ADVERTISEMENT

ದೇವಸ್ಥಾನದ ಗೋಡೆ ಕುಸಿದು ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 23 ಜುಲೈ 2016, 19:32 IST
Last Updated 23 ಜುಲೈ 2016, 19:32 IST
ಜೀರ್ಣೋದ್ಧಾರ ನಡೆಯುತ್ತಿರುವ ಹಿರಿಯಡಕದ ವೀರಭದ್ರ ದೇವಸ್ಥಾನ.
ಜೀರ್ಣೋದ್ಧಾರ ನಡೆಯುತ್ತಿರುವ ಹಿರಿಯಡಕದ ವೀರಭದ್ರ ದೇವಸ್ಥಾನ.   

ಉಡುಪಿ: ತಾಲ್ಲೂಕಿನ ಹಿರಿಯಡಕದ ವೀರಭದ್ರ ದೇವಸ್ಥಾನದ ಗೋಡೆ ಕುಸಿದು ಬಿದ್ದ ಪರಿಣಾಮ ಯುವಕರಿಬ್ಬರು ಮೃತಪಟ್ಟು, ಎಂಟು ಮಂದಿ ಗಾಯಗೊಂಡಿರುವ ದಾರುಣ ಘಟನೆ ಶನಿವಾರ ನಡೆದಿದೆ.

ಹಿರಿಯಡಕದ ಪ್ರಸಾದ್‌ (24) ಮತ್ತು ಲೋಕೇಶ್‌ (25) ಮೃತರು. ಗಾಯಗೊಂಡವರಲ್ಲಿ ಶಿವಪ್ರಸಾದ್‌ ಎಂಬುವವರು ಸ್ಥಿತಿ ಗಂಭೀರವಾಗಿದ್ದು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಏಳು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.

ದೇವಸ್ಥಾನದ ಜೀರ್ಣೋದ್ಧಾರ ಕೆಲಸಗಳಿಗೆ ಬೆಳಿಗ್ಗೆ ಚಾಲನೆ ನೀಡಲಾಗಿತ್ತು. ಹಿರಿಯರ ಮಾರ್ಗದರ್ಶನದಂತೆ ಮೊದಲ ದಿನ ದೇವಸ್ಥಾನವನ್ನು ಮೇಲ್ಭಾಗದಿಂದ ಕ್ರಮಬದ್ಧವಾಗಿ ಕಳಚಲಾಗುತ್ತಿತ್ತು. ಹಿರಿಯಡಕ ಮತ್ತು ಸುತ್ತಮುತ್ತಲಿನ ಗ್ರಾಮಗಳ 100ಕ್ಕೂ ಹೆಚ್ಚು ಜನರು ಸ್ವಯಂ ಸೇವಕರಾಗಿ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಅಟ್ಟಣಿಗೆ ಇರುವ ಹೊರ ಸುತ್ತುಪೌಳಿಯ ಭಾಗದಲ್ಲಿ ಕೆಲವರು ಸುಮಾರು 30 ಅಡಿ ಮೇಲೆ ನಿಂತು ಮತ್ತು ಇನ್ನೂ ಕೆಲವರು ಕೆಳಗೆ ನಿಂತು ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಗೋಡೆ ಕುಸಿದು ಬಿದ್ದ ಪರಿಣಾಮ ಹತ್ತು ಮಂದಿ ಗಾಯಗೊಂಡರು.

ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದ ಲೋಕೇಶ್‌, ಪ್ರಸಾದ್‌ ಮತ್ತು ಶಿವಪ್ರಸಾದ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಕೆಲ ಹೊತ್ತಿನ ನಂತರ ಚಿಕಿತ್ಸೆಗೆ ಸ್ಪಂದಿಸದೆ ಇಬ್ಬರು ಮೃತಪಟ್ಟರು.

ಪ್ರಸಾದ್‌ ಹೂವಿನ ಅಂಗಡಿ ಇಟ್ಟುಕೊಂಡಿದ್ದರು. ಲೋಕೇಶ್‌ ಅವರು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.