ADVERTISEMENT

ನಂದಿಕೂರು ಉಷ್ಣ ವಿದ್ಯುತ್ ಸ್ಥಾವರ; ಪೇಜಾವರ ಶ್ರೀ ನಿರಶನ ಆರಂಭ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ನಂದಿಕೂರು (ಉಡುಪಿ): ಉಷ್ಣ ವಿದ್ಯುತ್ ಸ್ಥಾವರದಿಂದಾಗಿ ಸುತ್ತಮುತ್ತಲ ಪರಿಸರದಲ್ಲಿ ಆಗಿರುವ ಅನಾಹುತಗಳ ಬಗ್ಗೆ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿಯಿಂದ ಏಕಾಏಕಿ ಇಬ್ಬರು ತಜ್ಞರನ್ನು ಕೈಬಿಟ್ಟ ಸರ್ಕಾರದ ಕ್ರಮವನ್ನು ಖಂಡಿಸಿ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಪಡುಬಿದ್ರಿಯ ನಂದಿಕೂರಿನ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ 3 ದಿನದ ಉಪವಾಸವನ್ನು ಸೋಮವಾರ ಆರಂಭಿಸಿದರು.

ಇದಕ್ಕೂ ಮುನ್ನ ಬೆಳಿಗ್ಗೆ ಪೇಜಾವರ ಮಠದಲ್ಲಿ ಸ್ವಾಮೀಜಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ವಿ.ಎಸ್. ಆಚಾರ್ಯ ಹಾಗೂ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಭೇಟಿ ಮಾಡಿ ಉಪವಾಸವನ್ನು ಕೈಬಿಡುವಂತೆ ಒತ್ತಾಸಿದರು. ಆದರೆ ಈ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಶ್ರೀಗಳು ಈ ಹಿಂದೆ ಪ್ರಕಟಿಸಿದ್ದಂತೆ ಉಪವಾಸಕ್ಕಾಗಿ ನಂದಿಕೂರಿಗೆ ಆಗಮಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈಗಾಗಲೇ ತಜ್ಞರ ಸಮಿತಿ ಈ ಭಾಗದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಹವಾಲು ಸಭೆ ನಡೆಸಿ ಜನರ ಅಭಿಪ್ರಾಯ ಪಡೆದುಕೊಂಡಿದ್ದು ಇನ್ನೇನು ಸರ್ಕಾರಕ್ಕೆ ವರದಿ ಸಲ್ಲಿಸಲಿತ್ತು. ಅಷ್ಟರಲ್ಲಿ ಏಕಾಏಕಿ ಈ ಇಬ್ಬರು ತಜ್ಞರನ್ನು ಕೈಬಿಡಲಾಗಿದೆ. ಇದರಿಂದಾಗಿ ಆ ವರದಿ ಕೇವಲ ಸರ್ಕಾರಿ ವರದಿಯಾಗಿ ನಿಷ್ಪ್ರಯೋಜಕವಾಗಲಿದೆ, ಹೀಗಾಗಿ ಕೂಡಲೇ ಆ ತಜ್ಞರನ್ನು ಮರಳಿ ಸೇರಿಸಿಕೊಳ್ಳಬೇಕು ಎಂದು  ಆಗ್ರಹಿಸಿದರು.

ಜನರನ್ನು, ಸರ್ಕಾರವನ್ನು ಎಚ್ಚರಿಸುವ ಉದ್ದೇಶದಿಂದ ಉಪವಾಸಕ್ಕೆ ಕುಳಿತಿರುವುದಾಗಿ ಹೇಳಿದ ಸ್ವಾಮೀಜಿ, `ತಜ್ಞರ ಸಮಿತಿ ನೇಮಕ ಮಾಡುವಾಗ ವೈ.ಬಿ.ರಾಮಕೃಷ್ಣ ಹಾಗೂ ರಾಮಚಂದ್ರ ಎಂಬ ಇಬ್ಬರನ್ನು ನಮ್ಮ ಆಗ್ರಹದಂತೆ ಸೇರಿಸಿಕೊಂಡಿದ್ದರು. ಆದರೆ ಆ ತಜ್ಞರು ಸರ್ಕಾರದ ವಿರುದ್ಧವಾಗಿಯೇ ವರದಿ ನೀಡಲಿದ್ದಾರೆ ಎಂದು ಅವರನ್ನು ತೆಗೆದು ಹಾಕಿರುವುದಾಗಿ ಸಚಿವ ಡಾ.ವಿ.ಎಸ್.ಆಚಾರ್ಯ ನಮ್ಮನ್ನು ಸೋಮವಾರ ಬೆಳಿಗ್ಗೆ ಭೇಟಿ ಮಾಡಿದಾಗ ತಿಳಿಸಿದ್ದಾರೆ~ ಎಂದರು.

`ಪ್ರಜಾವಾಣಿ~ಯಲ್ಲಿ ಪ್ರಕಟವಾಗಿದ್ದ ವರದಿಯನ್ನು ಆಧರಿಸಿ ತಜ್ಞರು ನೀಡಿದ ಹೇಳಿಕೆ ಗಮನಿಸಿ ಅವರು ತಮ್ಮ ವ್ಯಾಪ್ತಿಮೀರಿ  ಯುಪಿಸಿಎಲ್ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕೂಡ ಶಿಫಾರಸು ಮಾಡಲಿದ್ದೇವೆ ಎಂದು ಹೇಳಿಕೆ ನೀಡಿರುವುದು ಗಮನಕ್ಕೆ ಬಂದಿದ್ದು ತಜ್ಞರು ಸರ್ಕಾರದ ವಿರುದ್ಧವೇ ವರದಿ ನೀಡುವ ಹಿನ್ನೆಲೆಯಲ್ಲಿ ಅವರನ್ನು ಕೈಬಿಡುವುದು ಅನಿವಾರ್ಯವಾಯಿತು, ಬೇಕಿದ್ದರೆ ಇನ್ನಿಬ್ಬರು ಬೇರೆ ತಜ್ಞರ ಹೆಸರು ತಿಳಿಸಿ ಅವರನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದು ಆಚಾರ್ಯರು ತಮಗೆ ಸೂಚಿಸಿದ್ದಾರೆ. ಆದರೆ ಇವರಿಗೆ ಅವಮಾನ ಮಾಡಿ ಬೇರೆಯವರ ಹೆಸರು ಸೂಚಿಸಲು ಸಾಧ್ಯವಿಲ್ಲ ಎಂದು ತಾವು ಸ್ಪಷ್ಟಪಡಿಸಿದ್ದಾಗಿ ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT