ADVERTISEMENT

ದಲಿತರ ಮೇಲೆ ಹಲ್ಲೆ: ಆರೋಪಿಗಳಿಗೆ ಶೋಧ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 19:59 IST
Last Updated 8 ಏಪ್ರಿಲ್ 2013, 19:59 IST

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹುಸ್ಕೂರಿನಲ್ಲಿ ದಲಿತ ಯುವಕ ಹಾಗೂ ಆತನ ತಾಯಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ನಿಂಗರಾಜು ಸೇರಿದಂತೆ ಏಳೂ ಮಂದಿ ಆರೋಪಿಗಳು ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಗ್ರಾಮಕ್ಕೆ ಎರಡು ಬಾರಿ ಹೋಗಿ ಬಂದಿದ್ದಾರೆ. ಘಟನೆ ಕುರಿತು ತನಿಖೆ ನಡೆಯುತ್ತಿದೆ. ಘಟನೆಯ ಸತ್ಯಾಸತ್ಯತೆ ತನಿಖೆ ಪೂರ್ಣಗೊಂಡ ನಂತರವಷ್ಟೇ ಗೊತ್ತಾಗಲಿದೆ ಎನ್ನುತ್ತಾರೆ ಡಿವೈಎಸ್ಪಿ ಆನಂದ್.

ಘಟನೆ ವಿವರ: `ನಾನು, ನನ್ನ ಸಹೋದರ ಚಿಕ್ಕಸ್ವಾಮಿ, ಚೇತನ್‌ಕುಮಾರ್ ಮತ್ತಿತರರು ಯತ್ತಂಬಾಡಿಯಲ್ಲಿ ನಡೆಯುತ್ತಿದ್ದ ಕಾಳೇಶ್ವರ ಜಾತ್ರೆಗೆ ಮಾ.28 ರಂದು  ರಾತ್ರಿ 9ರ ಸುಮಾರಿಗೆ ಹೊರಟಿದ್ದೆವು. ಗ್ರಾಮದ ಸರ್ಕಲ್‌ನಲ್ಲಿದ್ದ ಚೇತನ್‌ಕುಮಾರ್ ಅವರ ಸಂಬಂಧಿ ನಿಂಗರಾಜು ಮತ್ತಿತರರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದರು' ಎಂದು ಮಳವಳ್ಳಿ ತಾಲ್ಲೂಕಿನ ಹುಸ್ಕೂರಿನ ಕೆಂಪರಾಜು `ಪ್ರಜಾವಾಣಿ'ಗೆ ತಿಳಿಸಿದರು.

ಸವರ್ಣೀಯನಾದ ಚೇತನ್‌ಕುಮಾರ್ ಜತೆಗೆ ದಲಿತನಾದ ನಾನು ತಿರುಗಾಡುವುದಕ್ಕೆ ಆಕ್ಷೇಪಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದರು. ಹಲ್ಲೆ ತಡೆಯಲು ಮುಂದಾದ ನನ್ನ ತಾಯಿಯ ಮೇಲೆಯೂ ಹಲ್ಲೆ ನಡೆಸಿ, ರವಿಕೆ ಹರಿದು ಅವಮಾನಿಸಿದ್ದಾರೆ ಎಂದು ದೂರಿದರು. ಆರೋಪಿ ನಿಂಗರಾಜು ಅವರ ಸಹೋದರನ ಮಗ ಚೇತನ್ ಹಾಗೂ ನಾನು ಒಂದೇ ಕಡೆ ಓದುತ್ತಿದ್ದೇವೆ.

ಹೀಗಾಗಿ ಇಬ್ಬರ ನಡುವೆ ಸ್ನೇಹವೂ ಇದೆ. ಈ ಬಗ್ಗೆ ಅಸಮಾಧಾನ ಹೊಂದಿದ್ದ ನಿಂಗರಾಜು ಅವರು ಮನುಕುಮಾರ್, ತೇಜಸ್‌ಕುಮಾರ್, ಕೆಂಪೇಗೌಡ, ಸತೀಶ್, ಕುಮಾರ್ ಹಾಗೂ ಮರಿರೇಗೌಡರೊಂದಿಗೆ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದರು. ಜೋರಾಗಿ ಹೊಡೆದಿದ್ದರಿಂದ ಒಳಪೆಟ್ಟುಗಳಾಗಿವೆ. ಸರಿಯಾಗಿ ಊಟ ಮಾಡಲೂ ಆಗುತ್ತಿಲ್ಲ. ಘಟನೆಯಿಂದ ಮನಸ್ಸಿಗೆ ನೋವಾಗಿದೆ ಎಂದು ಕೆಂಪರಾಜು ಹೇಳಿದರು.

`ಮಾ.28 ರಂದು ಕುರುಕ್ಷೇತ್ರ ನಾಟಕ ಪ್ರದರ್ಶನವಿತ್ತು. ಕೆಲವರು ಆ ನಾಟಕದ ಪ್ರದರ್ಶನ ನಿಲ್ಲಿಸಲು ಯತ್ನಿಸಿದರು. ಆ ವೇಳೆ ಮಾತಿನ ಚಕಮಕಿ  ನಡೆಯಿತು, ಆದರೆ ಹಲ್ಲೆ ನಡೆದಿಲ್ಲ. ಘಟನೆ ನಡೆದಾಗ ಕೆಂಪರಾಜು ಅವರ ತಾಯಿ ಸ್ಥಳದಲ್ಲಿ ಇರಲಿಲ್ಲ' ಎನ್ನುವುದು ಆರೋಪಿಗಳ ಸಂಬಂಧಿಕರ ಹೇಳಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.