲುಮೆ ಹತ್ತಿರ ಬಂಡೆಗಳು ರಸ್ತೆಗೆ ಉರುಳಿರುವುದು   

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ನಸುಕಿನವರೆಗೆ ಭಾರಿ ಮಳೆಯಾಗಿದೆ. ಗೋಡೆ ಕುಸಿದು ವೃದ್ಧರೊಬ್ಬರು ಹಾಗೂ ಸಿಡಿಲು ಬಡಿದು ಶುಶ್ರೂಷಕಿಯೊಬ್ಬರು ಮೃತಪಟ್ಟಿದ್ದಾರೆ. ನೂರಾರು ಮನೆಗಳಿಗೆ ಹಾನಿಯಾಗಿದೆ.

ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕು ಮಡ್ನಾಳ ಗ್ರಾಮದಲ್ಲಿ ಮಂಗಳವಾರ ಗೋಡೆ ಕುಸಿದು ಅಯ್ಯಪ್ಪ ಮರೆಪ್ಪ (80) ಮೃತಪಟ್ಟಿದ್ದು, ಗೋಡೆಯ ಬದಿಯಲ್ಲಿ ಆಟವಾಡುತ್ತಿದ್ದ ಆರು ಮಕ್ಕಳು ಗಾಯಗೊಂಡಿದ್ದಾರೆ. ರಾಯಚೂರು ಜಿಲ್ಲೆ ದೇವದುರ್ಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಿಂದ ಸೋಮವಾರ ರಾತ್ರಿ ಮನೆಗೆ ಹೋಗುವ ಸಂದರ್ಭದಲ್ಲಿ ಶುಶ್ರೂಷಕಿ ನೀಲಮ್ಮ ಸಂಗಪ್ಪ (28) ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ  ತುಮಕೂರಿನಲ್ಲಿ 18 ಸೆಂ.ಮೀ. ಮಳೆಯಾಗಿದೆ. ಚಿತ್ತಾಪುರ ತಾಲ್ಲೂಕು ನಾಲವಾರ ಗ್ರಾಮದಲ್ಲಿ 15.2, ಸೇಡಂನಲ್ಲಿ 12.4, ಕೋಡ್ಲಾದಲ್ಲಿ 12.2, ಔರಾದ್‌, ಕೋಲಾರ ತಲಾ 9, ದೇವದುರ್ಗ, ಬೆಂಗಳೂರು ತಲಾ 7, ಸೇಡಂ, ರಾಯಚೂರು, ಮಸ್ಕಿ, ಗುಡಿಬಂಡೆ, ಮಧುಗಿರಿ ತಲಾ 5 ಸೆಂ.ಮೀ. ಮಳೆಯಾಗಿದೆ.

ADVERTISEMENT

ಕೋಲಾರ ಜಿಲ್ಲೆಯಲ್ಲಿ 110 ಮನೆಗಳು ಕುಸಿದು ಬಿದ್ದಿದ್ದು, 2 ಕುರಿಗಳು ಸತ್ತಿವೆ.  ಬಂಗಾರಪೇಟೆಯಲ್ಲಿ ಮಳೆಯಿಂದ ಮನೆಗಳನ್ನು ಕಳೆದುಕೊಂಡ ಕುಟುಂಬದವರಿಗೆ ಕಲ್ಯಾಣ ಮಂಟಪಗಳಲ್ಲಿ ತಾತ್ಕಾಲಿಕ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ.

ತುಮಕೂರು ನಗರದಲ್ಲಿ 20ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ. ದಶಕಗಳ ಹಿಂದೆ ತುಂಬಿದ್ದ ಐತಿಹಾಸಿಕ ಅಮಾನಿಕೆರೆಯು ಭಾಗಶಃ ತುಂಬಿದೆ. ತುಮಕೂರು –ದೇವರಾಯನದುರ್ಗ ಸಂಪರ್ಕ ರಸ್ತೆಯ ನಾಮದ ಚಿಲುಮೆ ಬಳಿ ಬೃಹತ್ ಎರಡು ಬಂಡೆಗಳು ರಸ್ತೆಗೆ ಉರುಳಿ ಬಿದ್ದು ಸಂಚಾರ ಬಂದ್ ಆಗಿದೆ.

ನಗರದ ಎಂ.ಜಿ.ರಸ್ತೆಯ ಬಾಲಭವನ ನೆಲಮಹಡಿಯಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಗೆ ನೀರು ನುಗ್ಗಿದೆ. ಪೀಠೋಪಕರಣ, ಕಂಪ್ಯೂಟರ್, ದಾಖಲೆ ಪುಸ್ತಕಗಳು ನೀರಿನಲ್ಲಿ ತೇಲುತ್ತಿವೆ.

ನಗರದ ಹೊರವಲಯದ ಹಳೇ ಭೀಮಸಂದ್ರ ಗ್ರಾಮದ ಹತ್ತಿರ ರೈಲ್ವೆ ಕೆಳ ಸೇತುವೆಯಲ್ಲಿ 8 ಅಡಿಗಿಂತ ಹೆಚ್ಚು ನೀರು ನಿಂತಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಚಿತ್ರಾವತಿ ಬ್ಯಾರೇಜ್ ತುಂಬಿದೆ. ಆರು ವರ್ಷದ ಬಳಿಕ ಬ್ಯಾರೇಜ್‌ ತುಂಬಿರುವುದು ಆ ಭಾಗದ ಜನರಿಗೆ ಸಂತಸ ತಂದಿದೆ.

ಕಲಬುರ್ಗಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ. ಕಮಲಾವತಿ, ಕಾಗಿಣಾ ನದಿ ಉಕ್ಕಿ ಹರಿಯುತ್ತಿವೆ. ಸೇಡಂನಲ್ಲಿ ನಾಲ್ಕೈದು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಪಟ್ಟಣದ ರಸ್ತೆಗಳು ಜಲಾವೃತಗೊಂಡಿವೆ.

ಚಿತ್ತಾಪುರ ತಾಲ್ಲೂಕಿನ ನಾಗಾವಿ ಹಳ್ಳ, ಅಳ್ಳೊಳ್ಳಿ, ದಿಗ್ಗಾಂವ, ಇಟಗಾ, ಮೊಗಲಾ, ಮರಗೋಳ ಗ್ರಾಮಗಳ ಬಳಿ ಹರಿಯುವ ನಾಲಾಗಳು ಪ್ರವಾಹದಿಂದ ಉಕ್ಕಿ ಹರಿಯುತ್ತಿವೆ. ತಾಲ್ಲೂಕಿನ ದಂಡೋತಿ ಬಳಿ ಹರಿಯುವ ಕಾಗಿಣಾ ನದಿ ಅಪಾಯದ ಮಟ್ಟ ತಲುಪಿದ್ದರಿಂದ ವಾಹನಗಳು ಮಳಖೇಡ ಮಾರ್ಗವಾಗಿ ಸಂಚರಿಸಿದವು.

ರಾಯಚೂರು ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿದಿದ್ದು, ತಗ್ಗು ಪ್ರದೇಶದ ಜನವಸತಿಗಳು ಜಲಾವೃತವಾಗಿವೆ.

ಹನೂರು ಸಮೀಪದ ಪಿ.ಜಿ.ಪಾಳ್ಯ, ಒಡೆಯರಪಾಳ್ಯ, ಹಲಗಾಪುರ ಮುಂತಾದೆಡೆ ಭಾರಿ ಮಳೆಯಾಗಿದ್ದು, ಅಪಾರ ಹಾನಿ ಸಂಭವಿಸಿದೆ.

ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ವಡಕೆಹಳ್ಳ ಸಮೀಪ ನಿರ್ಮಿಸಿರುವ ಪರ್ಯಾಯ ರಸ್ತೆ ಮತ್ತೆ ಕೊಚ್ಚಿಕೊಂಡು ಹೋಗಿದೆ. ಲೊಕ್ಕನಹಳ್ಳಿ ಭಾಗದಲ್ಲಿ ಜಮೀನುಗಳಿಗೆ ನೀರು ನುಗ್ಗಿ ಫಸಲು ನಾಶವಾಗಿದೆ. ಹಲಗಾಪುರ ಗ್ರಾಮದಲ್ಲಿ ಮನೆಯ ಛಾವಣಿ ಕುಸಿದುಬಿದ್ದು, ಮಹಿಳೆಗೆ ಗಾಯವಾಗಿದೆ. ಕಾಂಚಳ್ಳಿ ಗ್ರಾಮದಲ್ಲಿ ಗೋಡೆ ಕುಸಿದು ಹಸು ಸಾವನ್ನಪ್ಪಿದೆ.

ಬಿಳಗಿರಿ ರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯ, ಮಲೆಮಹದೇಶ್ವರ ವನ್ಯಜೀವಿ ಧಾಮಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಉಡುತೊರೆ ಜಲಾಶಯ ಬಹುತೇಕ ಭರ್ತಿಯಾಗಿದೆ. ತಟ್ಟೆಹಳ್ಳದಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರಿಂದ ತಗ್ಗಿನ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರನ್ನು ಮುನ್ನೆಚ್ಚರಿಕೆ ದೃಷ್ಟಿಯಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.