ಬೆಂಗಳೂರು: ಶತಮಾನೋತ್ಸವದ ಅಂಚಿನಲ್ಲಿರುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ‘ಕನ್ನಡ ಸಾಹಿತ್ಯ ಪರಿಷತ್’ಗೆ ಸಿಬ್ಬಂದಿ ಕೊರತೆ ಕಾಡುತ್ತಿದೆ.
ಹೀಗಾಗಿ, ಎಲ್ಲ ಕೆಲಸಗಳನ್ನೂ ದಿನಗೂಲಿ ನೌಕರರಿಂದಲೇ ಮಾಡಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಇದರಿಂದ ಕನ್ನಡ ಸಾಹಿತ್ಯ ಚಟುವಟಿಕೆಗಳು ಕುಂಠಿತವಾಗುತ್ತಿವೆ.
ಪರಿಷತ್ತಿನಲ್ಲಿ ಈಗ ಉಳಿದಿರುವುದು 13 ಸಿಬ್ಬಂದಿ ಮಾತ್ರ. ಇನ್ನು ನಾಲ್ಕು ವರ್ಷಗಳಲ್ಲಿ ಇವರೆಲ್ಲ ನಿವೃತ್ತಿಯಾಗಲಿದ್ದಾರೆ. ಇದರಿಂದಾಗಿ ದೈನಂದಿನ ಚಟುವಟಿಕೆಗಳು ಹಾಗೂ ಕೆಲವು ಯೋಜನೆಗಳನ್ನು ಸ್ಥಗಿತಗೊಳಿಸಬೇಕಾದ ಇಕ್ಕಟ್ಟು ಎದುರಾಗಿದೆ.
ಪರಿಷತ್‌ಗೆ ಮಂಜೂರಾಗಿರುವ ಸಿಬ್ಬಂದಿ 48. ಇವರಿಗೆ ಸರ್ಕಾರವೇ ಸಂಬಳ ನೀಡುತ್ತಿತ್ತು. ಒಬ್ಬೊಬ್ಬರಾಗಿ ನಿವೃತ್ತರಾದ ನಂತರ ಈಗ ಉಳಿದಿರುವವರು 13. ಇದರಿಂದಾಗಿ ಪರಿಷತ್ 30 ದಿನಗೂಲಿ ನೌಕರರನ್ನು ತಾತ್ಕಾಲಿಕವಾಗಿ ನೇಮಿಸಿಕೊಂಡು ತನ್ನ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ.
ದೈನಂದಿನ ಕಾರ್ಯದ ಜತೆಗೆ ಪುಸ್ತಕ ಪ್ರಕಟಣೆ ನಿರ್ವಹಣೆ, ಸಮ್ಮೇಳನದ ಚಟುವಟಿಕೆಗಳು, ಸದಸ್ಯತ್ವ ನೋಂದಣಿ, ‘ಕನ್ನಡ ನುಡಿ’ ಮಾಸ ಪತ್ರಿಕೆ ನಿರ್ವಹಣೆ, ಉಪನ್ಯಾಸ ಕಾರ್ಯಕ್ರಮಗಳು, ವಿಚಾರ ಸಂಕಿರಣ ಮುಂತಾದ ಕೆಲಸಗಳನ್ನು ಈ ಸಿಬ್ಬಂದಿ ನಿರ್ವಹಿಸುತ್ತಾರೆ.
ಪರಿಷತ್ ಎರಡು ಲಕ್ಷ ಸದಸ್ಯರನ್ನು ಹೊಂದಿದ್ದು, 30 ಜಿಲ್ಲಾ ಘಟಕಗಳು ಹಾಗೂ 176 ತಾಲ್ಲೂಕು ಘಟಕಗಳು, ಹಾಗೂ 4 ಗಡಿನಾಡ ಘಟಕಗಳ ಕಾರ್ಯಚಟುವಟಿಕೆಗಳ ಉಸ್ತುವಾರಿಯನ್ನು ವಹಿಸುತ್ತಿದೆ. ಕನ್ನಡಿಗರ ಇಂಥ ಪ್ರತಿಷ್ಠಿತ ಸಂಸ್ಥೆಗೆ ಸಿಬ್ಬಂದಿ ನೇಮಕ ಮಾಡಲು ಅನುಮತಿ ಕೊಡುವ ಬಗ್ಗೆ ಇದುವರೆಗೆ ಸರ್ಕಾರ ಚಿಂತನೆಯೇ ಮಾಡಿಲ್ಲ.
ಆರಂಭದಲ್ಲಿ ಸಿಬ್ಬಂದಿಗೆ ಪರಿಷತ್ ವತಿಯಿಂದಲೇ ಸಂಬಳ ನೀಡಲಾಗುತ್ತಿತ್ತು. ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸರ್ಕಾರದಿಂದಲೇ ವೇತನ ನೀಡಲು ಆರಂಭಿಸಲಾಯಿತು. ಆದರೆ, ಪ್ರತಿ ವರ್ಷ ಸಿಬ್ಬಂದಿ ನಿವೃತ್ತಿಯಾಗುತ್ತಿ ದ್ದರೂ ಹೊಸ ನೇಮಕಾತಿಗಳು ನಡೆಯಲಿಲ್ಲ. ವೃಂದ ಮತ್ತು ಮತ್ತು ನೇಮಕಾತಿ ನಿಯಮಾವಳಿಗಳು ಪರಿಷತ್‌ಗೆ ಅನ್ವಯಿಸುತ್ತಿಲ್ಲ. ಹೀಗಾಗಿ ನೇಮಕಾತಿ ಬಗ್ಗೆ ಸರ್ಕಾರ ಗಮನವನ್ನೇ ಹರಿಸಲಿಲ್ಲ.
ಯೋಜನೆಗಳಿಗೂ ಹಣದ ಕೊರತೆ: ಪರಿಷತ್‌ನ ಶತಮಾನೋತ್ಸವ ಸಂದರ್ಭದಲ್ಲಿ ಹಲವು ಯೋಜನೆಗಳನ್ನು ಕೈಗೊಳ್ಳಲು ಉದ್ದೇಶಿಸಿದ್ದರೂ ಸರ್ಕಾರದ ವತಿಯಿಂದ ಅನುದಾನ ಸಕಾಲಕ್ಕೆ ದೊರೆಯುತ್ತಿಲ್ಲ ಎನ್ನುವ ಕೊರಗು ಕಾಡುತ್ತಿದೆ.
‘ಕಳೆದ 100 ವರ್ಷಗಳಲ್ಲಿನ ಶ್ರೇಷ್ಠ ಸಾಹಿತಿಗಳು ಬರೆದಿರುವ 100 ಆಯ್ದ ಪುಸ್ತಕಗಳನ್ನು ಮರು ಪ್ರಕಟಿಸಲು ಪರಿಷತ್ ಉದ್ದೇಶಿಸಿದೆ. ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ಎಲ್ಲ ಪ್ರಕಾರಗಳ 15 ಸಂಪುಟಗಳನ್ನು ತರಲು ಯೋಜನೆ ಸಿದ್ಧಪಡಿಸಿದ್ದು, ಇದಕ್ಕಾಗಿ 15 ಸಂಪಾದಕರನ್ನು ನೇಮಿಸಲಾಗಿದೆ.
ಸಾಹಿತ್ಯ ಕೋಶ ಪ್ರಕಟಣೆ ಹಾಗೂ ಕಳೆದ 100 ವರ್ಷಗಳಲ್ಲಿ ಸಾಹಿತ್ಯ ಪರಿಷತ್ ನಡೆದು ಬಂದ ದಾರಿ, ಬೆಳವಣಿಗೆ, ಚಟುವಟಿಕೆಗಳ ಇತ್ಯಾದಿ ಸಮಗ್ರ ವಿವರಗಳನ್ನು ಒಳಗೊಂಡ ಸಾಕ್ಷ್ಯಚಿತ್ರ ಸಿದ್ಧಪಡಿಸುವ ಯೋಜನೆಗೆ ಚಾಲನೆ ದೊರೆತಿದ್ದು, ಪ್ರಾಯೋಜಕರಿಗಾಗಿ ಹುಡುಕಾಟ ನಡೆದಿದೆ. ಹಂಸಲೇಖ ಅವರು ಸಾಕ್ಷ್ಯಚಿತ್ರದ ಗೀತ ರಚನೆ ಮತ್ತು ಸಂಗೀತ ನಿರ್ದೇಶನ ಮಾಡಲಿದ್ದಾರೆ. ಆದರೆ, ಇಂತಹ ಹಲವಾರು ಯೋಜನೆಗಳಿಗೆ ಸರಿಯಾಗಿ ಹಣ ದೊರೆಯುತ್ತಿಲ್ಲ’ ಎಂದು ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳುತ್ತಾರೆ.
ಪರಿಷತ್ತಿನ ಸಂಕಷ್ಟ...
ಮಂಜೂರಾದ ಹುದ್ದೆ 48
ಹಾಲಿ ಇರುವ ಸಿಬ್ಬಂದಿ 13
ದಿನಗೂಲಿಗಳು 30
ಶತಮಾನೋತ್ಸವ ಭವನದ ಕನಸು ಈಡೇರುವುದೇ?
ಕನ್ನಡ ಭಾಷೆ, ಸಂಸ್ಕೃತಿ, ಕಲೆ ರಕ್ಷಿಸಿ, ಬೆಳೆಸುವ ಮಹದಾಶಯದೊಂದಿಗೆ 1915ರಲ್ಲಿ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ ಈಗ ಶತಮಾನೋತ್ಸವದ ಹೊಸ್ತಿಲಲ್ಲಿದೆ.
ಇದರ ನೆನಪಿಗಾಗಿ ಭವನ ನಿರ್ಮಿಸಬೇಕು ಎನ್ನುವ ಪರಿಷತ್ ಆಶಯ ಈಡೇರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಪರಿಷತ್ ಆವರಣದಲ್ಲಿ ರೂ 5ಕೋಟಿ ವೆಚ್ಚದಲ್ಲಿ ಶತಮಾನೋತ್ಸವದ ಭವನ ನಿರ್ಮಾಣಕ್ಕೆ ಅನುದಾನ ಕೋರಿ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವ ದೂಳು ತಿನ್ನುತ್ತಿದೆ.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭವನಕ್ಕಾಗಿ ರೂ3.5 ಕೋಟಿ ಮಂಜೂರು ಮಾಡಿದ್ದರು. ಆದರೆ, ಈ ಹಣ ವಾಪಸ್ ಸರ್ಕಾರಕ್ಕೆ ಹೋಗಿದೆ.
‘ಶತಮಾನೋತ್ಸವ ಭವನ ಸಾಂಸ್ಕೃತಿಕ ಕೇಂದ್ರವಾಗಲಿದೆ. ಆದರೆ, ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆಯಲಾಗಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಪರಿಷತ್‌ಗೆ ಸಿಬ್ಬಂದಿ ನೇಮಕಾತಿ ಬಗ್ಗೆಯೂ ಕ್ರಮಕೈಗೊಳ್ಳುತ್ತಿಲ್ಲ. ವೃಂದ ಮತ್ತು ನೇಮಕಾತಿ ನಿಯಮಾವಳಿಗಳನ್ನು ಪರಿಷತ್‌ಗೂ ಅನ್ವಯಿಸಿ ಸಿಬ್ಬಂದಿ ನೇಮಿಸುವಂತೆ ಪರಿಷತ್ ಸಲ್ಲಿಸಿದ ಮನವಿಗಳಿಗೆ ಸರ್ಕಾರ ಇದುವರೆಗೂ ಸ್ಪಂದಿಸಿಲ್ಲ’ ಎಂದು ಪುಂಡಲೀಕ ಹಾಲಂಬಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.