ADVERTISEMENT

ತೈಲ ಪೈಪ್‌ಗೆ ಕನ್ನ: ಇಬ್ಬರು ಪಿಐಗಳ ಅಮಾನತು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2011, 18:30 IST
Last Updated 12 ಮಾರ್ಚ್ 2011, 18:30 IST

ಚಿಕ್ಕಮಗಳೂರು:  ಎಂಆರ್ ಪಿಎಲ್ ಕೊಳವೆ ಮಾರ್ಗಕ್ಕೆ ಕನ್ನ ಕೊರೆದು ಕೋಟ್ಯಂತರ ರೂಪಾಯಿ ಮೌಲ್ಯದ ಡೀಸೆಲ್ ಕಳವು ಮಾಡುತ್ತಿದ್ದ ಪ್ರಕರಣದಲ್ಲಿ ಕರ್ತವ್ಯಲೋಪ ಆರೋಪದ ಮೇರೆಗೆ ಚಿಕ್ಕಮಗಳೂರು ನಗರ ಮತ್ತು ಮೂಡಿಗೆರೆ ಪಟ್ಟಣದ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಸಿದ್ದಯ್ಯ ಮತ್ತು ಜಿ.ಟಿ.ಸ್ವಾಮಿ ಎಂಬುವವರನ್ನು ಪಶ್ಚಿಮ ವಲಯ ಐಜಿಪಿ ಅಲೋಕ್ ಕುಮಾರ್ ಶನಿವಾರ ಅಮಾನತುಗೊಳಿಸಿದ್ದಾರೆ.

ಮಂಗಳೂರಿನಿಂದ ಬೆಂಗಳೂರಿಗೆ ತೈಲ ಸಾಗಿಸುವ ಎಂಆರ್‌ಪಿಎಲ್‌ನ ಕೊಳವೆ ಮಾರ್ಗವನ್ನು ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳಲ್ಲಿ ಹಲವೆಡೆ ಕೊರೆದು ಹಲವು ತಿಂಗಳಗಳು ಕಾಲ ಕೋಟ್ಯಂತರ ಮೌಲ್ಯದ ಡೀಸೆಲ್ ಕಳವು ಮಾಡುವ ದೊಡ್ಡ ಜಾಲವೇ ಕೆಲಸ ಮಾಡುತ್ತಿತ್ತು. ಈ ಬಗ್ಗೆ ಮಾಹಿತಿ ಇದ್ದರೂ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ. ಈ ಜಾಲದಲ್ಲಿ ಅಧಿಕಾರಿಗಳ ಕೈವಾಡವೂ ಇದೆ ಎಂಬ ಆರೋಪಗಳೂ ಕೇಳಿಬಂದಿದ್ದವು.

ಇಡೀ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ಸಂಶಯಾಸ್ಪದ ಪಾತ್ರದ ಬಗ್ಗೆ ಡಿವೈಎಸ್‌ಪಿ ವೇದಮೂರ್ತಿ ಐಜಿಪಿ ಅವರಿಗೆ ವರದಿ ಸಲ್ಲಿಸಿದ್ದರು. ಇದರೊಂದಿಗೆ ‘ಎಂಆರ್‌ಪಿಎಲ್ ಪೈಪ್‌ಲೈನ್‌ಗೆ ಕನ್ನ’ ಪ್ರಕರಣದಲ್ಲಿ ಒಟ್ಟು ಮೂವರು ಪೊಲೀಸ್ ಅಧಿಕಾರಿಗಳು ಅಮಾನತುಗೊಂಡಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.