ADVERTISEMENT

ನಗಣ್ಯ ಪಾತ್ರಕ್ಕೆ ಜೀವ ತುಂಬಿದ ‘ಹಾಸ್ಯಗಾರ’

ಬಡಗುತಿಟ್ಟು ಯಕ್ಷಗಾನದ ಅ‍ಪ್ರತಿಮ ಕಲಾವಿದ ಕೃಷ್ಣ ಪರಮಯ್ಯ ವಿಧಿವಶ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 16:00 IST
Last Updated 1 ಜೂನ್ 2018, 16:00 IST
ಕೃಷ್ಣ ಹಾಸ್ಯಗಾರ
ಕೃಷ್ಣ ಹಾಸ್ಯಗಾರ   

ಹೊನ್ನಾವರ (ಉತ್ತರ ಕನ್ನಡ ಜಿಲ್ಲೆ): ಸಂಪ್ರದಾಯ, ಶಾಸ್ತ್ರಗಳನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದ ಕಾರಣ ಹೊನ್ನಾವರ ತಾಲ್ಲೂಕಿನ ಕರ್ಕಿಯ ‘ಹಾಸ್ಯಗಾರ ಯಕ್ಷಗಾನ ಮೇಳ’ಕ್ಕೆ ‘ಮಡಿ ಮೇಳ’ ಎಂಬ ಅಭಿದಾನವಿತ್ತು. ಅದನ್ನು ಮುನ್ನಡೆಸಿಕೊಂಡು ಬರುತ್ತಿದ್ದ, ವೈಶಿಷ್ಟ್ಯಪೂರ್ಣ ‘ಹಾಸ್ಯಗಾರ ಪರಂಪರೆ’ಯನ್ನು ಹುಟ್ಟುಹಾಕಿದ ವಂಶದ ಕುಡಿಯೇ ಕೃಷ್ಣ ಪರಮಯ್ಯ ಹಾಸ್ಯಗಾರ.

ಯಕ್ಷಗಾನ ಪ್ರಸಂಗದಲ್ಲಿ ನಗಣ್ಯ ಎಂದು ಭಾವಿಸಲಾಗಿದ್ದ ಸಣ್ಣ ಸಣ್ಣ ಪಾತ್ರಗಳಿಗೂ ಅವರು ಹೊಸ ಭಾಷ್ಯ ಬರೆದು ಪ್ರೇಕ್ಷಕರ ಮುಂದೆ ಪ್ರಯೋಗದ ಹೊಸ ಸಾಧ್ಯತೆಗಳನ್ನು ತೆರೆದಿಟ್ಟರು.

1926ರ ಜನವರಿ 28ರಂದು ಕರ್ಕಿಯ ಹಾಸ್ಯಗಾರ ಕಲಾ ಕುಟುಂಬದಲ್ಲಿ ಜನಿಸಿದ ಕೃಷ್ಣ, ಹೊನ್ನಾವರದ ಸೇಂಟ್ ಥಾಮಸ್ ಪ್ರೌಢಶಾಲೆಯಲ್ಲಿ ಹಲವು ವರ್ಷ ಕಲಾ ಶಿಕ್ಷಕರಾಗಿದ್ದರು. ತಮ್ಮ ವೃತ್ತಿಯ ಜೊತೆಗೇ ಯಕ್ಷಗಾನ ಹಾಗೂ ಮಣ್ಣಿನ ವಿಗ್ರಹ ತಯಾರಿಸುವ ಹವ್ಯಾಸವನ್ನೂ ಪೋಷಿಸಿಕೊಂಡು ಬಂದರು. ಶಿಕ್ಷಕರಾಗಿ ನಿವೃತ್ತಿಯಾದ ನಂತರ ಎರಡು ದಶಕಗಳಿಗೂ ಹೆಚ್ಚು ಕಾಲ ಕಲಾಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು.

ADVERTISEMENT

ಅಪ್ರತಿಮ ಮುಖವರ್ಣಿಕೆ ಕಲೆಯನ್ನು ಸಿದ್ಧಿಸಿಕೊಂಡಿದ್ದ ಅವರು ಸಿಂಹ, ಪ್ರೇತ, ಬೇತಾಳ ಪಾತ್ರಗಳ ಸೃಜನಶೀಲ ಪ್ರಯೋಗಗಳ ಮೂಲಕ ಯಕ್ಷಗಾನ ಪ್ರಿಯರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ. ‘ಜಾಂಬವತಿ ಕಲ್ಯಾಣ’ ಪ್ರಸಂಗದ ಸಿಂಹ, ‘ಗದಾಯುದ್ಧ’ ಪ್ರಸಂಗದ ಪ್ರೇತದ ಪಾತ್ರ ಕೃಷ್ಣ ಹಾಸ್ಯಗಾರ ಅವರ ಹೆಸರಿಗೆ ಅನ್ವರ್ಥಕದಂತಿವೆ. ಈ ಪಾತ್ರಗಳ ಜೊತೆಗೆ ಹಾಸ್ಯ, ರಾಕ್ಷಸ ಪಾತ್ರಗಳಲ್ಲೂ ಸೈ ಎನಿಸಿಕೊಂಡಿದ್ದ ಅವರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ವೃತ್ತಿ ಮೇಳಗಳ ಕಲಾವಿದರಾಗಿಯೂ ಕಾರ್ಯ ನಿರ್ವಹಿಸಿದ್ದರು.

ನಾಡಿನಾದ್ಯಂತ ತಮ್ಮ ಅಪ್ರತಿಮ ಪ್ರತಿಭೆಯನ್ನು ಪ್ರದರ್ಶಿಸಿ ಯಕ್ಷಗಾನ ರಂಗದ ಶ್ರೀಮಂತಿಕೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಅವರು ಕಲಾ ಪ್ರದರ್ಶನಗಳಲ್ಲಿ ಪ್ರಸಾಧನ ಕಲಾವಿದರಾಗಿಯೂ ಇತರ ಕಲಾವಿದರಿಗೆ ನೆರವಾಗುತ್ತಿದ್ದರು. ಅವರಿಗೆ ರಾಜ್ಯ ಯಕ್ಷಗಾನ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.
– ಎಂ.ಜಿ.ಹೆಗಡೆ

‘ಯಕ್ಷಗಾನವನ್ನೇ ಆರಾಧಿಸಿದ್ದರು’
ಕೃಷ್ಣ ಹಾಸ್ಯಗಾರ ಅವರು ಕರ್ಕಿಯ ಹಾಸ್ಯಗಾರ ಮನೆತನದ ಹಿರಿಯ ತಲೆಮಾರಿನ ಉತ್ತಮ ಕಲಾವಿದರಲ್ಲಿ ಒಬ್ಬರು. ಸಂಪ್ರದಾಯದ ಚೌಕಟ್ಟಿನೊಳಗೆ ಹೊಸತನವನ್ನು ಹುಟ್ಟುಹಾಕಿದ ಅವರು ತಮ್ಮ ವೈಯಕ್ತಿಕ ಬದುಕಿನಲ್ಲಿ ಶಿಸ್ತು, ಆರೋಗ್ಯ ಕಾಪಾಡಿಕೊಂಡು ಯಕ್ಷಗಾನವನ್ನು ಆರಾಧಿಸಿದರು ಎನ್ನುತ್ತಾರೆ ಅವರ ಸಂಬಂಧಿಯೂ ಆಗಿರುವ ಹೈಕೋರ್ಟ್‌ ವಕೀಲ ಕೃಷ್ಣಮೂರ್ತಿ ಹಾಸ್ಯಗಾರ.

ಅಂತ್ಯಕ್ರಿಯೆ
ಹೊನ್ನಾವರ:
ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಬಲ್ಲಾರಪುರದಲ್ಲಿ ಗುರುವಾರ ರಾತ್ರಿ ನಿಧನರಾದ ಯಕ್ಷಗಾನ ಕಲಾವಿದ, ಹೊನ್ನಾವರ ತಾಲ್ಲೂಕಿನ ಕರ್ಕಿಯ ಕೃಷ್ಣ ಪರಮಯ್ಯ ಹಾಸ್ಯಗಾರ (92) ಅವರ ಅಂತ್ಯಕ್ರಿಯೆ ಶುಕ್ರವಾರ ನೆರವೇರಿತು.

ಅವರು ಕೆಲವು ವರ್ಷಗಳಿಂದ ಮಹಾರಾಷ್ಟ್ರದಲ್ಲಿದ್ದ ಮಗನ ಮನೆಯಲ್ಲಿಯೇ ವಾಸ ಇದ್ದರು. ಅವರಿಗೆ ನಾಲ್ವರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.