ADVERTISEMENT

ದಾಖಲೆ ಇಲ್ಲದ ₹ 86 ಲಕ್ಷ ನಗದು ವಶ

1,660 ಜನರಿಗೆ ಜಾಮೀನುರಹಿತ ವಾರಂಟ್: ಸಂಜೀವ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2018, 19:30 IST
Last Updated 1 ಏಪ್ರಿಲ್ 2018, 19:30 IST

ಬೆಂಗಳೂರು: ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ₹ 86 ಲಕ್ಷ ನಗದು ಮತ್ತು 160 ಲ್ಯಾಪ್‌ಟಾಪ್‌ಗಳನ್ನು ರಾಜ್ಯದ ವಿವಿಧೆಡೆ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಮತದಾರರಿಗೆ ಆಮಿಷ ಒಡ್ಡಿದ ನಾಲ್ಕು ಪ್ರಕರಣ ದಾಖಲಿಸಲಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸಿದ 577 ಜನರಿಂದ ಮುಚ್ಚಳಿಕೆ ಪಡೆಯಲಾಗಿದ್ದು, 1,660 ಜನರಿಗೆ ಜಾಮೀನುರಹಿತ ವಾರಂಟ್ ಹೊರಡಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ಎಲ್ಲೆಲ್ಲಿ ವಶ: ಅಪ್ಸರಾ ಹಾಜಿ ಅಡತಿ ಎಂಬುವರು ಬಳ್ಳಾರಿಯಿಂದ ಸೊಲ್ಲಾಪುರಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದ ₹ 14 ಲಕ್ಷವನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಗುಗ್ಗಲಮರಿ ಚೆಕ್‌ಪೋಸ್ಟ್‌ನಲ್ಲಿ ವಶಪಡಿಸಿಕೊಳ್ಳಲಾಗಿದೆ.

ADVERTISEMENT

ಆಂಧ್ರಪ್ರದೇಶದ ಅಮರಾಪುರ ಗ್ರಾಮದ ಸಿಮೆಂಟ್ ವ್ಯಾಪಾರಿ ಅಶೋಕ್ ಎಂಬುವರ ಕಾರಿನಲ್ಲಿ ₹ 10.59 ಲಕ್ಷವನ್ನು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಲಕ್ಕನಹಳ್ಳಿ ಗ್ರಾಮದ ಬಳಿ ಜಪ್ತಿ ಮಾಡಲಾಗಿದೆ. ಅನಂತಪುರದಿಂದ ರಾಯಚೂರಿಗೆ ಬರುತ್ತಿದ್ದ ನಾಗರಾಜ ಎಂಬುವವರ ಕಾರಿನಲ್ಲಿ ₹ 5 ಲಕ್ಷವನ್ನು ರಾಯಚೂರು ಜಿಲ್ಲೆ ಶಕ್ತಿನಗರ ಸಮೀಪದ ಸಿಂಗನೋಡಿ ಚೆಕ್‌ಪೋಸ್ಟ್‌ ಬಳಿ ವಶಕ್ಕೆ ಪಡೆಯಲಾಗಿದೆ. ದಾಖಲೆ ಇಲ್ಲದ ಕಾರಣ ಕಾರಿನಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಯಚೂರು ಜಿಲ್ಲೆ ಲಿಂಗಸುಗೂರು ಕಾಂಗ್ರೆಸ್‌ ಹಿರಿಯ ಮುಖಂಡ ಡಿ.ಎಸ್‌. ಹೂಲಗೇರಿ ಮನೆ ಮೇಲೆ ದಾಳಿ ನಡೆಸಿದ ಜಾಗೃತ ದಳದ ಅಧಿಕಾರಿಗಳು, ₹ 1.60 ಲಕ್ಷ ನಗದು, ಕರಪತ್ರ ಹಾಗೂ ಕಿರುಹೊತ್ತಿಗೆ ಜಪ್ತಿ ಮಾಡಿದ್ದಾರೆ.

ಬೆಳಗಾವಿಯಲ್ಲಿ ಸೀರೆ ವಶ: ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಹುಲಕುಂದದ ಮನೆಯೊಂದರಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿಡಲಾಗಿತ್ತು ಎನ್ನಲಾದ ಎರಡು ಸಾವಿರ ಸೀರೆಗಳನ್ನು ಶನಿವಾರ ರಾತ್ರಿ ವಶಪಡಿಸಿಕೊಳ್ಳಲಾಗಿದೆ. ಸೀರೆಗಳ ಮೌಲ್ಯ ₹ 2.5 ಲಕ್ಷ ಎಂದು ಅಂದಾಜಿಸಲಾಗಿದ್ದು, ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

704 ಲೀಟರ್ ಮದ್ಯ ವಶ: ಅಕ್ರಮವಾಗಿ ಸಾಗಿಸುತ್ತಿದ್ದ 704.13 ಲೀಟರ್ ಮದ್ಯವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದು, ರಾಜ್ಯದ ವಿವಿಧೆಡೆ 69 ಪ್ರಕರಣ ದಾಖಲಿಸಿದ್ದಾರೆ.

ಕುಕ್ಕರ್‌, ಇಸ್ತ್ರಿ ಪೆಟ್ಟಿಗೆಗಳ ಮೌಲ್ಯ ₹ 1.56 ಕೋಟಿ
ಬೆಳಗಾವಿ:
ಬೆಳಗಾವಿಯಲ್ಲಿ ಶನಿವಾರ ವಶಪಡಿಸಿಕೊಳ್ಳಲಾದ ಕುಕ್ಕರ್‌ ಹಾಗೂ ಇಸ್ತ್ರಿ ಪೆಟ್ಟಿಗೆಗಳ ಮೌಲ್ಯ ₹ 1.56 ಕೋಟಿ ಎಂದು ಪೊಲೀಸ್‌ ಆಯುಕ್ತ ಡಿ.ಸಿ. ರಾಜಪ್ಪ ತಿಳಿಸಿದ್ದಾರೆ.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ಭಾವಚಿತ್ರವಿದ್ದ ರಟ್ಟಿನ ಪೆಟ್ಟಿಗೆಗಳಲ್ಲಿ ಸಾಗಿಸಲಾಗುತ್ತಿದ್ದ 5 ಲೀಟರ್‌ ಸಾಮರ್ಥ್ಯದ ಕುಕ್ಕರ್‌ಗಳನ್ನು ಇಲ್ಲಿನ ಜಾಧವ ನಗರದಲ್ಲಿ ವಾಹನ ಸಮೇತ ವಶಕ್ಕೆ ಪಡೆಯಲಾಗಿತ್ತು. ಹಾಗೂ ಹನುಮಾನ್‌ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಸಂಗ್ರಹಿಸಿದ್ದ ಕುಕ್ಕರ್‌ಗಳನ್ನು ಹಾಗೂ ಇಸ್ತ್ರಿ ಪೆಟ್ಟಿಗೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.