ADVERTISEMENT

ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ:157 ಜೋಡಿ ಗೃಹಸ್ಥಾಶ್ರಮಕ್ಕೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST

ಬೆಳ್ತಂಗಡಿ: ಯಾತ್ರಾಸ್ಥಳ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಗುರುವಾರ ಸಂಜೆ ಗಂಟೆ 6.40ರ ಗೋಧೂಳಿ ಲಗ್ನದಲ್ಲಿ ವೇದ, ಮಂತ್ರಘೋಷದ ನಡುವೆ 41ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಿತು. 157 ಜೋಡಿ ವಧೂ-ವರರು ಗೃಹಸ್ಥಾಶ್ರಮಕ್ಕೆ ಪದಾರ್ಪಣೆ ಮಾಡಿದರು.

ಗುರುವಾರ ಬೆಳಿಗ್ಗೆ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ವಧುವಿಗೆ ಸೀರೆ, ರವಿಕೆ ಕಣ ಹಾಗೂ ವರನಿಗೆ ಧೋತಿ-ಶಾಲು ನೀಡಿದರು.ಸಂಜೆ ಗಂಟೆ 6ಕ್ಕೆ ವಧೂ-ವರರು ಶ್ರೀಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ, ಗಣ್ಯ ಅತಿಥಿಗಳೂ ಸೇರಿ ಅಮೃತವರ್ಷಿಣಿ ಸಭಾ ಭವನದಲ್ಲಿ ನಿರ್ಮಿಸಲಾದ ಮದುವೆ ಮಂಟಪ ಪ್ರವೇಶಿಸಿದರು.

ತ್ರಿಪುರ ರಾಜ್ಯಪಾಲ ಡಾ.ಡಿ.ವೈ. ಪಾಟೀಲ್, ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಬಿರ್ಲಾ ಸಿಮೆಂಟ್ ಕಂಪನಿ ಅಧ್ಯಕ್ಷ ವಿನೋದ್ ಹಮೀರ್‌ವಾಸಿಯಾ, ಸಾತ್ನಾದ ವಿದ್ವಾಂಸ ನೀರಜ್ ಜೈನ್, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನೂತನ ದಂಪತಿಗಳಿಗೆ ಶುಭ ಹಾರೈಸಿದರು.

ವೃತ್ತಿವಾರು ವಧೂ-ವರರು: ಆರು ಮಂದಿ ಪತ್ರಕರ್ತರು, 63 ಮಂದಿ ಕೂಲಿ, 16 ಕೃಷಿ, 7 ವ್ಯಾಪಾರಸ್ಥರು, 21 ಚಾಲಕರು, 6 ಕಾರ್ಮಿಕರು ಹಾಗೂ ಇತರ ವೃತ್ತಿಯವರು ಸೇರಿ ಒಟ್ಟು 157 ಜೊತೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.