ADVERTISEMENT

ನಕಲಿ ಅಂಕಪಟ್ಟಿ ಬಳಸಿ ಗ್ರಾಮ ಲೆಕ್ಕಾಧಿಕಾರಿ ನೇಮಕ!

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 19:59 IST
Last Updated 10 ಜುಲೈ 2013, 19:59 IST

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 26 ಮಂದಿ ದ್ವಿತೀಯ ಪಿಯುಸಿ ನಕಲಿ ಅಂಕಪಟ್ಟಿಗಳನ್ನು ನೀಡಿ ಗ್ರಾಮ ಲೆಕ್ಕಾಧಿಕಾರಿಗಳಾಗಿ ನೇಮಕಗೊಂಡಿರುವ ಜಾಲ ಬೆಳಕಿಗೆ ಬಂದಿದೆ. ಮತ್ತಷ್ಟು ಮಂದಿ ಇದೇ ರೀತಿ ನೇಮಕಗೊಂಡಿರುವ ಶಂಕೆ ಇದ್ದು, ಮೂಲ ಅಂಕಪಟ್ಟಿಯ ಪರಿಶೀಲನೆ ಕಾರ್ಯ ಮುಂದುವರಿದಿದೆ.

ಎರಡು ವರ್ಷಗಳಿಂದ ಈಚೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ನೇಮಕ ನಡೆದಿದೆ. ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ನೇಮಕಾತಿ ಆದೇಶ ನೀಡಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಆಯ್ಕೆ ಪಟ್ಟಿ ಪ್ರಕಟವಾಗಿದ್ದು, ನೇಮಕಾತಿ ಆದೇಶ ನೀಡುವುದು ಬಾಕಿ ಇದೆ.

ಈಗಾಗಲೇ ನಡೆದಿರುವ ತನಿಖೆಯಲ್ಲಿ ಉಡುಪಿಯ 13, ಚಿಕ್ಕಬಳ್ಳಾಪುರದ 7, ಬೆಳಗಾವಿಯ ನಾಲ್ಕು ಹಾಗೂ ಹಾಸನ, ಚಿಕ್ಕಮಗಳೂರಿನಲ್ಲಿ ತಲಾ ಒಬ್ಬರು ನಕಲಿ ಅಂಕಪಟ್ಟಿ ನೀಡಿ ಗ್ರಾಮ ಲೆಕ್ಕಾಧಿಕಾರಿಗಳಾಗಿ ನೇಮಕಗೊಂಡಿರುವುದು ಖಚಿತವಾಗಿದೆ.

ಆಯಾ ಜಿಲ್ಲಾಧಿಕಾರಿಗಳಿಂದ ಬಂದ ಮನವಿ ಆಧರಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಮೂಲ ಅಂಕಪಟ್ಟಿಗಳ ಪರಿಶೀಲನೆ ನಡೆಸಿದ್ದು, 26 ಮಂದಿ ನಕಲಿ ಅಂಕಪಟ್ಟಿಗಳನ್ನು ನೀಡಿದ್ದಾರೆ. ಅಭ್ಯರ್ಥಿಗಳು ನೀಡಿರುವ ಅಂಕಪಟ್ಟಿಯನ್ನು ಇಲಾಖೆಯಲ್ಲಿರುವ ದಾಖಲೆಗಳೊಂದಿಗೆ ಹೋಲಿಕೆ ಮಾಡಿ, ನಕಲಿ ಅಂಕಪಟ್ಟಿ ಎಂದು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

ಕಲಾ ವಿಭಾಗದಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದು, ಸೇವೆಗೆ ಆಯ್ಕೆಯಾಗುವಾಗ ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಉತ್ತೀರ್ಣರಾಗಿರುವ ಅಂಕಪಟ್ಟಿಗಳನ್ನು ನೀಡಿರುವ ಕುತೂಹಲಕರ ಪ್ರಕರಣಗಳು ತನಿಖೆ ಸಂದರ್ಭದಲ್ಲಿ ಕಂಡು ಬಂದಿವೆ. ಕೆಲವೊಂದು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದಾಗ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು ಎಂದು ತಿಳಿಸಲಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಕಲಾ ವಿಭಾಗದ ಅಭ್ಯರ್ಥಿಗಳು, ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿರುವ ನಕಲಿ ಅಂಕಪಟ್ಟಿ ಸಲ್ಲಿಸುತ್ತಾರೆ ಎಂದು ವಿವರಿಸಿದರು.

ಹಿಂದೆಲ್ಲ ವರ್ಷಕ್ಕೆ 5-6 ನಕಲಿ ಅಂಕಪಟ್ಟಿ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆದರೆ, ಈಚೆಗೆ ಸ್ವಲ್ಪ ಜಾಸ್ತಿಯಾಗಿದೆ. ನೇಮಕಾತಿ ಪ್ರಾಧಿಕಾರ ಅಥವಾ ಸಂಬಂಧಪಟ್ಟ ಇಲಾಖೆಯವರು ಆಯ್ಕೆಯಾಗಿರುವ ಅಭ್ಯರ್ಥಿಗಳ ಮೂಲ ಅಂಕಪಟ್ಟಿಗಳನ್ನು ಕಳುಹಿಸಿದರೆ, ಪಿಯು ಇಲಾಖೆಯಲ್ಲಿ ಇರುವ ದಾಖಲೆಗಳೊಂದಿಗೆ ಹೋಲಿಕೆ ಮಾಡಿ ಆ ಅಂಕಪಟ್ಟಿ ನಕಲಿಯೋ, ಅಸಲಿಯೋ ಎಂದು ತಿಳಿಸಲಾಗುತ್ತದೆ ಎಂದರು.

ಅಂಕಗಳೇ ಮಾನದಂಡ: ಗ್ರಾಮ ಲೆಕ್ಕಾಧಿಕಾರಿಗಳ ಆಯ್ಕೆಗೆ ದ್ವಿತೀಯ ಪಿಯುಸಿಯಲ್ಲಿ ಗಳಿಸಿರುವ ಅಂಕಗಳೇ ಮಾನದಂಡ. ಸಂದರ್ಶನವೂ ಇರುವುದಿಲ್ಲ. ಪಿಯುಸಿಯಲ್ಲಿ ಕಡಿಮೆ ಅಂಕಗಳನ್ನು ಪಡೆದಿರುವ ಅಭ್ಯರ್ಥಿಗಳು ನಕಲಿ ಅಂಕಪಟ್ಟಿಯಲ್ಲಿ ಹೆಚ್ಚಿನ ಅಂಕಗಳನ್ನು ನಮೂದಿಸಿ ವಾಮಮಾರ್ಗದ ಮೂಲಕ ಆಯ್ಕೆಯಾಗಿರುವುದು ತನಿಖೆಯಿಂದ ಗೊತ್ತಾಗಿದೆ.

ಬೆಳಕಿಗೆ ಬಂದಿದ್ದು ಹೇಗೆ?: ಉಡುಪಿ ಜಿಲ್ಲೆಯಲ್ಲಿ 2013ನೇ ಸಾಲಿನಲ್ಲಿ 24 ಮಂದಿ ಗ್ರಾಮ ಲೆಕ್ಕಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಈ ಪೈಕಿ 19 ಮಂದಿ ಸೇವೆಗೆ ಹಾಜರಾಗಿದ್ದರು. ಇವರಲ್ಲಿ 8 ಮಂದಿ ನಕಲಿ ಅಂಕಪಟ್ಟಿ ನೀಡಿದ್ದಾರೆ. ಸೇವೆಗೆ ಹಾಜರಾಗದೆ ಇರುವ 5 ಮಂದಿ ಸಹ ನಕಲಿ ಅಂಕಪಟ್ಟಿ ಮೂಲಕ ಆಯ್ಕೆಯಾಗಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು ತಿಳಿಸಿದರು.

ಆಯ್ಕೆಯಾಗಿರುವ ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಶೇ 60ರಷ್ಟು ಅಂಕ ಪಡೆದಿದ್ದರೆ, ಪಿಯುಸಿಯಲ್ಲಿ ಶೇ 90ರಷ್ಟು ಅಂಕ ಪಡೆದಿದ್ದಾರೆ. ಎರಡು ವರ್ಷದಲ್ಲಿ ಇಷ್ಟೊಂದು ಸುಧಾರಣೆಯಾಗಲು ಸಾಧ್ಯವೇ ಎಂಬ ಅನುಮಾನ ಬಂತು. ನಂತರ ಮೂಲ ಅಂಕಪಟ್ಟಿಗಳನ್ನು ಪರಿಶೀಲನೆಗಾಗಿ ಪಿಯು ಇಲಾಖೆಗೆ ಕಳುಹಿಸಲಾಯಿತು. ಪರಿಶೀಲನೆ ನಂತರ 13 ಮಂದಿ ನಕಲಿ ಅಂಕಪಟ್ಟಿಗಳನ್ನು ನೀಡಿರುವುದು ಖಚಿತವಾಗಿದೆ ಎಂದು ವಿವರಿಸಿದರು.

ನಕಲಿ ಅಂಕಪಟ್ಟಿಗಳನ್ನು ನೀಡಿ ಸೇವೆಗೆ ಹಾಜರಾಗಿದ್ದ 8 ಮಂದಿಯನ್ನು ಈಗಾಗಲೇ ಸೇವೆಯಿಂದ ವಜಾ ಮಾಡಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ರಾಜೀನಾಮೆ:  2011ನೇ ಸಾಲಿನಲ್ಲಿ ಆಯ್ಕೆಯಾಗಿದ್ದ 5 ಮಂದಿ ಹಾಗೂ 2012ನೇ ಸಾಲಿನಲ್ಲಿ ನೇಮಕಗೊಂಡಿದ್ದ 3 ಗ್ರಾಮ ಲೆಕ್ಕಾಧಿಕಾರಿಗಳು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಅವರೂ ಇದೇ ರೀತಿ ನಕಲಿ ಅಂಕಪಟ್ಟ್ನಿ ನೀಡಿರುವ ಸಾಧ್ಯತೆ ಇದೆ. ತನಿಖೆ ನಡೆಸಲಾಗುವುದು ಎಂದರು.

ಮೇಲಿನ ಐದು ಜಿಲ್ಲೆಗಳ ಹಾಗೆ ಬೇರೆ ಜಿಲ್ಲೆಗಳಲ್ಲೂ ಇದೇ ರೀತಿ ಗ್ರಾಮ ಲೆಕ್ಕಾಧಿಕಾರಿಗಳು ನಕಲಿ ಅಂಕಪಟ್ಟಿಗಳನ್ನು ನೀಡಿರುವ ಶಂಕೆ ಇದೆ. ಮುಂದಿನ ದಿನಗಳಲ್ಲಿ ಬೇರೆ ಜಿಲ್ಲಾಧಿಕಾರಿಗಳಿಂದಲೂ ಪರಿಶೀಲನೆಗಾಗಿ ಅಂಕಪಟ್ಟಿಗಳು ಬರಬಹುದು ಎಂದು ಪಿಯು ಇಲಾಖೆ ಮೂಲ ತಿಳಿಸಿದೆ.

ಮೂಲ ಅಂಕಪಟ್ಟಿ ಕಳುಹಿಸಿ
ಸರ್ಕಾರದ ನಿಯಮಾಳಿ ಪ್ರಕಾರ ಮೂಲ ಅಂಕಪಟ್ಟಿಗಳನ್ನು ಕಳುಹಿಸಿದರೆ ಮಾತ್ರ ಅಸಲಿಯೋ, ನಕಲಿಯೋ ಎಂದು ಪರಿಶೀಲಿಸಲಾಗುತ್ತದೆ. ಆದ್ದರಿಂದ ಯಾವುದೇ ನೇಮಕಾತಿ ಪ್ರಾಧಿಕಾರ ಅಥವಾ ಇಲಾಖೆಯವರು ಪರಿಶೀಲನೆಗಾಗಿ ಅಂಕಪಟ್ಟಿಗಳನ್ನು ಕಳುಹಿಸುವಾಗ ಜೆರಾಕ್ಸ್ ಪ್ರತಿಗಳನ್ನು ಕಳುಹಿಸಬಾರದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.