ADVERTISEMENT

ದೌರ್ಜನ್ಯ ತಡೆಗೆ ರಾಷ್ಟ್ರೀಯ ನೀತಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 19:53 IST
Last Updated 23 ಮಾರ್ಚ್ 2018, 19:53 IST
ವಿ.ಎಸ್.ಉಗ್ರಪ್ಪ ಅಧ್ಯಕ್ಷತೆಯ ತಜ್ಞರ ಸಮಿತಿ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿದರು
ವಿ.ಎಸ್.ಉಗ್ರಪ್ಪ ಅಧ್ಯಕ್ಷತೆಯ ತಜ್ಞರ ಸಮಿತಿ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿದರು   

ಬೆಂಗಳೂರು: ‘ಮಹಿಳೆಯರು ಮತ್ತು ಮಕ್ಕಳ ಮೇಲಿನ ‌ಅತ್ಯಾಚಾರ ಮತ್ತು ಶೋಷಣೆ ತಡೆಯಲು ರಾಷ್ಟ್ರೀಯ ನೀತಿ ರೂಪಿಸುವ ಅಗತ್ಯವಿದೆ’ ಎಂದು ವಿಧಾನ ಪರಿಷತ್ತಿನ ಸದಸ್ಯ ವಿ.ಎಸ್. ಉಗ್ರಪ್ಪ ಅಧ್ಯಕ್ಷತೆಯ ತಜ್ಞರ ಸಮಿತಿ ಶಿಫಾರಸು ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಕ್ರವಾರ ಈ ಸಂಬಂಧ 6,017 ಪುಟಗಳ ಸುದೀರ್ಘ ವರದಿ ಸಲ್ಲಿಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಉಗ್ರಪ್ಪ, ಒಟ್ಟು ಜನಸಂಖ್ಯೆಯಲ್ಲಿ ಶೇ 50ರಷ್ಟು ಮಹಿಳೆಯರು, ಶೇ 38ರಷ್ಟು ಮಕ್ಕಳಿದ್ದಾರೆ. ಅವರ ರಕ್ಷಣೆಗೆ ಪೊಲೀಸ್, ವೈದ್ಯಕೀಯ, ಪ್ರಾಸಿಕ್ಯೂಷನ್, ನ್ಯಾಯಾಲಯ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಿದೆ. ಇದಕ್ಕಾಗಿ ಸಮಗ್ರ ನೀತಿ ಜಾರಿಗೆ ತರುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ವರದಿಯಲ್ಲಿ ಸಲಹೆ ಮಾಡಲಾಗಿದೆ ಎಂದರು.

ಪ್ರೇಮ ವಿವಾಹಕ್ಕೆ ಅಡ್ಡಿಪಡಿಸುವ ಪೋಷಕರು ಶಿಕ್ಷೆಗೆ ಅರ್ಹರೆಂದು ಪರಿಗಣಿಸಲು ಮತ್ತು ಮರ್ಯಾದೆ ಹತ್ಯೆ ತಡೆಯಲು ಕಾನೂನು ರೂಪಿಸುವ ಸಂಬಂಧವೂ ಕೇಂದ್ರದ ಮೇಲೆ ಒತ್ತಡ ಹೇರುವಂತೆ ವರದಿಯಲ್ಲಿ ಹೇಳಲಾಗಿದೆ.

ADVERTISEMENT

ದೌರ್ಜನ್ಯ ಪ್ರಕರಣಗಳ ತ್ವರಿತ ತನಿಖೆಗಾಗಿ ತಾಲ್ಲೂಕಿಗೊಂದು ವಿಶೇಷ ಪೊಲೀಸ್ ಠಾಣೆಯನ್ನು ಒಂದು ವರ್ಷದಲ್ಲಿ ಆರಂಭಿಸಬೇಕು. ಅಂತಹ ಠಾಣೆಗಳಲ್ಲಿ ಮಹಿಳಾ ಸಿಬ್ಬಂದಿಯನ್ನೇ ನೇಮಿಸಬೇಕು. ಕಾನೂನು ಪದವೀಧರರನ್ನೇ ತನಿಖಾಧಿಕಾರಿಗಳಾಗಿ ನೇಮಿಸಬೇಕು. ತನಿಖೆ, ವಿಚಾರಣೆ ಗರಿಷ್ಠ ಒಂದು ವರ್ಷದೊಳಗೆ ಮುಗಿಸಲು ಕಾನೂನು ರೂಪಿಸಬೇಕು ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ವರದಿಯಾದ ಅತ್ಯಾಚಾರ ಪ್ರಕರಣಗಳಲ್ಲಿ ಶೇ 95ರಷ್ಟು ಖುಲಾಸೆಯಾಗುತ್ತಿವೆ. ಇದರಿಂದ ಅಪರಾಧಿಗಳಲ್ಲಿ ಭಯ ಇಲ್ಲವಾಗಿದೆ. ಶೇ 50ರಷ್ಟು ಪ್ರಕರಣಗಳಲ್ಲಾದರೂ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಬೇಕೆಂದು ಪ್ರಸ್ತಾಪಿಸಲಾಗಿದೆ.

ಶಿಕ್ಷೆಯಾಗದಿದ್ದರೆ ಸಂಬಂಧಿಸಿದ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ತನಿಖಾಧಿಕಾರಿಯನ್ನೇ ಹೊಣೆಗಾರರನ್ನಾಗಿ ಮಾಡಬೇಕು. ಸರ್ಕಾರಿ ಅಭಿಯೋಜಕರಿಗೆ ಲಿಂಗ ಸಂವೇದನಾ ತರಬೇತಿಯನ್ನು ಕಡ್ಡಾಯವಾಗಿ ನೀಡಬೇಕು.  ವಿಧಿವಿಜ್ಞಾನ ಪ್ರಯೋಗಾಲಯದ(ಎಫ್‌ಎಸ್‌ಎಲ್)  ವರದಿ ವಿಳಂಬ ತಪ್ಪಿಸಲು ಪ್ರತಿ ಜಿಲ್ಲೆಯಲ್ಲೂ ಎಫ್‌ಎಸ್‌ಎಲ್ ಕೇಂದ್ರಗಳನ್ನು ತೆರೆಯಬೇಕೆಂದು ಸಲಹೆ ಮಾಡಲಾಗಿದೆ.

ಸಾಕ್ಷಿಗಳ ರಕ್ಷಣೆಗೆ ಕಾಯ್ದೆ:

ನ್ಯಾಯಾಲಯದ ವಿಚಾರಣೆ ವೇಳೆ ಹಿಂದೆ ಸರಿಯುವ ಸಂಸ್ತ್ರಸ್ತೆಯರು ಹಾಗೂ ಇನ್ನಿತರ ಸಾಕ್ಷಿಗಳ ಮೇಲೆ ಪ್ರಕರಣ ದಾಖಲಿಸುವಂತಹ ವ್ಯವಸ್ಥೆಯಾಗಬೇಕು. ಇದರ ಜೊತೆಗೆ ಸಾಕ್ಷಿದಾರರ ರಕ್ಷಣೆಗಾಗಿ ಕಾಯ್ದೆಯೊಂದನ್ನು ರೂಪಿಸಬೇಕು ಎಂದೂ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಸುಳ್ಳು ಪ್ರಕರಣ ದಾಖಲು ಮಾಡಿ ಪರಿಹಾರ ಪಡೆದರೆ ಅಂತಹ ಪರಿಹಾರವನ್ನು ಬಡ್ಡಿ ಸಹಿತ ಹಿಂಪಡೆಯಲು ಕಾನೂನಿನಲ್ಲಿ ಅವಕಾಶ ಕಲ್ಪಿಸಬೇಕು. ಭ್ರೂಣ ಲಿಂಗ ಪತ್ತೆ ನಿಷೇಧ ಕಾನೂನು ಸಮರ್ಪಕ ಜಾರಿಗೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಜಾಗೃತ ಸಮಿತಿಗಳನ್ನು ರಚಿಸಬೇಕು ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ಮನೆಗೆಲಸದವರ ನೋಂದಣಿ ಕಡ್ಡಾಯ:

ಮನೆಗೆಲಸದ ಮಹಿಳೆಯರು ಘನತೆಯಿಂದ ಬದುಕಲು ಅನುಕೂಲ ಆಗುವಂತೆ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಕಡ್ಡಾಯಗೊಳಿಸಬೇಕು. ವರದಕ್ಷಿಣೆಗಾಗಿ ಒಂದಕ್ಕಿಂತ ಹೆಚ್ಚು ಮದುವೆ ಆಗುವುದನ್ನು ತಡೆಯಲು ವಿವಾಹ ನೋಂದಣಿ ಕಡ್ಡಾಯಗೊಳಿಸಬೇಕು ಎಂದೂ ಶಿಫಾರಸು ಮಾಡಲಾಗಿದೆ.

***

ಸಮಿತಿಯ ಶಿಫಾರಸುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದ್ದು, ಇದರಲ್ಲಿ ಕೆಲವನ್ನು ಕೇಂದ್ರಕ್ಕೂ ಶಿಫಾರಸು ಮಾಡಲಾಗುವುದು
–ಮುಖ್ಯಮಂತ್ರಿ ಸಿದ್ದರಾಮಯ್ಯ

***

ಮತದಾನ, ಆಸ್ತಿ ಹಕ್ಕು ವಾಪಸ್

ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗುವವರ ಮತದಾನದ ಹಕ್ಕನ್ನು ಶಾಶ್ವತವಾಗಿ ಹಿಂಪಡೆಯಲು ಕಾನೂನು ರೂಪಿಸಬೇಕೆಂದೂ ಶಿಫಾರಸು ಮಾಡಲಾಗಿದೆ.

ವಿಚಾರಣೆಯ ಅವಧಿಯಲ್ಲಿ ಆರೋಪಿ ಮತದಾನದ ಹಕ್ಕು ಮತ್ತು ಆಸ್ತಿ ಹಕ್ಕನ್ನು ಅಮಾನತಿನಲ್ಲಿ ಇಡಬೇಕು. ಇದಕ್ಕಾಗಿ ಜನತಾ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಆರೋಪ ಸಾಬೀತಾದರೆ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಸಂತ್ರಸ್ತೆಗೆ ಪರಿಹಾರ ಕೊಡುವಂತಾಗಬೇಕು ಎಂದು ವರದಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.