ADVERTISEMENT

ದುಬಾರೆಯಲ್ಲಿ ರ್‍ಯಾಫ್ಟಿಂಗ್‌ಗೆ ನಿಷೇಧ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2018, 19:30 IST
Last Updated 28 ಮಾರ್ಚ್ 2018, 19:30 IST
ದುಬಾರೆಯ ಕಾವೇರಿ ನದಿಯಲ್ಲಿ ರ್‍ಯಾಫ್ಟಿಂಗ್‌ (ಸಂಗ್ರಹ ಚಿತ್ರ)
ದುಬಾರೆಯ ಕಾವೇರಿ ನದಿಯಲ್ಲಿ ರ್‍ಯಾಫ್ಟಿಂಗ್‌ (ಸಂಗ್ರಹ ಚಿತ್ರ)   

ಮಡಿಕೇರಿ: ಕುಶಾಲನಗರದ ದುಬಾರೆ ಸೇರಿದಂತೆ ಕಾವೇರಿ ನದಿಯ ವಿವಿಧ ಭಾಗದಲ್ಲಿ ನಡೆಯುತ್ತಿರುವ ಅನಧಿಕೃತ ರಿವರ್‌ ರ್‍ಯಾಫ್ಟಿಂಗ್‌ ಅನ್ನು ಜಿಲ್ಲಾಡಳಿತ ತಾತ್ಕಾಲಿಕವಾಗಿ ನಿಷೇಧಿಸಿ, ಆದೇಶಿಸಿದೆ.

ಜನರ ಪ್ರಾಣಹಾನಿ, ಆಸ್ತಿ ಹಾನಿಯಾಗಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ಕಾನೂನು ಭಂಗವಾಗುವ ಸಂಭವ ಇರುವುದರಿಂದ ಫೆ. 28ರಿಂದ ಒಂದು ತಿಂಗಳ ಅವಧಿಗೆ ಸಂಪೂರ್ಣವಾಗಿ ರ್‍ಯಾಫ್ಟಿಂಗ್‌ ನಿಷೇಧಿಸಿ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಆದೇಶಿಸಿದ್ದಾರೆ.

ರ್‍ಯಾಫ್ಟಿಂಗ್‌ಗೆ ನಡೆಸುವವರು ಅಥವಾ ಅದಕ್ಕೆ ಸಂಬಂಧಿಸಿದವರು ಸೂಕ್ತ ಸಮಯದಲ್ಲಿ ದಾಖಲೆಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಇಲ್ಲ ದಿದ್ದರೆ ಷರತ್ತು ಬದ್ಧವಾದ ಈ ಆದೇಶವನ್ನು ಶಾಶ್ವತ ಆದೇಶವೆಂದು ಪರಿಗಣಿಸಿ ರ್‍ಯಾಫ್ಟಿಂಗ್‌ ಅನ್ನು ಸಂಪೂರ್ಣ ನಿಷೇಧಿಸಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಪ್ರಕರಣ ಮುಂದಿನ ವಿಚಾರಣೆಯನ್ನು ಮಾರ್ಚ್ 27ರಂದು ಮಧ್ಯಾಹ್ನ 3ಕ್ಕೆ ನಿಗದಿಪಡಿಸಿದ್ದು, ಸಂಬಂಧಪಟ್ಟವರು ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಹೊರಡಿಸಿರುವ ಷರತ್ತು ಬದ್ಧ ಆದೇಶವನ್ನು ಯಾಕೆ ಅಂತಿಮ ಆದೇಶವೆಂದು ಪರಿಗಣಿಸಬಾರದು ಎಂಬುದಕ್ಕೆ ಸಮಜಾಯಿಷಿ ನೀಡಬೇಕು ಎಂದು ತಿಳಿಸಲಾಗಿದೆ.

ಇಲ್ಲವಾದ್ದಲ್ಲಿ ಈ ಆದೇಶವನ್ನು ಶಾಶ್ವತ ಆದೇಶವಾಗಿ ಹೊರಡಿಸ ಲಾಗುತ್ತದೆ. ಆದೇಶ ಉಲ್ಲಂಘನೆಯಾದಲ್ಲಿ ಸಂಬಂಧ ಪಟ್ಟವರ ವಿರುದ್ಧ ಕಲಂ 188 ಭಾರತ ದಂಡ ಪ್ರಕ್ರಿಯೆ ಅಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಕಾನೂನು ಬಾಹಿರವಾಗಿ ದಂಧೆ ಯನ್ನು ನಡೆಸಲು ಕಾನೂನಿನ ಅಡಿಯಲ್ಲಿ ಅವಕಾಶವಿಲ್ಲ. ಸುರಕ್ಷಾ ಕ್ರಮಗಳ ಬಗ್ಗೆ ಸರ್ಕಾರ ಈಗಾಗಲೇ ಸುತ್ತೋಲೆ ಕಳುಹಿಸಿದೆ. ಸುತ್ತೋಲೆಯಲ್ಲಿರುವ ಷರತ್ತುಗಳನ್ನು ರಿವರ್‌ ರ್‍ಯಾಫ್ಟಿಂಗ್‌ ನಡೆಸುವವರು ಪಾಲಿಸುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಕುಶಾಲನಗರ, ದುಬಾರೆಯ ಕಾವೇರಿ ನದಿಯಲ್ಲಿ ರಿವರ್‌ ರ್‍ಯಾಫ್ಟಿಂಗ್‌ ನಡೆಸುವ ವಿಷಯದಲ್ಲಿ ಪದೇ ಪದೇ ಗಲಾಟೆ ಮಾಡುತ್ತಾ ಪ್ರವಾಸಿಗರಿಗೆ ಮತ್ತು ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದು, ಇದರಿಂದ ದುಬಾರೆ ಹಾಗೂ ಸುತ್ತಮುತ್ತಲಿನ ಜಾಗದಲ್ಲಿ ಅಶಾಂತಿಯ ವಾತಾವರಣವಿದೆ ಎಂದು ಉಲ್ಲೇಖಿಸಿದ್ದಾರೆ.

ಫೆ.18ರಂದು ದುಬಾರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಕಾವೇರಿ ನದಿಯ ವಿವಿಧ ಭಾಗಗಳಲ್ಲಿ ಕಾನೂನು ಬಾಹಿರವಾಗಿ ಯಾವುದೇ ಮಾರ್ಗಸೂಚಿ ಮತ್ತು ಸುರಕ್ಷತಾ ಕ್ರಮ ಕೈಕೊಂಡಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.