ADVERTISEMENT

ಧ್ವಜಾರೋಹಣ ಖರ್ಚು ರೂ. 6 ಕೋಟಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 4:40 IST
Last Updated 23 ಸೆಪ್ಟೆಂಬರ್ 2013, 4:40 IST

ಬೆಂಗಳೂರು:  ರಾಜ್ಯದ ಎಲ್ಲ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಕಚೇರಿಗಳಲ್ಲಿ ಸರ್ಕಾರದ ಆದೇಶದಂತೆ ಆ. 15ರಿಂದ ನಿತ್ಯ ರಾಷ್ಟ್ರಧ್ವಜ ಹಾರಿಸಲಾಗುತ್ತದೆ. ಆದರೆ ಇದಕ್ಕೆ ಪ್ರತಿ ದಿನ ತಗಲುವ ಖರ್ಚು ಬರೋಬ್ಬರಿ ರೂ.1.75 ಲಕ್ಷ!

ರಾಜ್ಯದಲ್ಲಿ ಒಟ್ಟು 5628 ಗ್ರಾಮ, 176 ತಾಲ್ಲೂಕು ಹಾಗೂ 30 ಜಿಲ್ಲಾ ಪಂಚಾಯತ್‌ಗಳಿವೆ. ಇಲ್ಲಿ ಧ್ವಜಾ ರೋಹಣ ಕಾರ್ಯಕ್ಕಾಗಿಯೇ  ವಾರ್ಷಿಕ ರೂ. 6.39 ಕೋಟಿ  ವೆಚ್ಚವಾ ಗಲಿದೆಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಮೂಲಗಳು ತಿಳಿಸಿವೆ.

ಧ್ವಜ ಏರಿಸಲು ಹಾಗೂ ಇಳಿಸಲು ತಲಾ 15 ರೂಪಾಯಿ ಪ್ರಕಾರ ಸಂಬಂಧಪಟ್ಟ ನೌಕರನಿಗೆ ನಿತ್ಯ 30 ರೂಪಾಯಿ ಪ್ರೋತ್ಸಾಹ ಭತ್ಯೆ ನೀಡುವಂತೆ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಇದನ್ನು ಆಯಾ ಸ್ಥಳೀಯ ಸಂಸ್ಥೆಗಳು ತಮ್ಮ ಸ್ವಂತ ಸಂಪನ್ಮೂಲದಿಂದಲೇ ಭರಿಸಬೇಕಾಗುತ್ತದೆ.

ಧ್ವಜಸ್ತಂಭ ನಿರ್ಮಾಣ: ಸ್ಥಳೀಯ ಸಂಸ್ಥೆಗಳ ಕಚೇರಿ ಆವರಣದಲ್ಲಿ ಧ್ವಜ ಸ್ತಂಭ ಇಲ್ಲದೆ ಇದ್ದರೆ ಕೂಡಲೇ ನಿರ್ಮಾಣ ಮಾಡಬೇಕು ಎಂದು ಸೂಚಿಸಲಾಗಿದೆ. ಇದಕ್ಕೆ ಪ್ರತ್ಯೇಕ ಅನುದಾನ ನೀಡುವುದಿಲ್ಲ. ಸ್ಥಳೀಯ ಸಂಪನ್ಮೂಲ ಅಥವಾ 13ನೇ ಹಣಕಾಸು ಆಯೋಗದ ಅನುದಾನ ಬಳಸಿಕೊಳ್ಳಬಹುದು.

ಪ್ರತಿಯೊಂದು ಸ್ಥಳೀಯ ಸಂಸ್ಥೆಯೂ ಮೂರು ರಾಷ್ಟ್ರಧ್ವಜಗಳನ್ನು ಖಾದಿ ಭಂಡಾರಗಳಲ್ಲಿ ಖರೀದಿಸಬೇಕು ಎಂದು ಸೂಚಿಸಲಾಗಿತ್ತು. ಬಹುತೇಕ ಸಂಸ್ಥೆಗಳು ಆ ಪ್ರಕಾರ ಖರೀದಿ ಮಾಡಿವೆ. ಒಂದು ಧ್ವಜಕ್ಕೆ ರೂ.400 –450 ವೆಚ್ಚವಾಗಿದೆ ಎಂದು ಪಂಚಾಯತ್‌ ಅಭಿವೃದ್ಧಿ ಅಧಿಕಾರಿಯೊಬ್ಬರು ತಿಳಿಸಿದರು.

ಕಾಟಾಚಾರ: ಗೌರವ ಸೂಚನೆಯ ಪ್ರತೀಕವಾಗಿ ರಾಷ್ಟ್ರಧ್ವಜ ಹಾರಿಸುವಂತೆ ಸರ್ಕಾರ ಸೂಚಿಸಿದೆ. ಇದರ ಆಶಯ ಒಳ್ಳೆಯದು. ಆದರೆ, ಈ ಕಾರ್ಯ ಶಿಸ್ತುಬದ್ಧವಾಗಿ ನಡೆಯುತ್ತಿಲ್ಲ. ಕಾಟಾಚಾರಕ್ಕೆ ಧ್ವಜ ಹಾರಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರ ಈಗ ಅಧಿಕೃತವಾಗಿ ಧ್ವಜಾರೋಹಣ ಭತ್ಯೆ ನಿಗದಿ ಮಾಡಿದೆ. ಆದರೆ, ಇದಕ್ಕೆ ಮುಂಚೆಯೂ ಧ್ವಜ ಹಾರಿಸುವ ವ್ಯಕ್ತಿಗೆ ಅನಧಿಕೃತವಾಗಿ ಯಾವುದಾದರೂ ರೂಪದಲ್ಲಿ ಹಣ ನೀಡಲಾಗುತ್ತಿತ್ತು. ಹಣ ನೀಡದಿದ್ದರೆ ಪುಗಸಟ್ಟೆಯಾಗಿ ಯಾರೂ ಧ್ವಜ ಹಾರಿಸುವುದಿಲ್ಲ ಎಂದು ವಸ್ತುಸ್ಥಿತಿಯನ್ನು ವಿವರಿಸಿದರು.

ಧ್ವಜ ಹಾರಿಸುವ ವಿಧಾನದ ಬಗ್ಗೆ ದೈಹಿಕ ಶಿಕ್ಷಕರಿಂದ ತರಬೇತಿ ಕೊಡಿಸ ಲಾಗಿದೆ. ಸೂರ್ಯೋದಯ ನಂತರ ಧ್ವಜ ಹಾರಿಸಬೇಕು ಹಾಗೂ  ಸೂರ್ಯಾ ಸ್ತಕ್ಕೂ ಮುಂಚೆ ಧ್ವಜ ಇಳಿಸಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿದೆ.

ಆದರೆ, ಕೇಂದ್ರ ಸರ್ಕಾರದ ಧ್ವಜ ಕಾಯ್ದೆ ಪ್ರಕಾರ ಬೆಳಿಗ್ಗೆ 9ಕ್ಕೂ ಮುಂಚೆ ಧ್ವಜ ಹಾರಿಸಬೇಕು ಹಾಗೂ ಸಂಜೆ 5ಕ್ಕೂ ಮುಂಚೆ ಧ್ವಜ ಇಳಿಸಬೇಕು. ಬಹುತೇಕ ಕಡೆ ಈ ರೀತಿ ಸಮಯ ಪಾಲನೆ ಆಗುತ್ತಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT