ADVERTISEMENT

ದೇವಿ ಭಯಕ್ಕೆ `ನವಗ್ರಾಮ' ಪಾಳು!

ಎಂ.ಜೆ.ಶ್ರೀನಿವಾಸ
Published 17 ಜುಲೈ 2013, 19:45 IST
Last Updated 17 ಜುಲೈ 2013, 19:45 IST

ಗಂಗಾವತಿ: ದೇವಿ ಇರುವ ಜಾಗದಲ್ಲಿ ತಾವು ವಾಸ ಮಾಡಿದರೆ ಆಕೆ ಕಾಟ ಕೊಡುತ್ತಾಳೆ ಎಂಬ ಮೂಢನಂಬಿಕೆಯಿಂದಾಗಿ  ಸಕಲ ಸೌಲಭ್ಯ ಹೊಂದಿರುವ `ಪುನರ್ವಸತಿ ಗ್ರಾಮ' ವೊಂದರ 78ಕ್ಕೂ ಹೆಚ್ಚು ಮನೆಗಳು ಪಾಳು ಬಿದ್ದಿದ್ದು ವಿಷ ಜಂತುಗಳ, ಪುಂಡರ ವಾಸ ಸ್ಥಾನವಾಗಿವೆ.

ತುಂಗಭದ್ರಾ ನದಿ ಪಾತ್ರದ ತಾಲ್ಲೂಕಿನ ನಂದಿಹಳ್ಳಿ ಗ್ರಾಮದಲ್ಲಿ 2008ರಲ್ಲಿ ಉಂಟಾದ ನೆರೆಯಿಂದ ಸಂತ್ರಸ್ತರಾದ ಕುಟುಂಬಗಳ ನೆರವಿಗೆ ಬಂದ ಬಳ್ಳಾರಿಯ ಜಿಂದಾಲ್ ಸ್ಟೀಲ್ಸ್ ವರ್ಕ್ಸ್ (ಜೆಎಸ್‌ಡಬ್ಲೂ) ಸಂಸ್ಥೆಯು ಪ್ರತಿ ಮನೆಗೆ ್ಙ 1.10 ಲಕ್ಷ ಖರ್ಚು ಮಾಡಿ  ಒಟ್ಟು 78 ಮನೆ ನಿರ್ಮಿಸಿದೆ.

2008 ರ ಸೆಪ್ಟೆಂಬರ್ ತಿಂಗಳಲ್ಲಿ ಮನೆ ನಿರ್ಮಾಣ ಕಾರ್ಯ ಕೈಗೊಂಡ ಜೆಎಸ್‌ಡಬ್ಲ್ಯೂ, 2009ರ ಮೇ ಒಳಗೆ ಯೋಜನೆ  ಪೂರ್ಣಗೊಳಿಸಿ, ಸ್ಥಳದಲ್ಲಿಯೇ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೂಲಕ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಿತ್ತು.

ಅಲ್ಲಿಂದ ಇಲ್ಲಿವರೆಗೆ ಅಂದರೆ ಸುಮಾರು 5 ವರ್ಷಗಳಲ್ಲಿ ನಾಲ್ಕಾರು ಮನೆಗಳಲ್ಲಿ ಬಾಡಿಗೆದಾರರು ವಾಸಿಸುತ್ತಿರುವುದು ಹೊರತುಪಡಿಸಿದರೆ ನಿಜವಾದ ಫಲಾನುಭವಿಗಳು ಯಾರೂ ಹಳೆಯ ಗ್ರಾಮವನ್ನು ತೊರೆಯುತ್ತಿಲ್ಲ.

ನವಗ್ರಾಮದಲ್ಲಿ ವಿಶಾಲವಾದ ಡಾಂಬರ್ ರಸ್ತೆ, ಪ್ರತಿ ಮನೆಗೆ ಶೌಚಾಲಯ, ಸಮುದಾಯ ಭವನ, ಸುಸಜ್ಜಿತ ಶಾಲೆ, ಆಸ್ಪತ್ರೆ, ಕುಡಿಯುವ ನೀರು, ಅಂಗನವಾಡಿ ಕಟ್ಟಡ, ವಿದ್ಯುತ್, ಚರಂಡಿ ಸೇರಿದಂತೆ ಇತರ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಸಂತ್ರಸ್ತರ ನೆರವಿಗೆ ಬಂದ `ಜೆಎಸ್‌ಡಬ್ಲೂ'ನವರ ಕಾಳಜಿಯು ಜನರ ಮೂಢನಂಬಿಕೆಯಲ್ಲಿ ಕೊಚ್ಚಿಕೊಂಡು ಹೋಗಿದೆ.

ಬೆಟ್ಟದ ಮೇಲೊಂದು ಮನೆಯ ಮಾಡಿ: ಈ ಬಗ್ಗೆ ಸ್ಥಳೀಯರನ್ನು ವಿಚಾರಿಸಿದರೆ ತರಹೇವಾರಿ ಕತೆಗಳನ್ನು ಹೇಳುತ್ತಾರೆ. `ಮನೆಗಳನ್ನು ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಅಲ್ಲಿ ದೇವಿ ವಾಸ ಮಾಡುತ್ತಾಳೆ. ಆಕೆಯ ಜಾಗದಲ್ಲಿ ನಾವು ವಾಸ ಮಾಡಿದರೆ ಸಾವು ನೋವು ಸಂಭವಿಸುತ್ತವೆ' ಎಂದು ರೇಣುಕಮ್ಮ, ಸಣ್ಣ ಫಕೀರಪ್ಪ ಹೇಳುತ್ತಾರೆ.

`ಎತ್ತರದ ಪ್ರದೇಶಕ್ಕೆ ನಿತ್ಯ ಓಡಾಡಲು ಜನರಿಗೆ ಸಮಸ್ಯೆಯಾಗುತ್ತದೆ. ಅಲ್ಲದೆ ಹಳೆಯ ಗ್ರಾಮದೊಂದಿಗೆ ಬೆಸೆದುಕೊಂಡು ಬಂದಿರುವ ನಂಟಿನಿಂದಾಗಿ ಕೆಲವರು ಊರು ತೊರೆಯಲು ಇಷ್ಟ ಪಡುತ್ತಿಲ್ಲ' ಎಂದು ಸ್ಥಳೀಯ ರಾಮನಗೌಡ ತಿಳಿಸುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.