ADVERTISEMENT

ಧಾರವಾಡ ‘ಸಾಹಿತ್ಯ ಸಂಭ್ರಮ’ಕ್ಕೆ ಸಕಲ ಸಿದ್ಧತೆ

ಉಪನ್ಯಾಸಕರಿಗೆ ಒಒಡಿ ಸೌಕರ್ಯ; ಹೆಚ್ಚುವರಿ 300 ಕುರ್ಚಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2014, 19:30 IST
Last Updated 13 ಜನವರಿ 2014, 19:30 IST
ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್‌ ಅಧ್ಯಕ್ಷ ಡಾ.ಗಿರಡ್ಡಿ ಗೋವಿಂದರಾಜ ಸೋಮವಾರ ಎರಡನೇ ಆವೃತ್ತಿಯ ‘ ಸಾಹಿತ್ಯ ಸಂಭ್ರಮ’ದ ವಿವರ ನೀಡಿದರು. ಟ್ರಸ್ಟ್‌ನ ಗೌರವಾಧ್ಯಕ್ಷರಾದ ಡಾ.ಎಂ.ಎಂ.ಕಲಬುರ್ಗಿ, ಡಾ.ಚೆನ್ನವೀರ ಕಣವಿ ಇದ್ದಾರೆ 	–ಪ್ರಜಾವಾಣಿ ಚಿತ್ರ
ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್‌ ಅಧ್ಯಕ್ಷ ಡಾ.ಗಿರಡ್ಡಿ ಗೋವಿಂದರಾಜ ಸೋಮವಾರ ಎರಡನೇ ಆವೃತ್ತಿಯ ‘ ಸಾಹಿತ್ಯ ಸಂಭ್ರಮ’ದ ವಿವರ ನೀಡಿದರು. ಟ್ರಸ್ಟ್‌ನ ಗೌರವಾಧ್ಯಕ್ಷರಾದ ಡಾ.ಎಂ.ಎಂ.ಕಲಬುರ್ಗಿ, ಡಾ.ಚೆನ್ನವೀರ ಕಣವಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಧಾರವಾಡ: ಎರಡನೇ ಆವೃತ್ತಿಯ ಧಾರವಾಡ ಸಾಹಿತ್ಯ ಸಂಭ್ರಮ ಇದೇ 17 ರಿಂದ ಆರಂಭವಾಗಲಿದ್ದು ಈ ಬಾರಿಯೂ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಣೆಗೆ ಸಂಘಟಕರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ‘ಸಂಭ್ರಮದಲ್ಲಿ ಭಾಗವಹಿಸಲಿರುವ ಕಾಲೇಜು ಉಪನ್ಯಾಸಕರಿಗೆ ಈ ಬಾರಿ ಒಒಡಿ (ಅನ್ಯ ಕಾರ್ಯ ನಿಮಿತ್ತ ರಜೆ) ನೀಡಲು ನಿರ್ಧರಿಸಲಾಗಿದೆ.

ಈ ಸಂಬಂಧ ಈಗಾಗಲೇ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರೊಂದಿಗೆ ಮಾತುಕತೆ ನಡೆಸಲಾಗಿದೆ. ನಾವೆಷ್ಟೇ ನಿಯಂತ್ರಿಸಿದರೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕತೆ ತೋರಿಸಿದ್ದಾರೆ. ಆದ್ದರಿಂದ ಕರ್ನಾಟಕ ವಿ.ವಿ.ಯ ಸುವರ್ಣ ಮಹೋತ್ಸವ ಸಭಾಂಗಣದ ಹೊರಭಾಗದಲ್ಲಿ ಬೃಹತ್‌ ಪರದೆ ಅಳವಡಿಸಲಿದ್ದೇವೆ. 300 ಕುರ್ಚಿಗಳನ್ನೂ ಹಾಕಿಸಿ ಕಾರ್ಯಕ್ರಮ ವೀಕ್ಷಿಸಲು ಅನುಕೂಲ ಮಾಡಿಕೊಡಲಿದ್ದೇವೆ’ ಎಂದು ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್‌ ಅಧ್ಯಕ್ಷ ಡಾ.ಗಿರಡ್ಡಿ ಗೋವಿಂದರಾಜ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಳೆದ ಬಾರಿಯ ಗೋಷ್ಠಿಗಳಿಗಿಂತ ಭಿನ್ನವಾಗಿ ಈ ಬಾರಿ ಒಟ್ಟು 21 ಗೋಷ್ಠಿಗಳು ನಡೆಯಲಿವೆ. ಯುವ ಬರಹಗಾರರ ಮುಂದಿರುವ ಸವಾಲುಗಳು, ಬೇಂದ್ರೆ, ಕುವೆಂಪು ಕವಿತೆಗಳ ಓದು, ಸೈನಿಕ ಸಾಹಿತ್ಯ, ಕಿಟೆಲ್‌ ಕುರಿತ ಕೆಲವು ಹೊಸ ಸಂಗತಿಗಳ ಬಗ್ಗೆ ತಜ್ಞರು ಮಾತನಾಡಲಿದ್ದಾರೆ. ಸಮಕಾಲೀನ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಯಲಿ ಎಂಬ ಉದ್ದೇಶದಿಂದ ಅಭಿವ್ಯಕ್ತಿ ಸ್ವಾತಂತ್ರ್ಯ, ವಿದ್ಯುನ್ಮಾನ ಮಾಧ್ಯಮ ಮತ್ತು ಸಾಹಿತ್ಯ ಕುರಿತೂ ಗೋಷ್ಠಿಗಳು ನಡೆಯಲಿವೆ.
ಎಲ್ಲಿಯೂ ಪ್ರಕಟಗೊಳ್ಳದ ಸಾಹಿತ್ಯಿಕ ಪ್ರಸಂಗಗಳನ್ನು ಸಾಹಿತಿಗಳು ಹಂಚಿಕೊಳ್ಳಲಿದ್ದಾರೆ’ ಎಂದರು.

‘ಈ ಬಾರಿ ಭಾಗವಹಿಸಲಿರುವ ಪ್ರತಿನಿಧಿಗಳಿಗೆ ಬಂಪರ್‌ ಕೊಡುಗೆಗಳನ್ನು ನೀಡಲು ನಿರ್ಧರಿಸಲಾಗಿದ್ದು, ಸುಮಾರು ₨ 800 ಮೊತ್ತದ ವಿವಿಧ ಲೇಖಕರ ಪುಸ್ತಕಗಳು, ಕವಿಗಳ ಭಾವಗೀತೆಯುಳ್ಳ ಕ್ಯಾಸೆಟ್, ಒಂದು ಕ್ಯಾಲೆಂಡರ್‌, ಬ್ಯಾಗ್‌ ಹಾಗೂ ಕೀ ಚೈನ್‌ಗಳನ್ನು ನೀಡಲಾಗುತ್ತಿದೆ’ ಎಂದರು. ‘ಕಾರ್ಯಕ್ರಮ ನಡೆಯುವ ಸಭಾಂಗಣದ ಹೊರಭಾಗದಲ್ಲಿ 15 ವಿವಿಧ ಪ್ರಕಾಶನ ಸಂಸ್ಥೆಗಳು ಪುಸ್ತಕ ಮಳಿಗೆಗಳನ್ನು ತೆರೆಯಲಿವೆ. ರಾಜೇಂದ್ರ ರೇಡಿಯೊ ಹೌಸ್‌ನವರು ಮಳಿಗೆಯೊಂದನ್ನು ಹಾಕಲಿದ್ದು, ಸಾಹಿತ್ಯ ಕೃತಿ ಆಧಾರಿತ ಸಿನಿಮಾ ಸಿ.ಡಿಗಳು, ಶಾಸ್ತ್ರೀಯ, ಸುಗಮ ಸಂಗೀತದ ಸಿ.ಡಿಗಳನ್ನು ಮಾರಾಟ ಮಾಡಲಿದ್ದಾರೆ’ ಎಂದು ತಿಳಿಸಿದರು.

ಸಂಭ್ರಮದ ಗೌರವಾಧ್ಯಕ್ಷರಲ್ಲಿ ಒಬ್ಬರಾದ ಡಾ.ಎಂ.ಎಂ.ಕಲಬುರ್ಗಿ ಮಾತನಾಡಿ, ‘ಕಳೆದ ಬಾರಿ ನಿರೀಕ್ಷೆಗಿಂತ ಹೆಚ್ಚು ಜನ ಬಂದಿದ್ದರಿಂದ ಊಟದ ವಿತರಣೆಯಲ್ಲಿ ಕೊಂಚ ಅವ್ಯವಸ್ಥೆಯಾಯಿತು. ಆದ್ದರಿಂದ ಅದನ್ನು ತಪ್ಪಿಸಲು ಈ ಬಾರಿ ಕೂಪನ್‌ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಪ್ರತಿನಿಧಿಗಳೆಲ್ಲರೂ ತಮಗೆ ನೀಡಲಾದ ಊಟದ ಕೂಪನ್‌ಗಳನ್ನು ಕಡ್ಡಾಯವಾಗಿ ತೋರಿಸಬೇಕು’ ಎಂದು ಹೇಳಿದರು. ಟ್ರಸ್ಟ್‌ನ ಇನ್ನೊಬ್ಬ ಗೌರವಾಧ್ಯಕ್ಷ ಡಾ.ಚೆನ್ನವೀರ ಕಣವಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT