ADVERTISEMENT

ಧರ್ಮ ರಕ್ಷಣೆಗಾಗಿ ಜೈಲು ಸೇರಲೂ ಸಿದ್ಧ

​ಪ್ರಜಾವಾಣಿ ವಾರ್ತೆ
Published 20 ಜೂನ್ 2012, 19:30 IST
Last Updated 20 ಜೂನ್ 2012, 19:30 IST

ಶಿವಮೊಗ್ಗ: ಪಠ್ಯಪುಸ್ತಕಗಳಲ್ಲಿ ಕೇಸರೀಕರಣ ವಿಷಯಕ್ಕೆ ಸಂಬಂಧಿಸಿದಂತೆ ಈಚೆಗೆ ನೀಡಿದ ಹೇಳಿಕೆಗೆ ತಾವು ಬದ್ಧ. ಧರ್ಮ, ಸಂಸ್ಕೃತಿ ಸಂರಕ್ಷಣೆ ವಿಷಯದಲ್ಲಿ ತಾವು ಜೈಲಿಗೆ ಹೋಗಲೂ ಸಿದ್ಧ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಘೋಷಿಸಿದರು. 

ರಾಷ್ಟ್ರಭಕ್ತಿ ಪದಕ್ಕೆ, ಕೇಸರೀಕರಣ ಪದ ಹೆಚ್ಚಿನ ಒತ್ತು ನೀಡುತ್ತದೆ. ವಿದ್ಯಾರ್ಥಿಗಳ ಪಠ್ಯಪುಸ್ತಕಗಳಲ್ಲಿ ರಾಷ್ಟ್ರಭಕ್ತಿಯ ವಿಷಯದ ಕುರಿತಾಗಿ ಹೆಚ್ಚು ಹೇಳಬೇಕು ಎಂಬುವುದನ್ನು ಈಗಲೂ ಕೂಡ ತಾವು ಸಮರ್ಥಿಸುವುದಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

ಕೇಸರೀಕರಣ ಎಂದರೆ ಬೇರೆ ಧರ್ಮವನ್ನು ವಿರೋಧಿಸುವುದಲ್ಲ; ಹಾಗೆಯೇ, ಯಾವುದೇ ಧರ್ಮಕ್ಕೂ ಸೀಮಿತವಾದ ಪದವೂ ಅಲ್ಲ. ನಮ್ಮ ಧರ್ಮ, ಸಂಸ್ಕೃತಿ ತಿಳಿದು ಸಂರಕ್ಷಣೆ ಮಾಡುವುದಾಗಿದೆ. ಭಗವದ್ಗೀತೆಯ ಜತೆಗೆ ಕುರಾನ್, ಬೈಬಲ್ ಹೇಳುವುದು ತಪ್ಪಲ್ಲ. ಜಾತ್ಯತೀತ ಎನ್ನುವ ವ್ಯಕ್ತಿಗಳಿಗೆ ಧರ್ಮ, ಕೇಸರೀಕರಣ ಎಂದರೇ ಸಿಟ್ಟು ಏಕೆ ಬರುತ್ತದೆಯೋ ಗೊತ್ತಿಲ್ಲ ದು ಕುಟುಕಿದರು.

ಕಾಂಗ್ರೆಸ್-ಜೆಡಿಎಸ್ ಮುಖಂಡರೇ ಜಾತಿಯ ವಿಷಯ ಕುರಿತು ಕಿತ್ತಾಡುತ್ತಿದ್ದಾರೆ. ತಮ್ಮ ವಿರುದ್ಧ ಚುನಾವಣಾ ಆಯೋಗಕ್ಕೆ ಯಾರು ಎಷ್ಟು ಬೇಕಾದರೂ ದೂರು ನೀಡಲಿ. ಅದಕ್ಕೆ ತಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬಿಜೆಪಿಯಲ್ಲಿ ಪ್ರಸ್ತುತ ವಿದ್ಯಮಾನಗಳನ್ನು ಹೈಕಮಾಂಡ್ ಗಮನಕ್ಕೆ ತರಲಾಗಿದೆ. ರಾಷ್ಟ್ರೀಯ ಮುಖಂಡರು ಈ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳುವರು ಎಂದು ಈಶ್ವರಪ್ಪ, ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ವಿರುದ್ಧ ಸಚಿವ ರೇಣುಕಾಚಾರ್ಯ, ಶಾಸಕ ಬಿ.ಪಿ. ಹರೀಶ್ ಅವರು ಹೇಳಿಕೆ ನೀಡಿದ್ದು ತಪ್ಪು. ಅಲ್ಲದೆ ಸಚಿವ ಬಾಲಚಂದ್ರ ಜಾರಕಿಹೋಳಿ ಅವರು ಪ್ರತಿಯಾಗಿ ನೀಡಿದ ಹೇಳಿಕೆಯೂ ಸರಿಯಲ್ಲ. ಈ ವಿಷಯದ ಕುರಿತು ಅವರೊಂದಿಗೆ ಚರ್ಚಿಸುವುದಾಗಿ ಈಶ್ವರಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.